×
Ad

ಮೊಯ್ದಿನ್ ಬಾವಾ ಬೆಂಬಲಿಗರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆ ಆರೋಪ: ದೂರು-ಪ್ರತಿ ದೂರು ದಾಖಲು

Update: 2023-05-10 11:18 IST

ಮಂಗಳೂರು: ಮಾಜಿ ಶಾಸಕ, ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರಿಗೆ  ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. 

ಹಲ್ಲೆಗೊಳಗಾದ ನಿಝಾಮ್ ಹಾಗೂ ಹಶೀರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.  

ನಿನ್ನೆ (ಮಂಗಳವಾರ) ರಾತ್ರಿ ಮೊಯ್ದಿನ್ ಬಾವಾ ಅವರು ಕಾರಿನಲ್ಲಿ ಮತದಾರರಿಗೆ ಹಂಚಲು ಹಣ ತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರನ್ನು ತಡೆದಾಗ, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. 

ಈ ಸಂಬಂಧ ಎರಡೂ ಗುಂಪಿನವರು ದೂರು -ಪ್ರತಿದೂರು ಸಲ್ಲಿಸಲು ಬಜ್ಪೆ ಪೊಲೀಸ್ ಠಾಣೆಗೆ ಬಳಿ ಬಂದಾಗ ಅಲ್ಲಿ ಮೊಯ್ದಿನ್ ಬಾವಾ ಬೆಂಬಲಿಗರ ತಂಡ  ಕಾಂಗ್ರೆಸ್ ಕಾರ್ಯಕರ್ತರಾದ ನಿಝಾಮ್ ಗುರುಪುರ ಮತ್ತು ಹಶೀರ್ ಕೈಕಂಬ ಎಂಬವರಿಗೆ ಮೊಯ್ದಿನ್ ಬಾವಾ ಅವರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಹಿಂದೆ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಕಾರು ಚಾಲಕನಾಗಿದ್ದ ನಿಝಾಮ್,  ಇತ್ತೀಚೆಗಷ್ಟೇ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರಿಗೆ ಬೆಂಬಲ ಪ್ರಕಟಿಸಿದ್ದರು.  

ಪ್ರತಿ ದೂರು ದಾಖಲು: 

ಮೊಯ್ದಿನ್ ಬಾವಾ ಅವರಿಗೆ ನಿಝಾಮ್ ಮತ್ತು ಸಂಗಡಿಗರು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ  ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ಸದ್ಯ ಮೊಯ್ದಿನ್ ಬಾವಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂ‍ದು ತಿಳಿದು ಬಂದಿದೆ. 

Similar News