×
Ad

ಕರಾರು ಪತ್ರದೊಂದಿಗೆ ಚುನಾವಣಾ ಬೆಟ್ಟಿಂಗ್: 5 ಲಕ್ಷ ರೂಪಾಯಿ ಪೊಲೀಸ್ ವಶಕ್ಕೆ

Update: 2023-05-12 23:46 IST

ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದು ಕಡೆ ಸೋಲು ಗೆಲುವಿನ ಬಗ್ಗೆ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕೂಡ ಹೆಚ್ಚಾಗಿದೆ. 

ಇದರ ನಡುವೆ ಮೈಸೂರಿನ ಹೆಚ್‍ಡಿ ಕೋಟೆಯಲ್ಲಿ ಬೆಟ್ಟಿಂಗ್ ಕಟ್ಟಿದ್ದ ಐದು ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಹೆಚ್‍ಡಿ ಕೋಟೆಯಲ್ಲಿ ಇಬ್ಬರು ವ್ಯಕ್ತಿಗಳು ತಲಾ ಐದು ಲಕ್ಷ ರೂಪಾಯಿ ಬೆಟ್ಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್, ‘ಎಂತಹ ದಿಟ್ಟತನ ಡಾಕ್ಯುಮೆಂಟ್ ಶೀಟ್‍ನಲ್ಲಿ ಚುನಾವಣಾ ಬೆಟ್ಟಿಂಗ್ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ 5 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಬೆಟ್ಟಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕರಾರು ಪತ್ರದಲ್ಲಿ ಏನಿದೆ?: ತಮ್ಮ ಟ್ವೀಟ್‍ನಲ್ಲಿ ಬೆಟ್ಟಿಂಗ್ ಕುರಿತ ಜಪ್ತಿ ಮಾಡಿದ ಹಣ ಹಾಗೂ ಡಾಕ್ಯುಮೆಂಟ್ ಶೀಟ್‍ನ್ನು ಅಲೋಕ್ ಕುಮಾರ್ ಹಂಚಿಕೊಂಡಿದ್ದಾರೆ. ಹೆಗ್ಗಡದೇವನಕೋಟೆ ತಾಲೂಕಿನ ಕಸಬಾ ಹೋಬಳಿಯ ಜಯರಾಮ ನಾಯಕ ಮತ್ತು ಬಿಕೆ ಶಿವರಾಜು, ಅಂತರಸಂತೆ ಹೋಬಳಿಯ ಪ್ರಕಾಶ ಸೇರಿಕೊಂಡು ಎಲೆಕ್ಷನ್ ಬೆಟ್ಟಿಂಗ್ ಕಟ್ಟಿಕೊಂಡಿದ್ದರು. 

ಜಯರಾಮ ನಾಯಕ ಕಾಂಗ್ರೆಸ್ ಪರವಾಗಿ ಐದು ಲಕ್ಷ ಹಾಗೂ ಪ್ರಕಾಶ, ಶಿವರಾಜು ಇಬ್ಬರು ಸೇರಿಕೊಂಡು ಜೆಡಿಎಸ್ ಪರವಾಗಿ 5 ಲಕ್ಷ ರೂಪಾಯಿ ಬಾಜಿ ಕಟ್ಟಿದ್ದಾರೆ. ಈ ಹಣವನ್ನು ಎಲೆಕ್ಟ್ರಿಕಲ್  ಅಂಗಡಿಯೊಂದರ ಮಾಲಕರ ಹತ್ತಿರ ಇಟ್ಟಿದ್ದು, ಗೆದ್ದ ವ್ಯಕ್ತಿಗಳು ಆ ಹಣವನ್ನು ಪಡೆಯಬಹುದಾಗಿದೆ. ಒಂದು ವೇಳೆ ಬಿಜೆಪಿ ಗೆಲುವು ಸಾಧಿಸಿದರೆ, ಅವರವರ ಹಣವನ್ನೇ ಅವರುಗಳೇ ಪಡೆಯಲು ಒಪ್ಪಿರುತ್ತಾರೆ ಎಂದು ಕರಾರು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
 

Similar News