ಸುದೀಪ್ ಪ್ರಚಾರ ಮಾಡಿದ ಹಲವು ಕಡೆ ಸೋಲು: ಬೊಮ್ಮಾಯಿ ಪ್ರತಿಕ್ರಿಯೆ ಏನು?

Update: 2023-05-13 19:17 GMT

ಬೆಂಗಳೂರು:  ನಟ ಸುದೀಪ್ ಈ ಬಾರಿ ರಾಜ್ಯದಾದ್ಯಂತ ಸಂಚರಿಸಿ ಹಲವಾರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ಆದರೆ, ಸುದೀಪ್ ಪ್ರಚಾರ ಮಾಡಿದ ಬಹುತೇಕ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದು, ಈ ಬಗ್ಗೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದಾರೆ. 

ಇಂದು ರಾತ್ರಿ ರಾಜಭವನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಲಿಗೆ ಅವರನ್ನು ಹೊಣೆ ಅನ್ನುವುದು ಸರಿಯಲ್ಲ‌. ನಾನು ಈಗಾಗಲೇ ಹೇಳಿದ್ದೇನೆ. ಈ ಸೋಲಿಗೆ ನಾನೇ ಹೊಣೆ ಹೊರುತ್ತೇನೆ' ಎಂದರು.

ನಾವು ಹಿಂದೆ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲಿಗೆ ಹಲವಾರು ರೀತಿಯ ಕಾರಣಗಳು ಇವೆ. ಅವುಗಳನ್ನು ಎಲ್ಲವನ್ನೂ ಕುಳಿತು ಚರ್ಚೆ ಮಾಡುತ್ತೇವೆ. ಏನು ವ್ಯತ್ಯಾಸ ಆಗಿದೆ, ಎಲ್ಲಿ ಏನಾಗಿದೆ ಎಂದು ಚರ್ಚಿಸಿ, ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.

''ಸೋಲಿನ ಜವಾಬ್ದಾರಿ ನಾನೇ ಹೊರುತ್ತೇನೆ''

ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ. ಜನರ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಪಕ್ಷಕ್ಕೆ ಆದ ಹಿನ್ನೆಡೆಯ ಜವಾಬ್ದಾರಿ ನಾನೇ ಹೊರುತ್ತೇನೆ. ಕಳೆದ ಬಾರಿ ನನಗೆ 104 ಸೀಟು ಬಂದಿತ್ತು. ಈ ಬಾರಿ ಪರ್ಸೆಂಟೇಜ್ ಜಾಸ್ತಿ ಬಂದರು, ಕಡಿಮೆ ಸೀಟು ಬಂದಿವೆ.ಏನೇ ಆಗಲಿ ಸೋಲು ಸೋಲು. ನಾವು ಇದರ ಬಗ್ಗೆ ಆತ್ಮವಲೋಕನ ಮಾಡಿ, ಎಲ್ಲಿ ತಪ್ಪು ಆಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ' ಎಂದರು. 

Similar News