×
Ad

ಹೈಕಮಾಂಡ್ ನಿಂದ ಸಿಎಂ ಆಯ್ಕೆ: ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಣಯ

Update: 2023-05-14 20:47 IST

ಬೆಂಗಳೂರು, ಮೇ 14: ‘ಶಾಸಕಾಂಗ ಪಕ್ಷದ ನಾಯಕ’ನ ಆಯ್ಕೆ ಸಂಬಂಧ ಹೊಸದಿಲ್ಲಿಯಿಂದ ಕರ್ನಾಟಕಕ್ಕೆ ಆಗಮಿಸಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಮೂವರು ವೀಕ್ಷಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಶಾಸಕರು, ವಿಧಾನ ಪರಿಷತ್, ಸಂಸದರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. 

ರವಿವಾರ ಸಂಜೆ ಇಲ್ಲಿನ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಶಾಸಕಾಂಗ ಪಕ್ಷದ ಸಭೆಗೆ ನೂತನವಾಗಿ ಆಯ್ಕೆಯಾಗಿದ್ದ ಬಹುತೇಕ ಶಾಸಕರು ಪಾಲ್ಗೊಂಡಿದ್ದು, ತಮ್ಮ ಅಭಿಪ್ರಾಯವನ್ನು ನೀಡಿದರು. ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರಕ್ಕೆ ಬಿಡಲು ಶಾಸಕಾಂಗ ಪಕ್ಷವು ಸರ್ವಾನುಮತದ ನಿರ್ಧರಿಸಿದೆ’ ಎಂದು ಪಕ್ಷ ತಿಳಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಕಾಂಗ್ರೆಸ್ ಪಕ್ಷ, ಒಟ್ಟು 135 ಸ್ಥಾನ ಗಳಿಸಿ ಬಹುಮತ ಪಡೆದಿದ್ದು, ನೂತನ ಸರಕಾರ ರಚನೆಯ ಅಂತಿಮ ಹಂತದ ಕಸರತ್ತು ನಡೆಸಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಶಾಸಕರಿಂದ ಅಭಿಪ್ರಾಯ ಪಡೆಯಲಾಯಿತು.

ಎಐಸಿಸಿಯಿಂದ ವೀಕ್ಷಕರಾಗಿ ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ, ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾ ಆಗಮಿಸಿದ್ದು ಅವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಆ ಪೈಕಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದು ಇವರಲ್ಲೇ ಒಬ್ಬರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಣೆ ಮಾಡಲಿದ್ದು, ಅವರೇ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೇ 17 ಅಥವಾ 18ರಂದು ವರೆಗೆ ನೂತನ ಮುಖ್ಯಮಂತ್ರಿ ಪದಗ್ರಹಣ ಮಾಡುವ ಸಾಧ್ಯತೆಗಳಿವೆ.

ನೂತನ ಶಾಸಕರ ಜೊತೆ ಅಭಿಪ್ರಾಯ ಸಂಗ್ರಹಿಸುವ ಎಐಸಿಸಿ ವೀಕ್ಷಕರು, ಆ ಮಾಹಿತಿಯನ್ನು ದಿಲ್ಲಿಯ ಹೈಕಮಾಂಡ್‍ಗೆ ಒಪ್ಪಿಸಲಿದ್ದು, ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಮುಖಂಡರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಏರಲಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ ಸಿದ್ದರಾಮಯ್ಯ ಬೆಂಬಲಿಗರು ಸೇರಿ ಕುರುಬ ಹಾಗೂ ಇನ್ನಿತರ ಸಮುದಾಯದ ಮುಖಂಡರು ಸಿದ್ದರಾಮಯ್ಯನವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮಿ ಹಾಗೂ ಸ್ಫಟಿಕಪುರ ಮಠದ ಶ್ರೀ ನಂಜಾವಧೂತ ಸ್ವಾಮಿ ಬಹಿರಂಗವಾಗಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷವು, ಇದೀಗ ಮುಖ್ಯಮಂತ್ರಿ ಆಯ್ಕೆಯಲ್ಲಿ ಸವಾಲನ್ನು ಎದುರಿಸುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪರಿಶ್ರಮ ಹಾಕಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಹಜವಾಗಿ ಸಿಎಂ ಆಕಾಂಕ್ಷಿಯಾಗಿದ್ದಾರೆ. ಇದೇ ವೇಳೆ ಹೆಚ್ಚು ಶಾಸಕರ ಒಲವು ಹೊಂದಿರುವ ಸಿದ್ದರಾಮಯ್ಯನವರು ಆಕಾಂಕ್ಷಿಯಾಗಿದ್ದು ಇಬ್ಬರ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.

Similar News