16 ಮತಗಳಿಂದ ಗೆದ್ದು ಸೋತ ಸೌಮ್ಯಾರೆಡ್ಡಿ; ಅದೇ ಹೆಸರಿನ ಪಕ್ಷೇತರ ಅಭ್ಯರ್ಥಿಗೆ ಸಿಕ್ಕ ಮತಗಳೆಷ್ಟು ಗೊತ್ತೇ?

Update: 2023-05-15 05:33 GMT

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ವಿರುದ್ಧ ಸೋಲು ಅನುಭವಿಸಿದ ಸೌಮ್ಯಾರೆಡ್ಡಿಯವರ ಹೆಸರಿನ ಪಕ್ಷೇತರ ಅಭ್ಯರ್ಥಿ ಕ್ಷೇತ್ರದಲ್ಲಿ 320 ಮತಗಳನ್ನು ಪಡೆದಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ.

"ಮತದಾರರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಮತ್ತು ಪುತ್ರಿಯ ರಾಜಕೀಯ ಅವಕಾಶ ಹಾಳುಗೆಡವುವ ಉದ್ದೇಶದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಸೌಮ್ಯಾ ಎ ರೆಡ್ಡಿ ಎಂಬುವವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು" ಎಂದು ಸೌಮ್ಯಾರೆಡ್ಡಿಯವರ ತಂದೆ ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಆಪಾದಿಸಿದ್ದಾರೆ.

"ನಾನು ಆನೇಕಲ್ ತಾಲೂಕು ಇಂದ್ಲವಾಡಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಪಂಚಾಯ್ತಿ ಸದಸ್ಯೆ" ಎಂದು ಪಕ್ಷೇತರ ಅಭ್ಯರ್ಥಿಯಾಗಿದ್ದ ಸೌಮ್ಯಾ ಎ. ರೆಡ್ಡಿ ಹೇಳಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಣಕ್ಕೆ ಇಳಿಸಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಹೇಗಿರುತ್ತದೆ ಎಂಬ ಅನುಭವ ಗಳಿಸುವ ಉದ್ದೇಶದಿಂದ ತಾವು ಸ್ವ ಇಚ್ಛೆಯಿದ ಕಣಕ್ಕೆ ಇಳಿದದ್ದಾಗಿ ಅವರು ಸಮುಜಾಯಿಷಿ ನೀಡಿದ್ದಾರೆ.

"ನಾನು ಹುಟ್ಟಿಬೆಳೆದ ಆನೇಕಲ್ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಅಲ್ಲಿ ನಾನು ಸ್ಪರ್ಧಿಸುವಂತಿಲ್ಲ. ಆದ್ದರಿಂದ ನಾನು ಜಯನಗರಕ್ಕೆ ಬಂದೆ. ನಾನು ಗೆಲ್ಲುವುದಿಲ್ಲ ಎಂದು ಗೊತ್ತಿತ್ತು. ನಾನು ಪ್ರಚಾರವೂ ಮಾಡಲಿಲ್ಲ ಅಥವಾ ಎಣಿಕೆ ದಿನ ಎಣಿಕೆ ಕೇಂದ್ರಕ್ಕೂ ಹೋಗಿರಲಿಲ್ಲ. ಮನೆಯಲ್ಲೇ ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸುತ್ತಿದ್ದೆ" ಎಂದು ಯುವ ತರಬೇತುದಾರರಾಗಿರುವ ಮತ್ತು ಈವೆಂಟ್ ಮ್ಯಾನೇಜರ್ ಆಗಿರುವ ರೆಡ್ಡಿ ವಿವರಿಸಿದರು.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಸೌಮ್ಯಾರೆಡ್ಡಿ 190 ಅಂಚೆ ಮತಗಳು ಸೇರಿದಂತೆ 57781 ಮತ ಪಡೆದಿದ್ದರೆ, ಬಿಜೆಪಿ 500 ಅಂಚೆ ಮತ ಸೇರಿ 57797 ಮತ ಪಡೆದಿದೆ. ತುರುಸಿನ ಪೈಪೋಟಿ ಇದ್ದ ಕ್ಷೇತ್ರದಲ್ಲಿ ಹಲವು ಬಾರಿ ಮರು ಎಣಿಕೆ ನಡೆಸಲಾಯಿತು. ಎಣಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ರಾಮಲಿಂಗಾರೆಡ್ಡಿ ಆಪಾದಿಸಿದ್ದಾರೆ.

"ವೀಕ್ಷಕರು ಬಂದು ಏಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜತೆ ಮಾತನಾಡಬೇಕಿತ್ತು? ಸೂರ್ಯ ಎಣಿಕೆ ಕೇಂದ್ರಕ್ಕೆ ಆಗಮಿಸುವ ಯಾವ ಅಗತ್ಯವೂ ಇರಲಿಲ್ಲ. ಎಣಿಕೆ ನಡೆಸಿದ ವಿಷಯದಲ್ಲಿ ಹಲವು ವಿವಾದಗಳಿವೆ. ಎಣಿಕೆಯ ವೇಳೆ ಇವಿಎಂ ಡಾಟ ಪ್ರತಿಗಳನ್ನು ಪರಿಶೀಲನೆಗಾಗಿ ನಮಗೆ ನೀಡಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ನ್ಯಾಯಾಲಯದ ರಜೆ ಅವಧಿ ಮುಗಿದ ಬಳಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ" ಎಂದು ಸ್ಪಷ್ಟಪಡಿಸಿದರು.

Similar News