ರಾಜೀನಾಮೆ ನೀಡಿ ವಜಾಗೊಳಿಸುವ ಆದೇಶದಿಂದ ತಪ್ಪಿಸಿಕೊಂಡ ಅಡ್ಡಂಡ ಕಾರ್ಯಪ್ಪ: ರಮೇಶ್ ಬಾಬು ಟೀಕೆ

Update: 2023-05-15 15:40 GMT

ಬೆಂಗಳೂರು, ಮೇ 15: ‘ರಂಗಾಯಣ ಸಂಸ್ಥೆಯನ್ನು ಮಲಿನಗೊಳಿಸಿ ರಾಜ್ಯದ ಸಾಂಸ್ಕೃತಿಕ ಹಿರಿಮೆಗೆ ಕಳಂಕ ತಂದಿದ್ದ ಅಡ್ಡಂಡ ಕಾರ್ಯಪ್ಪ ಪಾಪ ಪ್ರಜ್ಞೆಯ ಕಾರಣಕ್ಕಾಗಿ ಸಂಸ್ಥೆಗೆ ರಾಜೀನಾಮೆ ನೀಡಿ ವಜಾಗೊಳಿಸುವ ಆದೇಶದಿಂದ ತಪ್ಪಿಸಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗ ಉಪಾಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. 

ಸೋಮವಾರ ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ‘ರಂಗ ಸಮಾಜ ಶಿಫಾರಸ್ಸು ಇಲ್ಲದೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರಕಾರ ನೇಮಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿರುವುದು ಸರಿಯಿದೆ’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ರಾಜಕೀಯ ಕಾರಣಗಳಿಗಾಗಿ ಸರಕಾರಿ, ಅರೆ ಸರಕಾರಿ ಹಾಗೂ ಅನುದಾನಿತ ಪ್ರಾಧಿಕಾರಗಳಿಗೆ ಮತ್ತು ಸಾಂಸ್ಕೃತಿಕ ಸಂಘಟನೆಗಳಿಗೆ ರಾಜ್ಯದ ಬಿಜೆಪಿ ಸರಕಾರ ಬಿಜೆಪಿ ಪ್ರೇರಿತ ಕಾರ್ಯಕರ್ತರನ್ನು ಮತ್ತು ಬಿಜೆಪಿ ಪರವಾದ ಸ್ವಯಃ ಘೋಷಿತ ವಿಚಾರವಾದಿಗಳನ್ನು ನೇಮಕ ಮಾಡಿದ್ದು, ನೇಮಕಗೊಂಡಿರುವ ಅಧ್ಯಕ್ಷರು ಮತ್ತು ಸದಸ್ಯರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಜನಾದೇಶ ಕಾಂಗ್ರೆಸ್ ಪರವಾಗಿ ಬಂದಿದ್ದು, ಬಿಜೆಪಿ ಮೂಲಕ ನೇಮಕಗೊಂಡಿರುವ ಎಲ್ಲರೂ ರಾಜೀನಾಮೆ ನೀಡುವುದರ ಮೂಲಕ ಹೊಸ ಸರಕಾರ ಹೊಸ ನೇಮಕಾತಿ ಮಾಡಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಕೆಲವು ಅರೆ ನ್ಯಾಯಿಕ ಆಯೋಗ ಮತ್ತು ಪ್ರಾಧಿಕಾರಗಳಿಗೆ ಹಿಂದಿನ ಬಿಜೆಪಿ ಸರಕಾರ ರಾಜಕೀಯ ನೇಮಕಾತಿಗಳನ್ನು ಮಾಡಿದ್ದು, ಪಕ್ಷದ ಮೂಲಕ ನೇಮಕವಾಗಿರುವ ಈ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ರಾಜೀನಾಮೆ ನೀಡದೇ ಹೋದಲ್ಲಿ, ಕಾಂಗ್ರೆಸ್ ಪಕ್ಷವು ನಿಯಮಾನುಸಾರ ಇಂತಹ ನೇಮಕಾತಿಗಳನ್ನು ರದ್ದುಪಡಿಸಿ ಹೊಸ ನೇಮಕಾತಿಗಳನ್ನು ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

ಸರಕಾರದ ಅಥವಾ ಅರೆ ಸರಕಾರದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ರಾಜ್ಯದಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ನಿಯಮ ಬಾಹಿರವಾಗಿ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸಿದ್ದರೆ, ಇದರ ಮೇಲೆ ಹೊಸ ಸರಕಾರವು ವಿಶೇಷ ತನಿಖೆ ನಡೆಸಲಿದೆ. ಯಾವುದೇ ಅಕ್ರಮಗಳಲ್ಲಿ ಅಧಿಕಾರಿ ಭಾಗಿಯಾಗಿದ್ದರೇ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

Similar News