ಉಡುಪಿ, ಕಾಪು ಕ್ಷೇತ್ರಗಳಲ್ಲಿ ವಿಜಯಿ ಅಭ್ಯರ್ಥಿಗಳ ಮತಗಳ ಅಂತರದಲ್ಲಿ ಏರಿಕೆ

Update: 2023-05-15 16:53 GMT

ಉಡುಪಿ, ಮೇ 15: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದ ಟ್ರೆಂಡ್‌ಗೆ ವ್ಯತಿರಿಕ್ತವಾದ ಫಲಿತಾಂಶವನ್ನು ನೀಡಿದೆ.  ಇಲ್ಲಿ ಸತತ ಎರಡನೇ ಬಾರಿಗೆ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಪಾರಮ್ಯ ಮೆರೆದು ಕ್ಲೀನ್ ಸ್ವೀಪ್‌ಗೆ ಕಾರಣರಾದರೂ, ಉಡುಪಿ ಮತ್ತು ಕಾಪು ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಉಳಿದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆಯಲ್ಲಿ ಗಣನೀಯ  ಕುಸಿತ ಕಂಡುಬಂದಿದೆ.

ಉಡುಪಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಪಕ್ಷದ ವರಿಷ್ಠರು ಹೊಸ ಪ್ರಯೋಗಕ್ಕೆ ಮುಂದಾದರೂ, ಅದು ಅವರಿಗೆ ತಿರುಗೇಟು ನೀಡಿಲ್ಲ. ಐದರಲ್ಲಿ ನಾಲ್ಕು ಕ್ಷೇತ್ರಗಳಿಗೆ ಹೊಸಮುಖಗಳನ್ನು ಮೊದಲ ಬಾರಿ ಮತದಾರರ ಮುಂದೆ ಒಡ್ಡಿದರೂ ನಾಲ್ಕು ಮಂದಿಯೂ ನಿರಾಯಾಸ ಗೆಲುವು ಸಾಧಿಸುವ ಮೂಲಕ ಕರಾವಳಿಯಲ್ಲಿ ಪಕ್ಷದ ಮೇಲುಗೈಯನ್ನು ಮುಂದುವರಿಸಿದರು.

ಜಿಲ್ಲೆಯಲ್ಲಿ ಹಳೆ ಅಭ್ಯರ್ಥಿಯೇ ಸ್ಪರ್ಧಿಸಿದ ಏಕೈಕ ಕ್ಷೇತ್ರವಾದ ಕಾರ್ಕಳದಲ್ಲಿ ಮೂರು ಬಾರಿಯ ಶಾಸಕ ವಿ.ಸುನಿಲ್‌ಕುಮಾರ್ ಉಳಿದವರಿಗೆ ವ್ಯತಿರಿಕ್ತವಾಗಿ ಕೆಲವು ಆತಂಕದ ಕ್ಷಣಗಳನ್ನು ಕಳೆದು ಅಂತಿಮವಾಗಿ ಜಯಶಾಲಿಯಾಗಿ ಮೂಡಿಬಂದರು. 2018ರಲ್ಲಿ ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅವರನ್ನು  42,566 ಮತಗಳ ಅಂತರದಿಂದ ಹಿಮ್ಮೆಟ್ಟಿಸಿದ್ದ ಸುನಿಲ್‌ ಕುಮಾರ್ ಅವರು, ಈ ಬಾರಿ ಕಾಂಗ್ರೆಸ್‌ನ ಹೊಸಮುಖವಾದ ಮುನಿಯಾಲು ಉದಯ ಶೆಟ್ಟಿ ವಿರುದ್ಧ ಗೆಲುವಿಗಾಗಿ ನಿಕಟ ಹೋರಾಟ ನೀಡಿ ಅಂತಿಮವಾಗಿ 4,602 ಮತಗಳ ಅಂತರದಿಂದ ಗೆಲುವಿನ ನಗು ಬೀರಿದರು.

ವಿ.ಸುನಿಲ್ ಕುಮಾರ್ ಈ ಬಾರಿ ಪಡೆದಿರುವುದು ಒಟ್ಟು ಮತಗಳ ಶೇ.49.11ರಷ್ಟನ್ನು (77028). ಅದೇ 2018ರಲ್ಲಿ ಅವರು ಪಡೆದಿರುವ ಮತಗಳ ಪ್ರಮಾಣ ಶೇ.62.52 (91,245). ಅಂದರೆ ಅವರ ಮತ ಗಳಿಕೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ.

ಇನ್ನು ಸುನಿಲ್ ಕುಮಾರ್ ವಿರುದ್ಧ ಸ್ಪರ್ಧಿಸಿರುವ ಮುನಿಯಾಲು ಉದಯ ಶಟ್ಟಿ ಪಡೆದಿದ್ದು 72,426. ಒಟ್ಟು ಮತದ ಶೇ.46.18ರಷ್ಟು. ಅಂದರೆ ಇಬ್ಬರ ನಡುವಿನ ಅಂತರ ಶೇ.2.8ರಷ್ಟು ಮಾತ್ರ. ಇದೇ ಸುನಿಲ್ ವಿರುದ್ಧ 2018ರಲ್ಲಿ ಸ್ಪರ್ಧಿಸಿದ್ದ ಗೋಪಾಲ ಭಂಡಾರಿ ಪಡೆದಿದ್ದು 48,679 ಮತಗಳನ್ನು ಮಾತ್ರ. ಮತಗಳ ಪ್ರಮಾಣ ಶೇ.33.36ರಷ್ಟು. ಇಬ್ಬರ ನಡುವೆ ಇದ್ದ ಮತಗಳ ಅಂತರ 42,566ರಷ್ಟು. 

ಉಡುಪಿ ಕ್ಷೇತ್ರ:  ಈ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಕಡೆಯಿಂದಲೂ ಹೊಸಬರೇ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಯಶಪಾಲ್ ಸುವರ್ಣರಿಗೆ ರಾಜಕೀಯ ಅಪರಿಚಿತವಲ್ಲ. ಈಗಾಗಲೇ ಎರಡು ಅವಧಿಗೆ ಅವರು ನಗರಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಉದ್ಯಮ ಕ್ಷೇತ್ರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್‌ರಿಗೆ ಸಕ್ರಿಯ ರಾಜಕೀಯ ಚಟುವಟಿಕೆಗೆ ಹೊಸತಾಗಿತ್ತು.

ಆದರೂ ಯಶ್‌ಪಾಲ್ ಸುವರ್ಣ, ಕಳೆದ ಸಲದ ಟಿಕೇಟ್ ವಂಚಿತ ಶಾಸಕ ಕೆ.ರಘುಪತಿ ಭಟ್ ಪಂಚಾಂಗವನ್ನು ಭದ್ರಮಾಡಿ ಹದಗೊಳಿಸಿ ಕೊಟ್ಟ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಮುಟ್ಟಾಗಿಸಿದರು. ಒಟ್ಟು 1.64ಲಕ್ಷ ಮತಗಳಲ್ಲಿ  97,079 ಮತಗಳನ್ನು ಪಡೆದ ಯಶ್ಪಾಲ್, ಶೇ.58.46ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡರು. 2018ರಲ್ಲಿ ರಘುಪತಿ ಭಟ್ 84,946 ಮತಗಳನ್ನು ಪಡೆದಿದ್ದು, ಇದು ಒಟ್ಟು ಮತಗಳ ಶೇ.52.31ರಷ್ಟಾಗಿದೆ. ಈ ಮೂಲಕ ಯಶ್‌ಪಾಲ್ ಈ ಬಾರಿ ಶೇ.6ರಷ್ಟು ಮತಗಳನ್ನು ಹೆಚ್ಚುವರಿಯಾಗಿ ಪಡೆದಂತಾಗಿದೆ.

ಕಾಂಗ್ರೆಸ್‌ನ ಪ್ರಸಾದ್‌ರಾಜ್ ಕಾಂಚನ್ ಅವರು 64,303 ಮತಗಳನ್ನು ಪಡೆದಿದ್ದಾರೆ. ಇದು ಒಟ್ಟು ಮತಗಳ ಶೇ.38.72ರಷ್ಟಾಗಿದೆ. ಇದಕ್ಕೆ ಹೋಲಿಸಿದರೆ 2018ರಲ್ಲಿ ರಘುಪತಿ ಭಟ್ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಪ್ರಮೋದ್ ಮಧ್ವರಾಜ್ (ಈಗ ಬಿಜೆಪಿಯಲ್ಲಿದ್ದಾರೆ) ಪಡೆದ ಮತಗಳು 72,902. ಹಾಗೂ ಮತಪ್ರಮಾಣ ಶೇ.44.89. ಇಲ್ಲಿ ಕಾಂಗ್ರೆಸ್ ಪಕ್ಷದ ಮತಗಳಿಸಿ ಶೇ.6ರಷ್ಟು ಕಡಿಮೆಯಾದಂತಾಗಿದೆ. 

ಕಾಪು ಕ್ಷೇತ್ರ: ಈ ಬಾರಿ ಉತ್ತಮ, ಸುಧಾರಿತ ಸಾಧನೆ ತೋರಿದ ಮತ್ತೊಬ್ಬ ಅಭ್ಯರ್ಥಿ ಕಾಪು ಕ್ಷೇತ್ರದ ಸುರೇಶ್ ಶೆಟ್ಟಿ ಗುರ್ಮೆ. ಇದೇ ಮೊದಲ ಬಾರಿ ಸ್ಪರ್ಧಿಸುವ ಅವಕಾಶ ಪಡೆದ ಗುರ್ಮೆ ಪಕ್ಷ ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ಕಾಪು ಕ್ಷೇತ್ರದ ಹಳೆ ಹುಲಿಯಾದ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಅವರನ್ನು ಅವರು ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸತತ ಎರಡನೇ ಬಾರಿಗೆ ಪರಾಭವಗೊಳಿಸಿದರು.

ಒಟ್ಟು ಮತದಾನವಾದ 1.50ಲಕ್ಷ ಮತಗಳಲ್ಲಿ ಸುರೇಶ್ ಶೆಟ್ಟಿ ಗುರ್ಮೆ ಅವರು 80,559 ಮತಗಳನ್ನು ಪಡೆಯುವ ಮೂಲಕ ಒಟ್ಟು ಮತಗಳಲ್ಲಿ ಶೇ.53.23ರಷ್ಟು ಮತಗಳನ್ನು ಪಡೆದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಾಲಾಜಿ ಮೆಂಡನ್ ಅವರು 75,893 ಮತಗಳನ್ನು ಪಡೆದು ಮತದ ಒಟ್ಟಾರೆ ಪ್ರಮಾಣ ಶೇ.52.54ರಷ್ಟಿತ್ತು. ಆದರೆ ಗುರ್ಮೆ ಮೊದಲ ಬಾರಿಯೇ ಇದನ್ನು ಮೀರಿ ಶೇ.0.6ರಷ್ಟು ಹೆಚ್ಚುವರಿ ಮತಗಳನ್ನು ಪಡೆದರು.

ಕಳೆದ ಬಾರಿಯಂತೆ ಈ ಬಾರಿಯೂ ಸ್ಪರ್ಧಿ ವಿಜಯದ ನಿರೀಕ್ಷೆಯಲ್ಲಿದ್ದ ಸೊರಕೆ ಪಡೆದಿದ್ದು 67,555 ಮತಗಳನ್ನು. ಇದು ಒಟ್ಟು ಮತದ ಶೇ.44.63 ರಷ್ಟಿದೆ. ಕಳೆದ ಬಾರಿ ಲಾಲಾಜಿ ವಿರುದ್ಧ 63,976 ಮತ ಪಡೆದಿದ್ದ ಸೊರಕೆ ಗಳಿಸಿದ ಮತಗಳ ಪ್ರಮಾಣ ಶೇ.44.29. ಮತ ಗಳಿಕೆಯಲ್ಲಿ ಅಲ್ಪ ಏರಿಕೆ ಕಂಡರೂ ಗೆಲುವು ಈ ಬಾರಿಯೂ ಸೊರಕೆಗೆ ಗಗನಕುಸುಮವೇ ಆಯಿತು. ಈ ಬಾರಿ ಗುರ್ಮೆ 13,004 ಮತಗಳ ಅಂತರದ ಜಯ ಪಡೆದರು.

ಕುಂದಾಪುರ ಕ್ಷೇತ್ರ: ಕಳೆದ ಬಾರಿಯಂತೆ ಈ ಬಾರಿಯೂ ಅತ್ಯಧಿಕ ಅಂತರದ ಜಯ ದಾಖಲಾದ ಕ್ಷೇತ್ರ ಕುಂದಾಪುರ. ಇಲ್ಲಿ ಐದು ಬಾರಿಯ ಅಜೇಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸ್ಥಾನಕ್ಕೆ ಬಂದ ಅವರ ನಿಕಟವರ್ತಿ ಕಿರಣ್‌ಕುಮಾರ್ ಕೊಡ್ಗಿ, ಹಾಲಾಡಿ ಅವರನ್ನು ಮೀರಿಸಲಾಗದಿ ದ್ದರೂ ಅತ್ಯಧಿಕ ಅಂತರದ ಜಯ ದಾಖಲೆಯನ್ನು ಕುಂದಾಪುರ ಕ್ಷೇತ್ರಕ್ಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಳೆದ ಬಾರಿ ಹೊಸಬರಾದ ಕಾಂಗ್ರೆಸ್‌ನ ಅಭ್ಯರ್ಥಿ ರಾಕೇಶ್ ಮಲ್ಲಿ, ಹಾಲಾಡಿ ಅವರ ಎದುರು ಹೀನಾಯ ಸೋಲು ಅನುಭವಿಸಿದರೆ, ಈ ಬಾರಿ ಬಿಜೆಪಿಯಿಂದ ಮೊದಲ ಬಾರಿ ಟಿಕೇಟ್ ಪಡೆದ ಕಿರಣ್‌ಕುಮಾರ್ ಕೊಡ್ಗಿ ಅವರು ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರನ್ನು  ಏಕಪಕ್ಷೀಯವಾಗಿ ಹಿಮ್ಮೆಟ್ಟಿಸಿದರು.

ಕುಂದಾಪುರದಲ್ಲಿ ಒಟ್ಟು ಮತದಾನವಾದ 1.65 ಲಕ್ಷ ಮತಗಳಲ್ಲಿ  ಕಿರಣ್ ಕುಮಾರ್ ಕೊಡ್ಗಿ ಒಬ್ಬರೇ ಪಡೆದ ಮತಗಳು 1.02 ಲಕ್ಷ. ಇದು ಒಟ್ಟು ಮತದ ಶೇ.61.16 ಆಗಿದೆ. 2018ರಲ್ಲಿ ಹಾಲಾಡಿ ಪಡೆದ ಮತಗಳ ಸಂಖ್ಯೆ 1.03ಲಕ್ಷ. ಅದು ಒಟ್ಟು ಮತಗಳ ಶೇ.65.20 ಆಗಿತ್ತು. ಹೀಗಾಗಿ ಹಾಲಾಡಿ ಅವರ ಶೇ. ಮತಗಳ ಪ್ರಮಾಣದಲ್ಲಿ ಕೊಡ್ಗಿ ಶೇ.4ರಷ್ಟು ಹಿನ್ನಡೆ ಕಂಡರು.

ಇನ್ನು ಕಾಂಗ್ರೆಸ್ ಮಟ್ಟಿಗೆ ಹೇಳುವುದಾದರೆ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ದಕ್ಷಿಣ ಕನ್ನಡ ಮೂಲದ ರಾಕೇಶ್ ಮಲ್ಲಿ ಅವರಿಗಿಂತ ಉತ್ತಮ  ಸಾಧನೆ ತೋರಿದರು. ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿದ್ದು, ಇದು ಒಟ್ಟು ಮತಗಳ ಶೇ.36.35ರಷ್ಟಿತ್ತು. ಆದರೆ 2018ರಲ್ಲಿ ರಾಕೇಶ್ ಮಲ್ಲಿ ಕೇವಲ 47,029 ಮತ ಪಡೆದಿದ್ದು, ಇದು ಒಟ್ಟು ಮತಗಳ ಶೇ. 29.64 ಆಗಿತ್ತು. ಈ ಬಾರಿ ಕೊಡ್ಗಿ ಅವರು ಹೆಗ್ಡೆ ಅವರನ್ನು 41,556 ಮತಗಳಿಂದ ಸೋಲಿಸಿದರೆ, 2018ರಲ್ಲಿ ಹಾಲಾಡಿ, ಮಲ್ಲಿ ಅವರನ್ನು 56,405 ಮತಗಳಿಂದ ಹಿಮ್ಮೆಟ್ಟಿಸಿದ್ದರು.

ಬೈಂದೂರು ಕ್ಷೇತ್ರ: ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇದ್ದ ಕ್ಷೇತ್ರ ಬೈಂದೂರಿನಲ್ಲೂ ಬಿಜೆಪಿಯ ಜೈತ್ರಯಾತ್ರೆ ನಿರಾತಂಕವಾಗಿ ಮುಂದುವರಿಯಿತು. ಇಲ್ಲಿ ಏಳನೇ ಬಾರಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಅವರು, ಬಿಜೆಪಿಯಿಂದ ಮೊದಲ ಬಾರಿ ಸ್ಪರ್ಧಿಸಲು ಅವಕಾಶ ಪಡೆದ ಸಂಘಪರಿವಾರದ ಪರಿಚಾರಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಂದ ಸತತ ಎರಡನೇ ಸೋಲು ಅನುಭವಿಸಿದರು.

ಬೈಂದೂರು ಕ್ಷೇತ್ರದಲ್ಲಿ ಈ ಬಾರಿ 1.83 ಲಕ್ಷ ಮಂದಿ ಚಲಾಯಿಸಿದ ಮತಗಳಲ್ಲಿ ಗುರುರಾಜ್ ಅವರು 98,628 ಮತಗಳನ್ನು ಪಡೆದರು. ಇದು ಒಟ್ಟು ಮತದಾನವಾದ ಮತಗಳ ಶೇ.53.12ರಷ್ಟಿದೆ. 2018ರಲ್ಲಿ ಬಿಜೆಪಿಯ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಬಿದ್ದ ಮತಗಳಲ್ಲಿ  96029 ಮತಗಳನ್ನು ಅಂದರೆ ಶೇ.54.34ರಷ್ಟು ಮತಗಳನ್ನು ಪಡೆದಿದ್ದರು.

ಕಾಂಗ್ರೆಸ್‌ನ ಗೋಪಾಲ ಪೂಜಾರಿ ಅವರು ಈ ಬಾರಿ ಪಡೆದಿದ್ದು 82,475 ಮತಗಳನ್ನು. ಅಂದರೆ ಒಟ್ಟಾರೆ ಮತಗಳ ಶೇ.44.42 ರಷ್ಟು. ಆದರೆ 2018ರಲ್ಲಿ ಗೋಪಾಲ ಪೂಜಾರಿ ಅವರು ಸುಕುಮಾರ್ ಶೆಟ್ಟಿ ಎದುರು 71636 ಮತಗಳನ್ನು ಪಡೆದಿದ್ದರೂ ಮತ ಪ್ರಮಾಣ ಶೇ.40.54 ಆಗಿತ್ತು. ಈ ಬಾರಿ 16,153 ಮತಗಳ ಅಂತರಿಂದ ಸೋತಿರುವ ಗೋಪಾಲ ಪೂಜಾರಿ, ಕಳೆದ ಬಾರಿ ಸುಕುಮಾರ್ ಶೆಟ್ಟಿ ಕೈಯಲ್ಲಿ 24,393 ಮತಗಳಿಂದ ಸೋಲುಂಡಿದ್ದರು.

ಹೀಗೆ ಪಡೆದ ಮತ ಪ್ರಮಾಣದಲ್ಲಿ  ವ್ಯತ್ಯಾಸವಾಗಿದ್ದರೂ, ಉಡುಪಿ ಮತ್ತು ಕಾಪುವಿನ ಬಿಜೆಪಿ ಸ್ಪರ್ಧಿಗಳು ಮಾತ್ರ ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರುವಲ್ಲಿ ಯಶಸ್ವಿಯಾದರು.

Similar News