‘ಗೌರಿ’ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ ಪ್ರಶಸ್ತಿ

Update: 2023-05-15 16:42 GMT

ಬೆಂಗಳೂರು, ಮೇ 15: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಕವಿತಾ ಲಂಕೇಶ್ ಅವರ ‘ಗೌರಿ’ ಸಾಕ್ಷ್ಯಚಿತ್ರವು 2023ರ ಮಾಂಟ್ರಿಯಲ್‍ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದೆ.

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‍ರವರ ಕುರಿತು ಕವಿತಾ ಲಂಕೇಶ್ ಅವರು ‘ಗೌರಿ’ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಕ್ಷ್ಯಚಿತ್ರವು 2017ರಲ್ಲಿ ರಾಜಕೀಯ ಹತ್ಯೆಗೊಳಗಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಕುರಿತು ಬೆಳಕು ಚೆಲ್ಲುತ್ತದೆ. ‘ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಅವರು ಉತ್ಸಾಹದಿಂದ ನಿರ್ದೇಶಿಸಿದ ಮತ್ತು ನಿರೂಪಿಸಿದ ಡಾಕ್ಯು-ಥ್ರಿಲ್ಲರ್ ಇದಾಗಿದೆ’ ಎಂದು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.

ಆಂಸ್ಟರ್‍ಡ್ಯಾಮ್‍ನ ಫ್ರೀ ಪ್ರೆಸ್ ಅನ್‍ಲಿಮಿಟೆಡ್ ‘ಗೌರಿ’ ಸಾಕ್ಷ್ಯಚಿತ್ರವನ್ನು ನಿರ್ಮಾಣಕ್ಕೆ ಕೈಜೋಡಿಸಿದೆ. ಈ ಸಂಸ್ಥೆಯು ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಗಳಿಗೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು, ಆ ಪೈಕಿ ನಾಲ್ಕು ಚಿತ್ರಗಳನ್ನು ಫ್ರೀ ಪ್ರೆಸ್ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಅವರ ಕುರಿತ ತಮ್ಮ ಸಾಕ್ಷ್ಯಾಚಿತ್ರವೂ ಒಂದಾಗಿದೆ.

ಫ್ರೀ ಪ್ರೆಸ್ ಅನ್ಲಿಮಿಟೆಡ್ ಸಂಸ್ಥೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾದ ಯಾವುದೇ ಹಸ್ತಕ್ಷೇಪವಿಲ್ಲದೆ ಪ್ರತಿಯೊಬ್ಬರಿಗೂ ಅಭಿಪ್ರಾಯ ಹೊಂದುವ, ಸ್ವೀಕರಿಸುವ, ಯಾವುದೇ ಮಾಧ್ಯಮಗಳ ಮೂಲಕ ಅಭಿವ್ಯಕ್ತಪಡಿಸುವ ಮತ್ತು ಪಸರಿಸುವ ಆರ್ಟಿಕಲ್ 19 ಅನ್ನು ಎತ್ತಿ ಹಿಡಿಯುತ್ತದೆ ಎಂದು ಪ್ರಕಟನೆ ತಿಳಿಸಿದೆ.

Similar News