ಪಟ್ಟು ಸಡಿಲಿಸದ ಡಿಕೆಶಿ: ಕಗ್ಗಂಟಾದ ಸಿಎಂ ಆಯ್ಕೆ ಸಮಸ್ಯೆ

Update: 2023-05-16 02:32 GMT

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ನೂತನ ಮುಖ್ಯಮಂತ್ರಿ ಆಯ್ಕೆ ಸಮಸ್ಯೆ ಕಗ್ಗಂಟಾಗಿದೆ.

ರಾಜ್ಯದ ಸಿಎಂ ಹುದ್ದೆ ಬಗೆಗಿನ ತಮ್ಮ ಬೇಡಿಕೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ; ಈ ಬಗ್ಗೆ ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಲು ಮಂಗಳವಾರ ದೆಹಲಿಗೆ ತೆರಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಹೈಮಾಂಡ್ ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟರೂ ಅದನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೇಂದ್ರೀಯ ವೀಕ್ಷಕರ ಸಮ್ಮುಖದಲ್ಲಿ ನಡೆದ ರಹಸ್ಯ ಮತದಾನದಲ್ಲಿ ಡಿ.ಕೆ.ಶಿವಕುಮಾರ್ ಅವರಿಗಿಂತ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ವ್ಯಕ್ತವಾಗಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
"ರಹಸ್ಯ ಮತದಾನ ನಡೆದಿದೆ. ವೀಕ್ಷಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸುವ ಮುನ್ನ, ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇದೆ ಎಂದು ಆ ಬಣಕ್ಕೆ ಹೇಗೆ ಗೊತ್ತಾಗಲು ಸಾಧ್ಯ ಎನ್ನುವುದು ನನಗೆ ಸ್ಪಷ್ಟವಾಗಬೇಕು" ಎಂದು ಅಭಿಪ್ರಾಯಪಟ್ಟರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರ ಶೇಕಡ ೬೦ ಶಾಸಕರು ಒಲವು ವ್ಯಕ್ತಪಡಿಸಿದ್ದಾರೆ ಹಾಗೂ ಡಿಕೆಶಿವಕುಮಾರ್ ಪರ ಶೇಕಡ ೪೦ರಷ್ಟು ಮಂದಿ ಶಾಸಕರು ಇರುವುದು ಗೊತ್ತಾಗಿದೆ ಎಂದು ವದಂತಿಗಳಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಹೈಕಮಾಂಡ್ ನಿರ್ಧಾರದ ಬಗ್ಗೆ ಡಿಕೆಶಿ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಸೋಮವಾರ ಸಂಜೆ ದೆಹಲಿಗೆ ನೀಡಲು ಉದ್ದೇಶಿಸಿದ್ದ ಭೇಟಿಯನ್ನು ಅನಾರೋಗ್ಯದ ಕಾರಣ ನೀಡಿ ದಿಢೀರನೇ ರದ್ದುಪಡಿಸಿದ್ದರು. ಆದರೆ ಮತ್ತೊಬ್ಬ ಆಕಾಂಕ್ಷಿ ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ, ಪಕ್ಷದ ಅಧ್ಯಕ್ಷರನ್ನು ಮತ್ತು ಇತರ ಮುಖಂಡರನ್ನು ಭೇಟಿ ಮಾಡುವ ಸಲುವಾಗಿ ಸೋಮವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Similar News