ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣ: ಆರೋಪ ಪಟ್ಟಿ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಿಂದ ವಜಾ
ಬೆಂಗಳೂರು, ಮೇ 16: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಎನ್‍ಐಎ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು(ಗಲಭೆಗೆ ಕಾರಣರಾಗಿದ್ದ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಸಾರ್ವಜನಿಕ ಆಸ್ತಿ ನಷ್ಟ ಆರೋಪ ಸಂಬಂಧ ಎನ್‍ಐಎ ವಿಶೇಷ ನ್ಯಾಯಾಲಯಲ್ಲಿ ನಡೆಯುತ್ತಿರುವ ತನಿಖೆ ಮತ್ತು ಈ ಸಂಬಂಧದ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ಮೊಹಮ್ಮದ್ ಖಲೀಲ್ ಅಹ್ಮದ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ವಿರುದ್ಧದ ಆರೋಪವು ಕೇವಲ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಗೆ ಸೇರ್ಪಡೆಗೊಳ್ಳಲಿದೆ. ಆದರೆ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಗೆ ಅನ್ವಯಿಸುವುದಿಲ್ಲ. ಆದರೂ, ಈ ಎರಡೂ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು.
ಎನ್‍ಐಎ ಪರ ವಕೀಲರು ವಾದ ಮಂಡಿಸಿ, ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ಒಳಪಡುವುದಾಗಿದ್ದರೂ, ಅರ್ಜಿದಾರರು ಹೈಕೋರ್ಟ್‍ನಲ್ಲಿ ವಿಚಾರಣೆಗೊಳಪಡಿಸುವುದಕ್ಕೆ ಮುಂದಾಗಿದ್ದಾರೆ. ಆರೋಪ ಪಟ್ಟಿಯ ಪ್ರಕಾರ, ಎಲ್ಲ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧದ ಕಾಯ್ದೆಗೆ ಒಳಪಡಲಿದೆ ಎಂಬುದು ಗೊತ್ತಾಗಲಿದೆ. ಜತೆಗೆ, ಘಟನೆಯಲ್ಲಿ ಕನಿಷ್ಠ ನಾಲ್ಕು ಜನ ಜೀವ ಕಳೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.