ರಾಜ್ಯದಲ್ಲಿ ಸಮ್ಮಿಶ್ರ ಸರಕಾರ?

Update: 2023-05-19 04:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಪೂರ್ಣ ಬಹುಮತವನ್ನು ಉಡುಗೊರೆಯಾಗಿ ಕೊಟ್ಟಿದ್ದರೂ, ಸಮ್ಮಿಶ್ರ ಸರಕಾರ ರಾಜ್ಯದ ಜನತೆಯ ಹಣೆಯಲ್ಲಿ ಬರೆದಂತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಜಗ್ಗಾಟ ಹಗ್ಗ ಕಡಿಯುವ ಹಂತಕ್ಕೆ ತಲುಪಲಿದೆಯೇ ಎನ್ನುವ ಆತಂಕ ಜನತೆಯನ್ನು ಕಾಡುತ್ತಿದೆ. ಯಾರೇ ಮುಖ್ಯಮಂತ್ರಿಯಾಗಿರಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಬದಲಿಗೆ ಡಿಕೆಶಿ-ಸಿದ್ದರಾಮಯ್ಯ ಸಮ್ಮಿಶ್ರ ಸರಕಾರವೇ ಅಂತಿಮವಾಗುವ ಸೂಚನೆಗಳು ಕಾಣುತ್ತಿವೆ. ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಘೋಷಣೆಯನ್ನು ಮುಂದೆ ಹಾಕುತ್ತಿರುವುದು ಗಮನಿಸಿದರೆ, ‘ಕಗ್ಗಂಟು’ ಬಿಡಿಸಲಾಗದಷ್ಟು ಬಿಗಿಯಾಗಿರುವುದು ಸ್ಪಷ್ಟವಾಗುತ್ತಿದೆ.

ಭರ್ಜರಿ ಬಹುಮತ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಆಯ್ಕೆಯನ್ನು ಸುಲಭ ಮಾಡಬಹುದು ಎಂದು ಭಾವಿಸಲಾಗಿತ್ತು. ಸರಳ ಬಹುಮತವಾಗಿದ್ದರೆ, ‘ಆಪರೇಷನ್ ಕಮಲ’ದ ಭಯವಿತ್ತು. ಅಷ್ಟೇ ಅಲ್ಲ, ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಭಾಷಣವೊಂದರಲ್ಲಿ ‘‘ಅಗತ್ಯಕ್ಕಿಂತ ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಕೊಡಿ. ಯಾಕೆಂದರೆ, ಬೇರೆ ಪಕ್ಷದವರು ನಮ್ಮ ಶಾಸಕರನ್ನು ಕದ್ದೊಯ್ಯುವ ಅಪಾಯವಿದೆ’’ ಎಂದು ಮನವಿ ಮಾಡಿದ್ದರು. ಜನತೆ ಆ ಮನವಿಗೆ ತಲೆ ಬಾಗಿ ಅಗತ್ಯಕ್ಕಿಂತ ಹೆಚ್ಚೇ ಸ್ಥಾನಗಳನ್ನು ನೀಡಿದ್ದಾರೆ. ಫಲಿತಾಂಶಕ್ಕೆ ಒಂದು ದಿನ ಮೊದಲು ‘‘ಬಿ ಪ್ಲಾನ್ ಸಿದ್ಧವಿದೆ’ ಎಂದವರು ಕೂಡ, ಫಲಿತಾಂಶದ ಹೊಡೆತಕ್ಕೆ ಬಾಯಿ ಮುಚ್ಚಿ ಕೂತಿದ್ದಾರೆ. ಇಬ್ಬರು ನಾಯಕರು ಪಟ್ಟು ಬಿಡುವುದಿಲ್ಲ ಎನ್ನುವಾಗ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ವರಿಷ್ಠರು ನಿರ್ಧರಿಸಬೇಕು. ಫಲಿತಾಂಶ ಹೊರಬಿದ್ದು ಐದು ದಿನವಾದರೂ ಮುಖ್ಯಮಂತ್ರಿ ಆಯ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು, ಜನತೆಯ ಆದೇಶಕ್ಕೆ ಮಾಡುವ ಅಗೌರವ ಎನ್ನುವ ಅರಿವು ಕಾಂಗ್ರೆಸ್ ವರಿಷ್ಠರಿಗೂ ಇರಬೇಕು. 48-78 ಗಂಟೆಗಳಲ್ಲಿ ನೂತನ ಸರಕಾರವನ್ನು ರಚನೆ ಮಾಡುವುದಾಗಿ ಕಾಂಗ್ರೆಸ್ ವರಿಷ್ಠರು ಈಗಾಗಲೇ ಭರವಸೆಯನ್ನು ನೀಡಿದ್ದಾರೆ. ಇದೀಗ ‘ಕಾಂಗ್ರೆಸ್ ಎಷ್ಟು ಗಂಟೆಗಳೊಳಗೆ ಸರಕಾರ ರಚಿಸುತ್ತದೆ?’ ಎಂಬ ಫಲಿತಾಂಶೋತ್ತರ ಹೊಸ ಸಮೀಕ್ಷೆಗಳನ್ನು ಮಾಧ್ಯಮಗಳು ನಡೆಸುವಂತಾಗಿದೆ.

ಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಯೂ ಈ ಹಿಂದೆ ಸಾಕಷ್ಟು ಸಮಯವನ್ನು ತೆಗೆದುಕೊಂಡಿರುವನ್ನು ಕಾಂಗ್ರೆಸ್ ವರಿಷ್ಠರು ಇಂದಿನ ಬೆಳವಣಿಗೆಗಳಿಗೆ ಸಮರ್ಥನೆಯಾಗಿ ನೀಡುತ್ತಿದ್ದಾರಾದರೂ, ಕಾಂಗ್ರೆಸ್‌ಗೆ ಬಿಜೆಪಿಯ ರಾಜಕಾರಣ ಯಾವ ಕಾರಣಕ್ಕೂ ಮಾದರಿಯಾಗಬಾರದು. ರಾಜ್ಯ ಕಾಂಗ್ರೆಸನ್ನು ಎರಡು ಶಕ್ತಿ ಕೇಂದ್ರಗಳು ನಿಯಂತ್ರಿಸುತ್ತಿರುವುದು ಹೊಸ ವಿಷಯವೇನೂ ಅಲ್ಲ. ತನ್ನಲ್ಲಿರುವ ಹಣ ಬಲ ಮತ್ತು ಜಾತಿ ಬಲದಿಂದ ಡಿಕೆಶಿ ರಾಜ್ಯ ಕಾಂಗ್ರೆಸ್‌ಗೆ ಅನಿವಾರ್ಯವಾದರೆ, ಜಾತಿ ಬಲದ ಜೊತೆಗೆ ಅನುಭವ, ಮುತ್ಸದ್ದಿತನದ ಕಾರಣಕ್ಕೆ ಸಿದ್ದರಾಮಯ್ಯ ಕೂಡ ಕಾಂಗ್ರೆಸ್‌ಗೆ ಅನಿವಾರ್ಯವಾಗಿದ್ದಾರೆ. ಸಿದ್ದರಾಮಯ್ಯ ಹೊರಗಿನಿಂದ ಬಂದವರೇ ಆಗಿದ್ದರೂ, ಅವರ ವರ್ಚಸ್ಸಿನ ಬಲದಿಂದ ರಾಜ್ಯ ಕಾಂಗ್ರೆಸ್ ಪುನರ್ನವೀಕರಣಗೊಂಡಿತು. ಸೂಕ್ತ ನಾಯಕತ್ವದ ಕೊರತೆ ಎದುರಿಸುತ್ತಿದ್ದಾಗ, ಕಾಂಗ್ರೆಸ್‌ನ ಚುಕ್ಕಾಣಿಯನ್ನು ಕೈಗೆತ್ತಿಕೊಂಡು, ಗಣಿರೆಡ್ಡಿಗಳ ವಿರುದ್ಧ ಬಳ್ಳಾರಿಗೆ ಬೃಹತ್ ಯಾತ್ರೆಯನ್ನು ಸಂಘಟಿಸಿದವರು ಸಿದ್ದರಾಮಯ್ಯ. ಅವರ ಪ್ರವೇಶದ ಜೊತೆ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಕೆಲಸ ಮಾಡತೊಡಗಿದರು. ಅವರ ರಾಜಕೀಯ ಹಿರಿತನ, ಅನುಭವ, ಮುತ್ಸದ್ದಿತನ ಕಾಂಗ್ರೆಸನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿತು. ಬಿಜೆಪಿಯೊಳಗಿನ ಭಿನ್ನಮತವೂ ಅದೇ ಸಂದರ್ಭದಲ್ಲಿ ಸ್ಫೋಟಗೊಂಡು ಕಟ್ಟಕಡೆಗೆ ಕಾಂಗ್ರೆಸ್ ಬಹುಮತದಿಂದ ಅಧಿಕಾರ ಹಿಡಿಯಿತು. ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಪ್ರಶ್ನೆಯೇ ಎದ್ದಿರಲಿಲ್ಲ. ಇಡೀ ರಾಜ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿತ್ತು ಮತ್ತು ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದರು. ಅವರ ಜನಪರ ಆಡಳಿತ ಮತ್ತೊಮ್ಮೆ ಕಾಂಗ್ರೆಸನ್ನು ಬಹುಮತದಿಂದ ಅಧಿಕಾರಕ್ಕೇರಿಸಲಿಲ್ಲ ಎನ್ನುವುದು ಇನ್ನೊಂದು ವಿಷಯ.

ಡಿ.ಕೆ. ಶಿವಕುಮಾರ್ ಅವರನ್ನು ಕೂಡ ಕಾಂಗ್ರೆಸ್ ನಿರ್ಲಕ್ಷಿಸುವಂತಿಲ್ಲ. ಗುಜರಾತ್‌ನಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಬಹುದಾಗಿದ್ದ ಕಾಂಗ್ರೆಸನ್ನು ಕರ್ನಾಟಕದಲ್ಲಿ ತಂದಿಟ್ಟು ಕಾಪಾಡಿದ್ದು ಡಿಕೆಶಿ. ಆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಇಂದಿಗೂ ಜೆಡಿಎಸ್‌ಗೆ ಹಂಚಿ ಹೋಗಬಹುದಾಗಿದ್ದ ದೊಡ್ಡ ಮಟ್ಟದ ಒಕ್ಕಲಿಗ ಮತಗಳನ್ನು ಹಿಡಿದಿಟ್ಟಿರುವುದು ಡಿ.ಕೆ.ಶಿವಕುಮಾರ್. ಕಾಂಗ್ರೆಸ್‌ಗೆ ತನ್ನ ಹಣ ಮತ್ತು ಜಾತಿಬಲದಿಂದ ರಾಜ್ಯದಲ್ಲಿ ಹಲವು ಬಾರಿ ನೆರವಾದರು. ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸಂದರ್ಭದಲ್ಲೂ ಡಿಕೆಶಿಯವರ ಪಾತ್ರವನ್ನು ಮರೆಯುವಂತಿಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅವರ ತನಿಖಾ ಸಂಸ್ಥೆಗಳು ಈ ಕಾರಣಕ್ಕೆ ಡಿಕೆಶಿಯ ಬೆನ್ನು ಬಿತ್ತು. ಅವರನ್ನು ಜೈಲಿಗೂ ತಳ್ಳುವಲ್ಲಿ ಅತ್ಯಾಸಕ್ತಿಯನ್ನು ವಹಿಸಿತ್ತು. ತನ್ನನ್ನು ಉಳಿಸಿಕೊಳ್ಳುವ ಅನಿವಾರ್ಯ ಸಂದರ್ಭದಲ್ಲಿ ಅವರು ಬಿಜೆಪಿಯ ಜೊತೆಗೆ ಕೈ ಜೋಡಿಸಿದ್ದರೆ ಅದು ಕಾಂಗ್ರೆಸ್‌ಗೆ ಭಾರೀ ನಷ್ಟವನ್ನುಂಟು ಮಾಡಿ ಬಿಡುತ್ತಿತ್ತು. ರಾಜ್ಯದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿಸುವುದು ಎಷ್ಟು ಅಗತ್ಯವೋ, ಪಕ್ಷದ ಹಿತಾಸಕ್ತಿಯನ್ನಿಟ್ಟುಕೊಂಡು ಡಿಕೆಶಿಯವರನ್ನು ಮುಖ್ಯಮಂತ್ರಿಯಾಗಿಸುವುದು ಕೂಡ ಕಾಂಗ್ರೆಸ್ ವರಿಷ್ಠರಿಗೆ ಅನಿವಾರ್ಯವಾಗಿದೆ. ಆದುದರಿಂದಲೇ, ಕಾಂಗ್ರೆಸ್ ವರಿಷ್ಠರ ಪಾಲಿಗೆ ಈ ಇಬ್ಬರು ನಾಯಕರು ‘ಅತ್ತ ಧರಿ ಇತ್ತ ಪುಲಿ’ ಆಗಿದ್ದಾರೆ.

ಈ ಪೈಪೋಟಿ ಚುನಾವಣಾ ಘೋಷಣೆಗೆ ಮೊದಲೇ ಕಾಂಗ್ರೆಸ್‌ನೊಳಗೆ ಬೆಳಕಿಗೆ ಬಂದಿತ್ತು. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಂಡ ಬೃಹತ್ ಸಮಾವೇಶ, ಮೇಕೆದಾಟು ಆಂದೋಲನದ ಡಿಕೆಶಿಯ ಪಾದಯಾತ್ರೆಗಳೆಲ್ಲವೂ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳಾಗಿ ತಮ್ನನ್ನು ಬಿಂಬಿಸಿಕೊಳ್ಳುವ ಸ್ಪರ್ಧೆಯ ಭಾಗವೇ ಆಗಿತ್ತು. ಈ ಬಾರಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯುವುದರ ಹಿಂದೆ ಸಿದ್ದರಾಮಯ್ಯರ ವರ್ಚಸ್ಸು, ಡಿಕೆಶಿಯ ಹಣ ಮತ್ತು ಸಂಘಟನೆ ಸಾಕಷ್ಟು ಕೊಡುಗೆಗಳನ್ನು ನೀಡಿವೆ. ಇದೇ ಸಂದರ್ಭದಲ್ಲಿ, ಬಿಜೆಪಿಯೊಳಗೆ ಆರೆಸ್ಸೆಸ್ ಮುಖಂಡ ಸಂತೋಷ್, ಪ್ರಹ್ಲಾದ್ ಜೋಶಿ ನಡೆಸಿದ ಹಸ್ತಕ್ಷೇಪವೂ ಕಾಂಗ್ರೆಸ್ ಬಹುಮತ ಪಡೆಯುವುದಕ್ಕೆ ಇನ್ನೊಂದು ಮುಖ್ಯ ಕಾರಣವಾಗಿದೆ ಎನ್ನುವುದನ್ನು ಮರೆಯಬಾರದು. ಬಹುಮತ ಪಡೆಯುವುದಕ್ಕೆ ಕಾರಣರಾದವರನ್ನೆಲ್ಲ ಮುಖ್ಯಮಂತ್ರಿ ಮಾಡುವುದಾದರೆ, ಸಂತೋಷ್, ಜೋಶಿ ಕೂಡ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಲು ಸ್ಪರ್ಧೆಗಿಳಿಯುವ ಅಪಾಯವಿದೆ.

ಇಬ್ಬರು ನಾಯಕರು ತಮ್ಮ ಪಟ್ಟು ಸಡಿಲಿಸುವುದು ಸದ್ಯಕ್ಕೆ ಅನಿವಾರ್ಯ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಒಂದೆರಡು ಹೆಜ್ಜೆಗಳನ್ನು ಹಿಂದಿಟ್ಟು , ಕಾಂಗ್ರೆಸನ್ನು ಮುಂದಕ್ಕೆ ದೂಡಬೇಕಾಗಿದೆ. ಪಕ್ಷದೊಳಗೆ ಇಬ್ಬರೂ ಬಲಾಢ್ಯರಾಗಿರುವುದರಿಂದ, ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಪಕ್ಷಗಳ ಸಮ್ಮಿಶ್ರ ಸರಕಾರ ಅನಿವಾರ್ಯ ಎನ್ನುವ ಸ್ಥಿತಿ ಇದೆ. ಇಬ್ಬರು ಮುಖ್ಯಮಂತ್ರಿ ಸ್ಥಾನವನ್ನು 50-50 ರೀತಿಯಲ್ಲಿ ಹಂಚಿಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳ ಬಳಿಕ ಡಿಕೆಶಿಯವರಿಗೆ ಅಧಿಕಾರವನ್ನು ಬಿಟ್ಟುಕೊಟ್ಟು ತಮ್ಮನ್ನು ರಾಷ್ಟ್ರ ರಾಜಕಾರಣಕ್ಕೆ ಮೀಸಲಾಗಿರಿಸಬೇಕು. ಹಾಗೆಯೇ ಡಿಕೆಶಿಯವರು ಮೊದಲ ಅರ್ಧ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕು.

ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದು ಸುಲಭದ ಸಂಗತಿಯಲ್ಲ. ಈ ಸಂದರ್ಭದಲ್ಲಿ ಕೇಂದ್ರದೊಂದಿಗೆ ಅನುದಾನಗಳಿಗಾಗಿ ದೊಡ್ಡ ಮಟ್ಟದ ಸಂಘರ್ಷ ನಡೆಸಬೇಕಾಗುತ್ತದೆ. ಈ ಸಂಘರ್ಷದ ನೇತೃತ್ವವನ್ನು ಹಿರಿಯರು, ಅನುಭವಿಗಳು, ಮುತ್ಸದ್ದಿಯೂ ಆಗಿರುವ ಸಿದ್ದರಾಮಯ್ಯ ಅವರಿಗೇ ವಹಿಸುವುದು ರಾಜ್ಯಕ್ಕೂ, ಪಕ್ಷಕ್ಕೂ ಒಳಿತು. ಡಿಕೆಶಿಯ ಮೇಲಿರುವ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಯಾವಾಗ ಬೇಕಾದರೂ ಅವರನ್ನು ಬ್ಲಾಕ್‌ಮೇಲ್ ಮಾಡಬಹುದು. ಇದು ಡಿಕೆಶಿಯವರಿಗೆ ತಿಳಿಯದ್ದೇನೂ ಅಲ್ಲ. ಸದ್ಯಕ್ಕೆ ಬಿಜೆಪಿ ಬೆನ್ನಿಗಿದ್ದಂತೆ ನಟಿಸಬಹುದಾದರೂ, ಅದು ಬೆನ್ನಿಗಿರಿಯುವುದಕ್ಕೆ ಹೆಚ್ಚು ಹೊತ್ತು ಬೇಕಾಗಿಲ್ಲ ಎನ್ನುವುದು ಡಿಕೆಶಿಗೆ ಗೊತ್ತಿರಬೇಕು. ಆದುದರಿಂದ, ಗರಿಷ್ಠ ಸಂಯಮವನ್ನು ಪ್ರದರ್ಶಿಸುವುದರಿಂದ ಡಿಕೆಶಿ ಅವರಿಗೆ ಭವಿಷ್ಯದಲ್ಲಿ ಬಹಳಷ್ಟು ಲಾಭಗಳಿವೆ. ಹಾಗೆಯೇ ಕಾಂಗ್ರೆಸ್‌ನಲ್ಲಿ ಮುಖ್ಯಮತ್ರಿ ಸ್ಥಾನವನ್ನು ಅಲಂಕರಿಸಲು ಅರ್ಹರಾದ ಇನ್ನೂ ಹಲವು ನಾಯಕರಿದ್ದಾರೆ ಎನ್ನುವುದನು ಇಬ್ಬರೂ ಮರೆಯಬಾರದು.

Similar News