×
Ad

ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್; ಕಾರ್ಯಕರ್ತರಿಂದ ಸಂಭ್ರಮ

Update: 2023-05-18 18:42 IST

ಬೆಂಗಳೂರು, ಮೇ 18: ರಾಜ್ಯಕ್ಕೆ ಆಗಮಿಸಿದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆಗೆರದು, ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಬರಮಾಡಿಕೊಂಡರು.

ಗುರುವಾರ ಸಂಜೆ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಒಟ್ಟಿಗೆ ಆಗಮಿಸಿದ ಉಭಯ ನಾಯಕರನ್ನು ಸ್ವಾಗತಿಸಲು ಎಚ್‍ಎಎಲ್ ವಿಮಾನ ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪೊಲೀಸ್ ಬೆಂಗಾವಲುಪಡೆ ವಾಹನಗಳೊಂದಿಗೆ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕಾರ್ಯಕರ್ತರತ್ತ ಕೈ ಬೀಸಿ ತೆರಳಿದರು.

ಸಿದ್ದರಾಮಯ್ಯರನ್ನು ಶಾಸಕ ಭೈರತಿ ಸುರೇಶ್ ತಮ್ಮ ವಾಹನದಲ್ಲಿ ಸ್ವತಃ ಚಾಲನೆ ಮಾಡಿಕೊಂಡು ಕರೆದುಕೊಂಡು ಹೋದರು. ವಿಮಾನ ನಿಲ್ದಾಣದಿಂದ ಉಭಯ ನಾಯಕರು ನೇರವಾಗಿ ತಮ್ಮ ನಿವಾಸಗಳಿಗೆ ತೆರಳಿದರು. ಅಲ್ಲದೆ, ಅವರ ನಿವಾಸಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ನಿವಾಸ ಹಾಗೂ ಸದಾಶಿವ ನಗರದಲ್ಲಿರುವ ಡಿ.ಕೆ. ಶಿವಕುಮಾರ್ ನಿವಾಸದ ಬಳಿ ಅವರ ವಾಹನಗಳು ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವು ಎರಚಿ ಸಂಭ್ರಮಿಸಿದರು.

ಜತೆಗೆ ಡೊಳ್ಳು ಕುಣಿತ, ಪಟದ ಕುಣಿತ ಸಹಿತ ಜಾನಪದ ಕಲಾತಂಡಗಳು ಅಲ್ಲಿದ್ದವು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಅಲ್ಲದೆ, ಉಭಯ ನಾಯಕರಿಗೆ ಶುಭಾಶಯಗಳನ್ನು ಕೋರಲು ನೂತನ ಶಾಸಕರು, ನಾಯಕರು, ಮುಖಂಡರ ದಂಡೆ ಸೇರಿತ್ತು.

Similar News