×
Ad

ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ ಡಿ.ಕೆ, ಸಿದ್ದರಾಮಯ್ಯ

Update: 2023-05-18 21:36 IST

ಬೆಂಗಳೂರು, ಮೇ 18: ನಿರೀಕ್ಷೆಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಸರಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ನಿಯೋಗ ಹಕ್ಕು ಮಂಡಿಸಿದ್ದು, ರಾಜ್ಯಪಾಲರು ಗುರುವಾರ ಅನುಮೋದನೆ ನೀಡಿದರು.

ನಗರದ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾಗಾಂಧಿ ಭವನದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಆ ಬಳಿಕ ಸರಕಾರ ರಚನೆ ಕುರಿತು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅನಂತರ, ಪ್ರಮಾಣವಚನ ಸ್ವೀಕಾರ ಸಮಾರಂಭದ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ, ರಾಜ್ಯಪಾಲರು ಅಧಿಕೃತವಾಗಿ ಸರಕಾರ ರಚನೆಗೆ ಅನುಮೋದಿಸಿ ಅಧಿಸೂಚನೆ ಹೊರಡಿಸಿದರು.

ಕಾಂಗ್ರೆಸ್ ಪಕ್ಷದ ನಿಯೋಗದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಸಲೀಂ ಅಹಮ್ಮದ್ ಸೇರಿದಂತೆ ಹಲವು ನಾಯಕರು ಇದ್ದರು.

ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿದರು ಬಳಿಕ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಆರ್. ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಲಕ್ಷ್ಮಿ ಹೆಬ್ಳಾಕರ್, ತನ್ವೀರ್ ಸೇಠ್ ಸೇರಿ ಎಲ್ಲ ಶಾಸಕರು ಅದಕ್ಕೆ ಅನುಮೋದನೆ ನೀಡಿದರು.

Similar News