ಪುತ್ತೂರು ಪೊಲೀಸ್ ದೌರ್ಜನ್ಯದ ವಿರುದ್ಧ ಎದ್ದಿರುವ ಜನಾಕ್ರೋಶಕ್ಕೆ ಬಿಜೆಪಿ ಪರಿವಾರ ವಿಚಲಿತಗೊಂಡಿದೆ: ಮುನೀರ್ ಕಾಟಿಪಳ್ಳ

Update: 2023-05-18 17:10 GMT

ಪುತ್ತೂರು ಸಂಘ ಪರಿವಾರದ ಬಂಡಾಯ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ಎದ್ದಿರುವ ಜನಾಕ್ರೋಶಕ್ಕೆ ಬಿಜೆಪಿ ಪರಿವಾರ ವಿಚಲಿತಗೊಂಡಿದೆ. ದಕ್ಷಿಣ ಕನ್ನಡದ ಎಸ್ಪಿ ಕೆಳ ಹಂತದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಬಿಜೆಪಿ ಶಾಸಕ ಹರೀಶ್ ಪೂಂಜಾ ಸಂತ್ರಸ್ತರನ್ನು ಭೇಟಿಯಾಗಿ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದು ಹಾಸ್ಯಾಸ್ಪದರಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಟ್ವೀಟ್ ನಲ್ಲಿ ಖಂಡಿಸಿದ್ದಾರೆ. ಬಜರಂಗದಳ ಪತ್ರಿಕಾ ಹೇಳಿಕೆ ನೀಡಿದೆ. ತನ್ನನ್ನು ತಾನು "ಹಿಂದು ಹುಲಿ" ಎಂದು ಬಣ್ಣಿಸಿಕೊಳ್ಳುವ ಬಸವನ ಗೌಡ ಯತ್ನಾಳ್ ಗಾಯಾಳು ಕಾರ್ಯಕರ್ತರ ಭೇಟಿಗೆ ದೂರದ ಬಿಜಾಪುರದಿಂದ ಪುತ್ತೂರಿಗೆ ಹೊರಟಿದ್ದಾರೆ.

ಪೊಲೀಸ್ ಇಲಾಖೆಯ ಮೇಲೆ ತಮ್ಮ ಹಿಡಿತ ಬಳಸಿ, ಪಕ್ಷದ ನಾಯಕತ್ವವನ್ನು ಪ್ರಶ್ನಿಸುವ ಕಾರ್ಯಕರ್ತರ ಚರ್ಮ ಎಬ್ಬಿಸಿದ ಬಿಜೆಪಿ‌ ಪರಿವಾರ ಈಗ ಜನಾಕ್ರೋಶ ಕಂಡು ಗೊಂದಲದಿಂದ ಗಲಿಬಿಲಿಗೆ ಒಳಗಾದಂತಿದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ "ಅಮಾಯಕ" ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಕೋಪಕ್ಕೆ ಸದಾ "ಬಲಿಪಶು" ನಳಿನ್ ಕುಮಾರ್ ಕಟೀಲ್ ರನ್ನು ಹೊಣೆ ಮಾಡುವ ವ್ಯವಸ್ಥಿತ ಯತ್ನ ನಡೆಸಲಾಗುತ್ತಿದೆ.

ಬೆಳ್ಳಾರೆಯಲ್ಲಿ ಆಕ್ರೋಶಿತ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಇಡೀ ಬಿಜೆಪಿ ನಾಯಕತ್ವದ ವಿರುದ್ಧ ಬೀದಿಯಲ್ಲಿ ತಿರುಗಿಬಿದ್ದಾಗ, ಆಕ್ರೋಶವನ್ನು ಇಡಿಯಾಗಿ ನಳಿನ್ ಕುಮಾರ್ ಕಟೀಲ್ ಒಬ್ಬರ ತಲೆಗೆ ಕಟ್ಟಿ ಪರಿವಾರವನ್ನು ಬಚಾವ್ ಮಾಡಲು ನೋಡಲಾಗಿತ್ತು. ಅದರಲ್ಲೂ ಮಹಾತ್ವಾಕಾಂಕ್ಷಿ ಹರೀಶ್ ಪೂಂಜಾ ಎಂಪಿ ಸ್ಥಾನಕ್ಕೆ ಕಣ್ಣಿಟ್ಟು ಆಕ್ರೋಶಿತ ಕಾರ್ಯಕರ್ತರು ಪೂಂಜಾ ರನ್ನು ಹೊಗಳುವ ಸೀನ್ ಕ್ರಿಯೇಟ್ ಮಾಡಿ ವೀಡಿಯೋ ವೈರಲ್ ಮಾಡಿಸಿದ್ದರು. ಅದೇ ಪೂಂಜಾ ಈಗ ಸಿಟ್ಟಿಗೆದ್ದಿರುವ ಕಾರ್ಯಕರ್ತರ ಮಧ್ಯೆ ಪುತ್ತೂರಿಗೆ ಭೇಟಿ ನೀಡಿ, ಕಾಂಗ್ರೆಸ್ ಮೇಲೆ ಆರೋಪಗೈದು ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಟವೆಲ್ ಹಾಕುವ ಯತ್ನ ನಡೆಸಿದ್ದಾರೆ. ಹಾಗೆಯೆ ಬಿಜೆಪಿ ಪರಿವಾರದ "ಹಿಂದು ಹುಲಿ, ಸಿಂಹಗಳು" ಪುತ್ತೂರಿಗೆ ದೌಡಾಯಿಸಿ ಇನ್ನೂ ಪಟ್ಟಕ್ಕೆ ಬಂದಿರದ, ಜಿಲ್ಲೆಯಲ್ಲಿ ಉಸಿರಾಟದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಕಾಂಗ್ರೆಸ್ ತಲೆಗೆ ಆರೋಪ ಹೊರಿಸಿ, ನಳಿನ್ ಕುಮಾರ್ ಕಟೀಲ್ ಒಬ್ಬರು ಮಾತ್ರ "ಅಯೋಗ್ಯ" ಎಂದು ಬಿಂಬಿಸಿ ಡ್ಯಾಮೇಜ್ ಕಂಟ್ರೋಲ್ ಗೆ ಯತ್ನಿಸುತ್ತಿದೆ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಇಲ್ಲಿ ‌ಬಿಜೆಪಿ ಉತ್ತರಿಸಬೇಕಾದ ಪ್ರಶ್ನೆಗಳಿವೆ. ಪೊಲೀಸರು ಬಂಡಾಯ ಕಾರ್ಯಕರ್ತರಿಗೆ ಥಳಿಸುವಾಗ "ನಮಗೆ ದೆಹಲಿಯಿಂದ ಸಿಕ್ಕಾಪಟ್ಟೆ ಒತ್ತಡ ಇದೆ, ನಿಮ್ಮಿಂದಾಗಿ ಊಟ, ನಿದ್ರೆ ಇಲ್ಲದಂತಾಯ್ತು, ಎಂದು ಹೇಳಿ ಸಮಾ ಬಡಿದಿದ್ದಾರೆ" ಎಂದು ಗಾಯಾಳುಗಳೇ ಹೇಳಿರುವುದಾಗಿ ವರದಿಯಾಗಿದೆ. ಈ ದೆಹಲಿ ಪ್ರಭಾವ ಬಿಜೆಪಿಗೆ ಬಿಟ್ಟು ಇನ್ಯಾರಿಗಿದೆ ?  ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಈ ಕಾಲದ ಸಾಮಾನ್ಯ (ನಾವು ಇಂತಹ ಸಂಸ್ಕೃತಿಯನ್ನು ಒಪ್ಪುವುದಿಲ್ಲ) ಘಟನೆಯ ಆರೋಪ ಹೊತ್ತ ತಮ್ಮದೆ ಬಂಡಾಯ ಕಾರ್ಯಕರ್ತರ ಮೇಲೆ ಕಠಿಣ ಕ್ರಮಕ್ಕೆ ದೆಹಲಿ ಮಟ್ಟದಿಂದ ಪ್ರಭಾವ ಬೀರಿಸುವಷ್ಟು ಸಿಟ್ಟು ಬಿಜೆಪಿಗರಿಗಲ್ಲದೆ ಇನ್ಯಾರಿಗೆ ಇರಲು ಸಾಧ್ಯ ?

ರಾಜ್ಯಾಧ್ಯಕ್ಷರನ್ನು ಅವಮಾನಿಸಿ ಬ್ಯಾನರ್ ಕಟ್ಟಿದ ಕುರಿತು ದೂರು ನೀಡಬೇಕಿದ್ದದ್ದು ಸ್ಥಳೀಯ ಬಿಜೆಪಿ ನಾಯಕರು. ಆದರೆ ದೂರು ನೀಡಿದ್ದು ನಗರ ಸಭೆ ಕಮಿಷನರ್. ಅದೂ, ಸಾರ್ವಜನಿಕ ಆಸ್ಥಿ ವಿರೂಪಗೊಳಿಸಿದ ಸೆಕ್ಷನ್ ಅಡಿಯಲ್ಲಿ. ಇದ್ಯಾಕೆ ಹೀಗೆ ? ಪ್ರತಿಭಟನಾ ಸಭೆ ನಡೆಸಿದ ಪಕ್ಷದ ಮುಖಂಡರೇಕೆ ದೂರು ನೀಡಲಿಲ್ಲ ?  ಈ ಕಮಿಷನರ್ ಬಿಜೆಪಿ ಸರಕಾರದಡಿ ಅವರ ಶಕ್ತಿ ಕೇಂದ್ರ ಪುತ್ತೂರಿನಲ್ಲಿ ಕಮಿಷನರ್ ಆಗಿ ಬಂದವರು. ಇವರು ಯಾರ ಕಡೆ ಜನ ಅಂತ ಬಿಡಿಸಿ ಹೇಳಬೇಕಿಲ್ಲ ತಾನೆ ?

ಇ‌ನ್ನು, ಠಾಣಾ ಜಾಮೀನು ಸೆಕ್ಷನ್ ನ ಸಾಮಾನ್ಯ ಪ್ರಕರಣದಲ್ಲಿ ಚರ್ಮ ಸುಲಿಯುವಂತೆ ಬಡಿದು ಬಿಸಾಕಿದ ಪೊಲೀಸರಲ್ಲಿ ಕೆಳ ಹಂತದ ಪೇದೆ ಹಾಗು ಎಸ್ಐ ಯನ್ನು ಸಸ್ಪಂಡ್ ಮಾಡಿಸಿದ್ದೀರಿ. ಬಿಜೆಪಿ ಸಹಿತ ಎಲ್ಲರಿಗೂ ಗೊತ್ತಿರುವ ಸತ್ಯ ಏನೆಂದರೆ, ತನಿಖೆಯ ನೇತೃತ್ವ ವಹಿಸಿದ್ದು ಪುತ್ತೂರು ಡಿವೈಎಸ್ಪಿ. ಪೊಲೀಸರ ಲಾಠಿಗಳ ರೌದ್ರಾವತಾರವೂ ಅವರದ್ದೆ ಮಾರ್ಗದರ್ಶನದಲ್ಲಿ ನಡೆದದ್ದು (ಎಸ್ಪಿಯವ ಹೇಳಿಕೆಯಲ್ಲಿ ಸೂಕ್ಷ್ಮವಾಗಿ ಇದು ವ್ಯಕ್ತಗೊಂಡಿದೆ)  ಈ ಡಿವೈಎಸ್ಪಿ ಯಾರ ಜನ ? ಅವರನ್ನು ಶಕ್ತಿ ಕೇಂದ್ರ ಪುತ್ತೂರು ಉಪವಿಭಾಗಕ್ಕೆ ಬಿಜೆಪಿ ಆಡಳಿತದಲ್ಲಿ ಕರೆತಂದದ್ದು ಯಾರು ? ಅವರ ಮೇಲೆ ಕ್ರಮಕ್ಕೆ "ಹುಲಿ, ಸಿಂಹಗಳು" ಆಗ್ರಹಿಸದಿರುವುದು ಯಾಕೆ ? 

ಇದೆಲ್ಲಾ ಅರ್ಥ ಆಗದ ವಿಷಯ ಏನಲ್ಲ. "ಎಂಪಿ ಅಭ್ಯರ್ಥಿ ಬದಲಿಸಿ" ಎಂದು ಒಂದೇ ಕೂಗಿನತ್ತ ಅತೃಪ್ತಗೊಂಡಿರುವ ಬೆಂಬಲಿಗ ಸಮೂಹವನ್ನು ಸೆಳೆಯುವ, ಸೋತು ಏದುಸಿರು ಬಿಡುತ್ತಿರುವ ಕಾಂಗ್ರೆಸ್ ನತ್ತ ಬಾಣ ಹೂಡಿ ದಿಕ್ಕುತಪ್ಪಿಸುವ ನಾಯಕತ್ವದ ಪ್ರಪಗಾಂಡಗಳಿಗೆ ಬಲಿಯಾಗದೆ ತುಳುನಾಡಿನ ಯುವ ಸಮೂಹ ಯೋಚಿಸಿದರೆ ಎಲ್ಲವೂ ಸ್ಪಷ್ಟಗೊಳ್ಳುತ್ತದೆ. ಪ್ರಶ್ನೆಗಳಿಗೆ ಉತ್ತರ, ಸಂತ್ರಸ್ತರಿಗೆ ನೈಜ ಸಾಂತ್ವನ ದೊರಕುತ್ತದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Similar News