ಮಾಲಕನ ಬ್ಯಾಂಕ್​ ಖಾತೆಯಿಂದ ಹಣ ವಂಚನೆ ಆರೋಪ: ಯುವತಿಯರು ಸೇರಿ ಹಲವರ ಬಂಧನ

Update: 2023-05-18 18:29 GMT

ಬೆಂಗಳೂರು, ಮೇ 18: ಉದ್ಯೋಗ ನೀಡಿದ್ದ ಮಾಲಕನ ಬ್ಯಾಂಕ್ ಖಾತೆಯಿಂದ ತನ್ನ ಪ್ರಿಯತಮ, ಹಾಗೂ ಸಹೋದರಿಯರ ಖಾತೆಗೆ ಹಣ ವರ್ಗಾಯಿಸಿದ್ದ ಯುವತಿ ಸಹಿತ ನಾಲ್ವರನ್ನು ಇಲ್ಲಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರೀತು, ನಕ್ಷು ಕುಶಾಲಪ್ಪ, ಗಾಯನ ಹಾಗೂ ಜಾನು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಕಂಪೆನಿ ನಡೆಸುತ್ತಿರುವ ವೆಂಕಟೇಶ ರೆಡ್ಡಿ ಎಂಬುವರು ಸಂವಹನ ಮಾಡುವ ಹುದ್ದೆಗೆ ಆರೋಪಿ ರೀತು ಎಂಬಾಕೆಯನ್ನು ನೇಮಕಗೊಳಿಸಿದ್ದರು. ಕಂಪೆನಿಗೆ ಸಂಬಂಧಿಸಿದ ವ್ಯವಹಾರದ ಫೋನ್ ಪೇ, ಗೂಗಲ್ ಪೇಗಳ ನಿರ್ವಹಣೆಯ ಹೊಣೆಯನ್ನು ರೀತುಗೆ ನೀಡಲಾಗಿತ್ತು. 

ಆದರೆ, ಮಾಲಕನ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ರೀತು ತನ್ನ ಹಾಗೂ ತನ್ನ ಸಹೋದರಿಯರಿಗೆ ಕಂಪೆನಿಯ ಹಣವನ್ನ ಬಳಸಿಕೊಳ್ಳಲಾರಂಭಿಸಿದ್ದಳು. 2.70 ಲಕ್ಷ ರೂ. ಹಣವನ್ನು ತನ್ನ ಪ್ರಿಯತಮ ಹಾಗೂ ಸಹೋದರಿಯರ ಖಾತೆಗಳಿಗೆ ವರ್ಗಾಯಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಖಾತೆಯಲ್ಲಿ ಹಣ ಖಾಲಿಯಾಗಿರುವುದನ್ನು ಗಮನಿಸಿದ್ದ ವೆಂಕಟೇಶ್ ರೆಡ್ಡಿ, ಅನುಮಾನಗೊಂಡು ಪರಿಶೀಲಿಸಿದಾಗ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಘಟನೆ ಸಂಬಂಧ ವೆಂಕಟೇಶ್ ರೆಡ್ಡಿ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Similar News