ಸವಾಲುಗಳನ್ನೇ ಅವಕಾಶವಾಗಿಸಿದ ನಾಯಕ ಡಿ.ಕೆ.ಶಿವಕುಮಾರ್

Update: 2023-05-18 18:32 GMT

ಡಿ.ಕೆ.ಶಿವಕುಮಾರ್ ರಾಜಕೀಯ ಬದುಕಿನಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಕಾಂಗ್ರೆಸ್ ನಿಷ್ಠೆ. ಕಾಂಗ್ರೆಸ್ ಜೊತೆಗಿನ ಅವರ ನಂಟು ಶುರುವಾದದ್ದು 18ನೇ ವಯಸ್ಸಿನಿಂದಲೇ. 1994ರಲ್ಲೊಮ್ಮೆ ರಾಜಕೀಯ ಕಾರಣಗಳಿಂದಾಗಿ ಪಕ್ಷೇತರರಾಗಿ ಸ್ಪರ್ಧಿಸಬೇಕಾ ಯಿತು ಎನ್ನುವುದು ಬಿಟ್ಟರೆ ಅವರ ಕಾಂಗ್ರೆಸ್ ನಿಷ್ಠೆ ಮತ್ತೆ ಮುಕ್ಕಾಗದೆ ಮುಂದುವರಿದುಕೊಂಡು ಬಂದಿದೆ. ಅವರಿಗೀಗ 61 ವರ್ಷ.

ಕಾಂಗ್ರೆಸ್ ಬಿಕ್ಕಟ್ಟಿನ ಹೊತ್ತಿನಲ್ಲೆಲ್ಲ ತಮ್ಮ ರಾಜಕೀಯ ಚಾಕಚಕ್ಯತೆ ಮತ್ತು ಧಾಡಸೀತನದಿಂದ ಪರಿಸ್ಥಿತಿ ನಿಭಾಯಿಸಿದವರು ಡಿ.ಕೆ.ಶಿವಕುಮಾರ್. ಆ ಕಾರಣದಿಂದಾಗಿಯೇ ದಿಲ್ಲಿಯ ನಾಯಕರಿಗೂ ಹತ್ತಿರ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿಶ್ವಾಸನೀಯ ವಲಯದಲ್ಲಿ ಸ್ಥಾನ. ದೇಶದ ಅತಿ ಶ್ರೀಮಂತ ರಾಜಕಾರಣಿ ಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ. ಇದರ ಜೊತೆಗೇ ಅಕ್ರಮ ಆಸ್ತಿ ಆರೋಪವೂ ಸುತ್ತಿಕೊಂಡಿದ್ದು, ಈ.ಡಿ ವಿಚಾರಣೆ ಎದುರಿಸುತ್ತಲೇ ಇದ್ದಾರೆ. ಈ ಬಾರಿ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದಾಗ ಘೋಷಿಸಿ ಕೊಂಡ ಆಸ್ತಿ ಪ್ರಕಾರ, ಕಣದಲ್ಲಿದ್ದ ಅಭ್ಯರ್ಥಿಗಳಲ್ಲೇ ಎರಡನೆಯ ವರಾಗಿದ್ದರು. ಆಯೋಗಕ್ಕೆ ಅವರು ಸಲ್ಲಿಸಿದ್ದ ಆಸ್ತಿಯ ವಿವರ 5 ಸಾವಿರ ಬಾರಿ ಡೌನ್ಲೋಡ್ ಆಗಿದೆಯೆಂಬುದು ವರದಿಯಾಗಿತ್ತು.

ಅದರರ್ಥ, ಅವರ ಶ್ರೀಮಂತಿಕೆ ಅವರ ಸುತ್ತ ಕಂಟಕವನ್ನೂ ಹೆಣೆದಿದೆ ಮಾತ್ರವಲ್ಲ, ಅವರ ರಾಜಕೀಯ ಬದುಕಿನ ಬಲ ಮತ್ತು ಕಷ್ಟಗಳೆರಡೂ ಅದೇ ಆಗಿದೆ.

ಕನಕಪುರ ತಾಲೂಕು ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರ ಡಿ.ಕೆ.ಶಿವಕುಮಾರ್ ಜನಿಸಿದ್ದು 1962ರ ಮೇ 15. ಸಹೋದರ ಡಿ.ಕೆ.ಸುರೇಶ್ ಅವರೂ ರಾಜಕೀಯ ದಲ್ಲಿ ಸಕ್ರಿಯರಾಗಿದ್ದು, ಸದ್ಯ ರಾಜ್ಯದ ಏಕೈಕ ಕಾಂಗ್ರೆಸ್ ಲೋಕಸಭಾ ಸಂಸದರಾಗಿದ್ದಾರೆ. ಕನಕಪುರ ರಾಜಕಾರಣವಂತೂ ಇವರಿಬ್ಬರ ಕೈಯಲ್ಲಿಯೇ ಇದೆ.

ರಾಜಕೀಯ ಚಾಣಕ್ಯ

ದೇವೇಗೌಡರ ರಾಜಕೀಯ ಆಟಕ್ಕೆ, 2006ರ ಲೋಕಸಭಾ ಚುನಾ ವಣೆಯಲ್ಲಿ ಅಂದು ಅಷ್ಟೇನೂ ಪರಿಚಿತರಾಗಿರದ ತೇಜಸ್ವಿನಿ ಗೌಡ ಅವರನ್ನು ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿ, ತಮ್ಮದೇ ಆದ ರೀತಿಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದು ದೊಡ್ಡ ವಿಚಾರವಾಗಿತ್ತು. ದೇವೇಗೌಡರ ಕಾರಣದಿಂದಲೇ 2004ರಲ್ಲಿ ಎಸ್.ಎಂ.ಕೃಷ್ಣರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದಾಗ ಅವರ ಬೆನ್ನಿಗೆ ನಿಂತಿದ್ದವರು ಇದೇ ಡಿ.ಕೆ.ಶಿವಕುಮಾರ್. ಮಹಾರಾಷ್ಟ್ರ ರಾಜ್ಯಪಾಲ ಹುದ್ದೆ ಕೃಷ್ಣ ಅವರಿಗೆ ಸಿಗುವಲ್ಲಿ, ಬಳಿಕ 2008ರಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಮರಳಬಯಸಿದಾಗ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸುವಲ್ಲಿ ಶಿವಕುಮಾರ್ ಪಾತ್ರ ಮಹತ್ವದ್ದಾಗಿತ್ತು.

ಡಿ.ಕೆ.ಶಿವಕುಮಾರ್ ಅವರ ತಾಕತ್ತೇ ಇಂತಹ ರಾಜಕೀಯ ಚತುರತೆ ಮತ್ತು ಸಂಘಟನಾ ಶಕ್ತಿ. ಇಷ್ಟು ದೀರ್ಘ ಕಾಲದಿಂದ ಕಾಂಗ್ರೆಸ್‌ಗೆ ನಿಷ್ಠರಾಗಿರುವ ಅವರು, ಪಕ್ಷ ವಹಿಸಿದ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಸರಕಾರ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡವರು. 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದವರು ಡಿ.ಕೆ.ಶಿವಕುಮಾರ್. ಅದರ ಪರಿಣಾಮವನ್ನೂ ಈಗ ರಾಜಕೀಯ ಪ್ರತೀಕಾರವಾಗಿ ಅವರು ಅನುಭವಿಸಬೇಕಾಗಿ ಬಂದಿರುವುದು ಗೊತ್ತಿರುವ ವಿಚಾರ.

ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ.ಶಿವಕುಮಾರ್ ಬಂಧನವಾಯಿತು. ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೋಗಿದ್ದರು. ಬಿಡುಗಡೆ ಬಳಿಕ 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಅವರ ನಿಷ್ಠೆಗೆ ಅದು ಕಾಂಗ್ರೆಸ್ ಹೈಕಮಾಂಡ್ ನೀಡಿದ ಉಡುಗೊರೆ.

ಸಿಕ್ಕಿದ ಸ್ಥಾನವನ್ನು ಸಮರ್ಥವಾಗಿ ಬಳಸಿ ಕೊಂಡ ಡಿ.ಕೆ.ಶಿವಕುಮಾರ್ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದರು. ಎಲ್ಲ ನಾಯಕರ ವಿಶ್ವಾಸ ಗಳಿಸಿ ಒಗ್ಗಟ್ಟು ಮೂಡಿಸಲು ಶ್ರಮಿ ಸಿದರು. ಪಕ್ಷದ ವಿವಿಧ ವಿಭಾಗಗಳಿಗೆ ಶಕ್ತಿ ತುಂಬಿದರು. ಮುಂದಿನ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ಘೋಷಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಮೈತ್ರಿ ಸರಕಾರದ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದ ಡಿ.ಕೆ.ಶಿವಕುಮಾರ್ ಅವರು ಪಕ್ಷದ ನಾಯಕತ್ವ ತಮಗೆ ಜವಾಬ್ದಾರಿ ವಹಿಸಿದ ಅನೇಕ ಉಪಚುನಾವಣೆಗಳಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಂಡರು. ಬಳ್ಳಾರಿ ಲೋಕಸಭಾ ಕ್ಷೇತ್ರ, ಕುಂದಗೋಳ ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಗಮನಾರ್ಹ.

ಕೋವಿಡ್ ಸಮಯದಲ್ಲಿ ತಮ್ಮ ಊರುಗಳಿಗೆ ಮರಳಲು ಮುಂದಾದ ವಲಸೆ ಕಾರ್ಮಿಕರಿಂದ ಸರಕಾರವೇ ಮೂರು ಪಟ್ಟು ಟಿಕೆಟ್ ದರ ವಸೂಲಿಗೆ ನಿಂತಾಗ ಅದರ ವಿರುದ್ಧ ಹೋರಾಡಿ ಪಕ್ಷದಿಂದ 1 ಕೋಟಿ ರೂ. ಮೊತ್ತದ ಚೆಕ್ ನೀಡಲು ಮುಂದಾದರು. ಆಗ ಸರಕಾರ ಎಚ್ಚೆತ್ತು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಪ್ರಯೋಜನಗಳಿರುವ ಮೇಕೆದಾಟು ಯೋಜನೆಗೆ ಸರಕಾರ ನಿರ್ಲಕ್ಷ ವಹಿಸಿದಾಗ ಈ ಯೋಜನೆ ಜಾರಿಗೆ ಆಗ್ರಹಿಸಿ, ಈ ಭಾಗದಲ್ಲಿ 160 ಕಿ.ಮೀ. ಪಾದಯಾತ್ರೆ ಮಾಡಿ ಭಾರೀ ಜನ ಬೆಂಬಲ ಪಡೆದರು. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಆರಂಭಿಸಿದ ನಂತರ ಕರ್ನಾಟಕದಲ್ಲಿ 21 ದಿನಗಳ ಕಾಲ 550 ಕಿ.ಮೀ. ಉದ್ದದ ಭಾರತ ಜೋಡೊ ಯಾತ್ರೆ ನಡೆಸಿ ಯಶಸ್ವಿಗೊಳಿಸಿದ್ದರು. ಈ ಯಾತ್ರೆ ಹಾದುಹೋದ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಎಲ್ಲ ವರ್ಗಗಳ ಜನರ ಸಂಕಷ್ಟ ಆಲಿಸಿದರು. ‘ನಾ ನಾಯಕಿ’ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಿ ಮಹಿಳೆ ಯರನ್ನು ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಎಲ್ಲ ಸಮುದಾಯ, ಧರ್ಮಗಳ ಧರ್ಮಗುರುಗಳು, ಮಠಾಧೀಶರ ವಿಶ್ವಾಸ ಪಡೆದಿದ್ದು, ಅವರ ಬೆಂಬಲ ಪಡೆದು ಪಕ್ಷವನ್ನು ಸಂಘಟಿಸಿದರು.

ವಿಧಾನ ಸಭಾ ಚುನಾವಣೆಗೆ ಮುನ್ನ ಬಿಜೆಪಿ ಸರಕಾರದ ವೈಫಲ್ಯ ಗಳನ್ನು, ಅದರ ಮೇಲಿರುವ ಸರಣಿ ಭ್ರಷ್ಟಾಚಾರ ಆರೋಪಗಳನ್ನು ತಳ ಮಟ್ಟದಲ್ಲಿ ಜನರಿಗೆ ತಲುಪುವಂತೆ ಪರಿಣಾಮಕಾರಿ ಪ್ರಚಾರ ಅಭಿಯಾನ ಕೈಗೊಂಡರು. ವರಿಷ್ಠರ ಸಲಹೆ ಪ್ರಕಾರ ಚುನಾವಣಾ ರಣತಂತ್ರಜ್ಞರನ್ನು ನೇಮಿಸಿ ಅವರ ಸಲಹೆಯಂತೆ ವಿನೂತನ ಕ್ರಮಗಳನ್ನು ಅನುಸರಿಸಿ ಬಿಜೆಪಿ ಸರಕಾರವನ್ನು ಬೆನ್ನು ಬೆನ್ನಿಗೆ ಇಕ್ಕಟ್ಟಿಗೆ ಸಿಲುಕಿಸಿದರು. ಚುನಾವಣೆ ಘೋಷಣೆ ಆದ ಮೇಲಂತೂ ಬಿಜೆಪಿ ವಿರುದ್ಧ ಆಕ್ರಮಣಕಾರಿಯಾಗಿ ಪ್ರಚಾರ ಸಂಘಟಿಸಿದರು.

ಬಿಜೆಪಿ ಕಾಂಗ್ರೆಸ್ ಮೇಲೆ ದಾಳಿ ಮಾಡುವ ಬದಲು ಸ್ವತಃ ತಾನೇ ರಕ್ಷಣಾತ್ಮಕ ನಡೆ ಅನುಸರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಿಎಂ ಹುದ್ದೆಗೆ ಪೈಪೋಟಿ ಇದ್ದರೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅದೆಲ್ಲೂ ಕಾಣದಂತಹ, ಒಗ್ಗಟ್ಟಿನ ಪ್ರದರ್ಶನವೇ ಮೆರೆಯುವಂತೆ ಜಾಣ ನಡೆ ಇಟ್ಟರು.

Similar News