ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸದ 274 ಗ್ರಾಮ ಪಂಚಾಯತ್‌ಗಳು

Update: 2023-05-19 03:45 GMT

ಬೆಂಗಳೂರು, ಮೇ 18: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 14, 15ನೇ ಹಣಕಾಸು ಆಯೋಗದ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ರಾಜ್ಯದ ಗ್ರಾಮ ಪಂಚಾಯತ್‌ಗಳ ಪೈಕಿ ಒಟ್ಟು 274 ಪಂಚಾಯತ್‌ಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ಅಲ್ಲದೆ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದ್ದ ಪಂಚಾಯತ್‌ಗಳ ಪೈಕಿ 169 ಪಂಚಾಯತ್‌ಗಳು ವರದಿಗಳನ್ನು ಸಲ್ಲಿಸಿಲ್ಲ. ಹಾಗೆಯೇ 246 ಪಂಚಾಯತ್‌ಗಳು ಆಯವ್ಯಯವನ್ನೇ ತಯಾರಿಸಿಲ್ಲ ಎಂದು ಕರ್ನಾಟಕ ರಾಜ್ಯಲೆಕ್ಕ ಪರಿಶೋಧಕರ ವರದಿಯು ಹೊರಗೆಡವಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯತ್‌ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯತ್‌ಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ನರೇಗಾ ಯೋಜನೆಯಡಿ ಬೆಂಗಳೂರು ವಿಭಾಗದ 21 ಮತ್ತು 14 ಹಾಗೂ 15ನೇ ಹಣಕಾಸು ಆಯೋಗದ ಯೋಜನೆಯಡಿ 33 ಪಂಚಾಯತ್‌ಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಿಲ್ಲ. ಅದೇ ರೀತಿ ಬೆಳಗಾವಿ ವಿಭಾಗದ 35 ಪಂಚಾಯತ್‌ಗಳು (ನರೇಗಾ) 76 ಪಂಚಾಯತ್‌ಗಳು (14/15 ಹಣಕಾಸು ಯೋಜನೆ), ಕಲಬುರಗಿ ವಿಭಾಗದ 20 (ನರೇಗಾ) 43 (14/15 ಹಣಕಾಸು ಯೋಜನೆ) 43 ಪಂಚಾಯತ್‌ಗಳು, ಮೈಸೂರು ವಿಭಾಗದ 15 (ನರೇಗಾ) 31 (14/15 ಹಣಕಾಸು ಯೋಜನೆ) ಪಂಚಾಯತ್‌ಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

ಲೆಕ್ಕ ಪರಿಶೋಧನೆಗೆ ಒಳಪಡಿಸಿದ್ದ 559 ಪಂಚಾಯತ್‌ಗಳ ಪೈಕಿ 246 ಗ್ರಾಮ ಪಂಚಾಯತ್‌ಗಳು ಆಯವ್ಯಯವನ್ನೇ ತಯಾರಿಸಿಲ್ಲ. ಗ್ರಾಮ ಪಂಚಾಯತ್ ನಿಧಿಯಿಂದ ಯಾವುದೇ ವೆಚ್ಚವನ್ನು ಆಯವ್ಯಯದಲ್ಲಿ ಅನುದಾನದ ಹಂಚಿಕೆ ಇಲ್ಲದೆ ಮಾಡುವಂತಿಲ್ಲ. ಆದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಆಯವ್ಯಯವನ್ನೇ ತಯಾರಿಸದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 241 ಮತ್ತು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ನಿಯಮ 11ನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಅದೇ ರೀತಿ ಅನುಮೋದಿತ ಆಯವ್ಯಯವಿಲ್ಲದೇ ಗ್ರಾಮ ಪಂಚಾಯತ್‌ನಿಂದ ಭರಿಸಲಾದ ವೆಚ್ಚಗಳ ನಿಯಮಗಳನ್ನೂ ಉಲ್ಲಂಘಿಸಿದಂತಾಗಿದೆ ಎಂದು ವರದಿ ಹೇಳಿದೆ. ಹಾಗೆಯೇ ನಿಯಮಗಳಿಗೆ ವ್ಯತಿರಿಕ್ತವಾಗಿ 93 ಗ್ರಾಮ ಪಂಚಾಯತ್‌ಗಳು ವಿಳಂಬವಾಗಿ ಆಯವ್ಯಯ ತಯಾರಿಸಿ ಅನುಮೋದನೆ ಪಡೆದಿದೆ. ಬೆಂಗಳೂರು ವಿಭಾಗದ 42, ಬೆಳಗಾವಿ ವಿಭಾಗದ 16, ಕಲಬುರಗಿ 9, ಮೈಸೂರು ವಿಭಾಗದ 26 ಪಂಚಾಯತ್‌ಗಳು ವಿಳಂಬವಾಗಿ ಆಯವ್ಯಯ ತಯಾರಿಸಿವೆ.

ಅಲ್ಲದೆ, ಬೆಂಗಳೂರು ವಿಭಾಗದ 133, ಬೆಳಗಾವಿ ವಿಭಾಗದ 72, ಕಲಬುರಗಿ ವಿಭಾಗದ 72, ಮೈಸೂರು ವಿಭಾಗದ 95 ಸೇರಿದಂತೆ ಒಟ್ಟಾರೆ 372 ಪಂಚಾಯತ್‌ಗಳು ಆಯವ್ಯಯ ನಿಯಂತ್ರಣ ವಹಿಯನ್ನೇ ನಿರ್ವಹಿಸಿಲ್ಲ ಎಂದೂ ವರದಿ ಹೇಳಿದೆ.

Similar News