×
Ad

ಚುನಾವಣೆ ವೇಳೆ ಮಸೀದಿಗಳಿಗೆ ನೀಡಿದ್ದ 17.30 ಕೋಟಿ ರೂ. ವಾಪಸ್ ಕೇಳಿದ ಕೆಜಿಎಫ್‌ ಬಾಬು!

'ಅದು ಸ್ವೀಕರಾರ್ಹ ಹಣವಲ್ಲ, ಆದಷ್ಟು ಬೇಗ ಚೆಕ್ ವಾಪಸ್‌ ಮಾಡಿ' ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದರು

Update: 2023-05-19 10:33 IST

ಬೆಂಗಳೂರು, ಮೇ 19: ಚಿಕ್ಕಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಕೆಜಿಎಫ್‌ ಬಾಬು (ಯೂಸುಫ್ ಶರೀಫ್) ಚುನಾವಣೆಯ ಸಂದರ್ಭದಲ್ಲಿ ಮಸೀದಿಗಳಿಗೆ ನೀಡಿದ್ದ ಹಣದ ಚೆಕ್ ಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.

ಕೆಜಿಎಫ್‌ ಬಾಬು ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಬಳಿಕ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು. ಈ ವೇಳೆ 64 ಮಸೀದಿಗಳಿಗೆ 17.30 ಕೋಟಿ ರೂ. ಮೌಲ್ಯದ ಚೆಕ್‌ಗಳನ್ನು ವಿತರಿಸಿದ್ದರು. ಚುನಾವಣೆಯಲ್ಲಿ ಅವರು ಸೋಲುಂಡಿದ್ದಾರೆ. ಇದೀಗ ಉರ್ದು ಪತ್ರಿಕೆಯಲ್ಲಿ ಜಾಹೀರಾತು ನೀಡಿರುವ ಕೆಜಿಎಫ್‌ ಬಾಬು, ತಾನು ನೀಡಿರುವ ಹಣವನ್ನು ಮಸೀದಿಗಳು ಬಳಸಬಾರದು. ಅದು ಸ್ವೀಕರಾರ್ಹವಲ್ಲದ ಹಣ, ಆದಷ್ಟು ಬೇಗ ಆ ಚೆಕ್‌ಗಳನ್ನು ವಾಪಸ್‌ ಮಾಡಿ ಎಂದು ಸಮಿತಿಗಳಿಗೆ ಹೇಳಿದ್ದಾರೆ.

ದಾರುಲ್ ಉಲೂಮ್‌ ಹೊರಡಿಸಿರುವ ಫತ್ವಾವೊಂದನ್ನು ಉಲ್ಲೇಖಿಸಿರುವ ಕೆಜಿಎಫ್‌ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಸ್ವೀಕರಾರ್ಹವಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಕೆಜಿಎಫ್‌ ಬಾಬು ತಾವೇ ಎಲ್ಲ ಮಸೀದಿ ಸಮಿತಿಗಳನ್ನು ಆಹ್ವಾನಿಸಿ ಎಸ್‌ಆರ್‌ ನಗರದ ಹಕ್‌ ಹೌಸ್‌ನಲ್ಲಿ ಬೃಹತ್‌ ಸಮಾರಂಭ ಮಾಡಿ ಚೆಕ್‌ ಗಳನ್ನು ವಿತರಿಸಿದ್ದರು. ಆಗ ಇದು ದೇಣಿಗೆ ಅಂದಿದ್ದ ಅವರು, ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಈಗ ಚುನಾವಣೆಯಲ್ಲಿ ಸೋತ ಬಳಿಕ ನೀಡಿದ್ದ ಚೆಕ್‌ಗಳನ್ನು ವಾಪಸ್‌ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಮಸೀದಿ ಸಮಿತಿಗಳು ಅಸಮಾಧಾನ ವ್ಯಕ್ತಪಡಿಸಿವೆ.

Similar News