×
Ad

ನಮ್ಮವರೇ ಈ ರೀತಿ ಮಾಡಿದರೆ ನ್ಯಾಯ ಕೇಳುವುದು ಯಾರಲ್ಲಿ: ಯತ್ನಾಳ್ ರನ್ನು ಪ್ರಶ್ನಿಸಿದ ಅರುಣ್ ಪುತ್ತಿಲ

ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣ

Update: 2023-05-19 18:45 IST

ಪುತ್ತೂರು: ನಮ್ಮವರೇ ನಮಗೆ ಈ ರೀತಿಯಾಗಿ ಮಾಡಿದಲ್ಲಿ ನಾವು ನ್ಯಾಯ ಕೇಳುವುದು ಯಾರಲ್ಲಿ, ಇದನ್ನು ನೋಡಿಕೊಂಡು ನಾವು ಬದುಕ ಬೇಕಾ, ನಮ್ಮ ಪಾಲಿಗೆ ಸಂಘ ಎಲ್ಲುಂಟು, ಪಕ್ಷ ಎಲ್ಲುಂಟು, ಸಂಘಟನೆ ಎಲ್ಲುಂಟು ಎಂದು ಪಕ್ಷೇತರ ಅಭ್ಯಥಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಶುಕ್ರವಾರ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಾಗಿರುವ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ಭೇಟಿಯಾಗಲು ಬಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಶ್ನಿಸಿದ್ದಾರೆ. 

ಪುತ್ತೂರಿನ ಆಸ್ಪತ್ರೆಗೆ ಆಗಮಿಸಿದ ಯತ್ನಾಳ್ ಅವರನ್ನು ಶಾಲು, ಹಾರ, ಪೇಟ ಹಾಕಿ ಸ್ವಾಗತಿಸಿದ ಪುತ್ತಿಲ ಅವರು ಬಳಿಕ ಸಂತ್ರಸ್ತರ ಭೇಟಿ ಮಾಡಿಸಿದರು. ಈ ಸಂದರ್ಭದಲ್ಲಿ ಒಟ್ಟು ಘಟನೆಗಳ ಬಗ್ಗೆ ಯತ್ನಾಳ್ ಅವರಿಗೆ ವಿವರಿಸಿದ ಪುತ್ತಿಲ, "ಪುತ್ತೂರಿನಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಾಂಗ್ರೆಸ್‍ಗೆ, ಎಸ್‍ಡಿಪಿಐಗೆ ಓಟು ಹಾಕಿ ಆದರೆ ಪಕ್ಷೇತರಕ್ಕೆ ಓಟು ಹಾಕಬೇಡಿ ಎಂದು ತಡೆದಿದ್ದಾರೆ. ಇಲ್ಲಿ ಸ್ವಾರ್ಥಕ್ಕಾಗಿ ಬಲಿ ನಡೆಯುತ್ತಿದೆ. ಮಾಡುವುದೆಲ್ಲಾ ಮಾಡಿ ಆಮೇಲೆ ಬಂದು ಬೆನ್ನು ತಟ್ಟುತ್ತಾರೆ" ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ. 

ಸಾರ್ವಜನಿಕವಾಗಿ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಹಾಕಿರುವುದು ನಮಗೆ ತುಂಬಾ ನೋವಾಗಿದೆ. ಈ ಕ್ಷೇತ್ರದಲ್ಲಿ ನಾವು ಇಂತಹ ಪರಿಸ್ಥಿತಿ ನೋಡುವುದಾದಲ್ಲಿ ಬದುಕಿರಬೇಕಾ? ಜೀವ ಇದ್ದೂ ಸತ್ತಂತಾಗಿದೆ ನಮ್ಮ ಪರಿಸ್ಥಿತಿ. ಇದುವರೆಗೂ ಪುತ್ತೂರಿನ ಮಾಜಿ ಶಾಸಕರು ಸಂತ್ರಸ್ತರ ಬಳಿ ಬಂದಿಲ್ಲ. ಅವರು ನೋವಾಗಿದ್ದವರಿಗೆ ನ್ಯಾಯ ಕೊಡಿಸುವ ಬದಲು ಪಕ್ಷದ ಕಚೇರಿಯಲ್ಲಿ ಅಶೋಕ್ ರೈ ಗೆಲುವಿಗೆ ಸಂಭ್ರಮ ಪಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ವಾಗ್ದಾಳಿ ನಡೆಸಿದರು.

ನಾವೂ ಸಂಘ ಪರಿವಾರದವರೇ. ಆದರೆ ನಮ್ಮವರನ್ನು ಠಾಣೆಯಲ್ಲಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಕೂಡಿ ಹಾಕಿ ಹೊಡೆಯಲಾಗಿದೆ. ಇದಕ್ಕೆ ಇಬ್ಬರ ಒತ್ತಡವೇ ಕಾರಣ. ನಾವು ಬಿಜೆಪಿ ವಿರೋಧಿಗಳಲ್ಲ ಆದರೆ ಅವರಿಬ್ಬರಿಗೆ ಮಾತ್ರ ನಮ್ಮ ವಿರೋಧವಿದೆ. ನಳಿನ್ ಕುಮಾರ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ತನಕ ನಾವು ಬಿಜೆಪಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಅರುಣ್ ಬೆಂಬಲಿಗರು ಯತ್ನಾಳ್ ಗೆ ತಿಳಿಸಿದರು. 

Similar News