ಬೆಂಗಳೂರು | ಆನ್‍ಲೈನ್ ಶಿಕ್ಷಣ ಸಂಸ್ಥೆ ಕಚೇರಿಗಳ ಮೇಲೆ ಈಡಿ ದಾಳಿ; 8.26 ಕೋಟಿ ರೂ. ವಶಕ್ಕೆ
Update: 2023-05-19 19:19 IST
ಬೆಂಗಳೂರು, ಮೇ 19: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣ ಸಂಬಂಧ ಬೆಂಗಳೂರಿನ ಪಿಜೆನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ಗೆ ಸೇರಿದ 8.26 ಕೋಟಿ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪಿಜೆನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಒಡಾಕ್ಲಾಸ್ ಆ್ಯಪ್ ಮೂಲಕ ಆನ್‍ಲೈನ್ ಶಿಕ್ಷಣ ಒದಗಿಸುತ್ತಿದೆ. ಇದು ಚೀನಾ ಮೂಲದ ಲಿಯು ಕ್ಯಾನ್ ಹಾಗೂ ಭಾರತದ ವೇದಾಂತ್ ಹಮಿರ್ವಾಸಿಯಾ ಅವರನ್ನು ತನ್ನ ನಿರ್ದೇಶಕರನ್ನಾಗಿ ಹೊಂದಿದ್ದು, ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿತ್ತು ಎನ್ನಲಾಗಿದೆ.
ಜಾಹೀರಾತು ವೆಚ್ಚದ ಹೆಸರಿನಲ್ಲಿ ಕಂಪೆನಿಯ ಖಾತೆಯಿಂದ 82.72 ಕೋಟಿ ರೂಪಾಯಿ ಹಣ ಚೀನಾ ಮತ್ತು ಹಾಂಕಾಂಗ್ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಸದ್ಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37ಎ ಅಡಿಯಲ್ಲಿ ಹಣ ಜಪ್ತಿ ಮಾಡಲಾಗಿದೆ ಎಂದು ಈಡಿ ಮಾಹಿತಿ ನೀಡಿದೆ.