ಬಿಎಂಟಿಸಿ ಚಾಲಕ ಸಾವು ಹಿನ್ನೆಲೆ: ತಾಯಿಗೆ ನೀಡಿದ್ದ ಪರಿಹಾರ ಹೈಕೋರ್ಟ್ ನಿಂದ ರದ್ದು

Update: 2023-05-19 16:11 GMT

ಬೆಂಗಳೂರು, ಮೇ 19: ಸಾವಿಗೂ ಮೊದಲು ಎರಡು ತಿಂಗಳಿನಿಂದ ಸತತವಾಗಿ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದರೂ, ಕಾರ್ಯದೊತ್ತಡದಿಂದ ಬಿಎಂಟಿಸಿ ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿಸಿ ಅವರ ತಾಯಿಗೆ 10 ಲಕ್ಷ ರೂ.ಪರಿಹಾರ ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ.

ಈ ಸಂಬಂಧ ವಿಚಾರಣಾ ನ್ಯಾಯಾಲಯದ ಮುಂದೆ ಬಿಎಂಟಿಸಿ ಇಟ್ಟಿದ್ದ ಠೇವಣಿಯನ್ನು ಹಿಂದಿರುಗಿಸಲು ಸೂಚನೆ ನೀಡಿದೆ. ಪರಿಹಾರ ನೀಡುವಂತೆ ಘೋಷಣೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಮೃತನ ತಾಯಿ, ತನ್ನ ಪುತ್ರ ಉದ್ಯೋಗ ನಿರ್ವಹಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಕ್ಲೇಮು ಅರ್ಜಿಯಲ್ಲಿ ತಿಳಿಸಿಲ್ಲ. ಚಾಲಕ ಮೃತಪಡುವ ಮುನ್ನ ಎರಡು ತಿಂಗಳಿಂದಲೂ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಹೀಗಾಗಿ, ಉದ್ಯೋಗ ನಿರ್ವಹಣೆ ವೇಳೆ ಆತ ಸಾವನ್ನಪ್ಪಿದ್ದಾರೆ ಎಂಬುದಾಗಿ ಪರಿಗಣಿಸಲಾಗದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಬೋಜರಾಜ 2008ರಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಪರಿಹಾರ ಕೋರಿ 2016ರಲ್ಲಿ ಅಂದರೆ 8 ವರ್ಷ ಕಾಲ ವಿಳಂಬವಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆಯು 2010ರಲ್ಲಿ ಅಂದಿನ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಅದರಲ್ಲೂ ಸಹ ಪುತ್ರ ಉದ್ಯೋಗ ನಿರ್ವಹಣೆ ವೇಳೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿರಲಿಲ್ಲ. ಕ್ಲೇಮು ಅರ್ಜಿಯಲ್ಲೂ ಈ ವಿಚಾರವನ್ನು ತಿಳಿಸಿರಲಿಲ್ಲ ಎಂದು ಅಭಿಪ್ರಾಯಪಟ್ಟಿತು.

Similar News