×
Ad

2024ರ ಲೋಕಸಭಾ ಚುನಾವಣೆ ಗುರಿ: ಕರ್ನಾಟಕದಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳ ಒಗ್ಗಟ್ಟಿನ ಮಂತ್ರ

Update: 2023-05-20 20:43 IST

ಬೆಂಗಳೂರು, ಮೇ 20: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರ ಸಮಾರಂಭದಲ್ಲಿ ಮಿತ್ರ ಪಕ್ಷಗಳೊಂದಿಗೆ ಶಕ್ತಿ ಪ್ರದರ್ಶನ ಮಾಡಿದ್ದು, ಇದು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಸಿದ್ಧರಾಗಿದ್ದಾರೆ ಎನ್ನುವ ಸಂದೇಶ ರವಾನೆ ಮಾಡಿದಂತೆ ಇತ್ತು.

ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ರಾಜ್ಯ ಹಾಗೂ ರಾಷ್ಟ್ರ ನಾಯಕರ ದಂಡೇ ಹರಿದು ಬಂದಿತ್ತು. ಈ ವೇಳೆ ನಾಯಕರು ಜತೆಗೂಡಿ ನಾವು ಒಂದಾಗಿದ್ದೇವೆ ಎಂದು ಕೈ ಎತ್ತಿ ಸಂದೇಶ ಸಾರಿದರು. ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಪ್ರಮುಖವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ.ರಾಜಾ, ಜೆಡಿಯು ಅಧ್ಯಕ್ಷ ಲಲನ್‍ಸಿಂಗ್, ಆರ್‍ಸಿಪಿ ಪಕ್ಷದ ಎನ್.ಕೆ. ಪ್ರೇಮಚಂದ್ರನ್, ಸಿಪಿಎಂನ ದೀಪಂಕರ್ ಭಟ್ಟಾಚಾರ್ಯ, ವಿಸಿಕೆ ಪಕ್ಷದ ತೋಲ್ ತಿರುಮಾವಳವನ್, ಆರ್‍ಎಲ್‍ಡಿ ನಾಯಕ ಜಯಂತ್ ಚೌಧರಿ ಅವರು ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಳಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದರು. ಉಳಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಛತ್ತೀಸ್‍ಗಢದ ಭೂಪೇಶ್ ಬಾಘೇಲ್, ಹಿಮಾಚಲದ ಸುಖವಿಂದರ್ ಸಿಂಗ್ ಸುಖು ಇದ್ದರು.

ಮಮತಾ ಸೇರಿ ಹಲವರು ಗೈರು..!:

ಕರ್ನಾಟಕದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಿರಲಿಲ್ಲ. ಈ ಬಗ್ಗೆ ಕೇರಳದ ಆಡಳಿತರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‍ಡಿಎಫ್) ಟೀಕಿಸಿತ್ತು. ಇನ್ನೂ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಗೈರು ಹಾಜರಿ ಎದ್ದುಕಂಡಿತು.

Similar News