ಮೊದಲ ಹಂತದಲ್ಲಿ ದ.ಕ. ಜಿಲ್ಲೆಗೆ ತಪ್ಪಿದ ಸಚಿವ ಸ್ಥಾನ

Update: 2023-05-20 16:23 GMT

ಮಂಗಳೂರು, ಮೇ 20: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 10 ಮಂದಿಯ ನೂತನ ಸಚಿವ ಸಂಪುಟದಲ್ಲಿ ಸಚಿವರಾಗುವ ಯೋಗ ದ.ಕ.ಜಿಲ್ಲೆಗೆ ದೊರೆತಿಲ್ಲ.

28 ಮಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ದ.ಕ.ಜಿಲ್ಲೆಗೂ ಸ್ಥಾನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಮಾಜಿ ಸಚಿವ ಹಾಗೂ ಮಂಗಳೂರಿನ ಶಾಸಕ ಯು.ಟಿ. ಖಾದರ್‌ಗೆ ಸಚಿವ ಸ್ಥಾನ ನಿರೀಕ್ಷಿಸಲಾಗಿತ್ತು. ಆದರೆ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಅವಕಾಶ ತಪ್ಪಿದೆ.

ಯು.ಟಿ. ಖಾದರ್  ಅವರಂತೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಡಾ.ಮಂಜುನಾಥ ಭಂಡಾರಿ ಅವರಿಗೂ ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಭಾಗ್ಯ ಸಿಗಲಿಲ್ಲ.

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 2ರಲ್ಲಿ ಮಾತ್ರ ಕಾಂಗ್ರೆಸ್ ಜಯ ಗಳಿಸಿತ್ತು. ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಒಂದು ಹೆಚ್ಚುವರಿ ಸ್ಥಾನ ಪಡೆದಿತ್ತು.

ಮಂಗಳೂರು ಕ್ಷೇತ್ರದಿಂದ ಶಾಸಕ ಯುಟಿ ಖಾದರ್ ಸತತ ಐದನೇ ಬಾರಿ ಜಯ ಗಳಿಸಿದ್ದರು. ಪುತ್ತೂರಿನಿಂದ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಮೊದಲ ಯತ್ನದಲ್ಲೇ ವಿಧಾನ ಸಭೆ ಪ್ರವೇಶಿಸಿದ್ದಾರೆ.

ಮಾಜಿ ಸಚಿವ ಬಿ. ರಮಾನಾಥ ರೈ ಸೋತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಿಗಬಹುದಾಗಿದ್ದ ಸಚಿವ ಸ್ಥಾನ ತಪ್ಪಿದೆ.
ಯು.ಟಿ. ಖಾದರ್‌ಗೆ ಸಚಿವ ಸ್ಥಾನ ಮುಂದೆ ಸಿಗುವುದು ಖಚಿತ. ಆದರೆ ಇನ್ನೊಂದು ಸ್ಥಾನ ದೊರೆಯುವ ಅವಕಾಶ ಇದೆ. ಪಕ್ಕದ ಉಡುಪಿಯಲ್ಲಿ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಅಲ್ಲಿನ ಉಸ್ತುವಾರಿ ಸಚಿವ ಹುದ್ದೆ ವಿಧಾನ ಪರಿಷತ್ ಸದಸ್ಯರಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ಇನ್ನಷ್ಟು ದಿನ ಕಾಯಬೇಕಾಗಿದೆ.

ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ. ಖಾದರ್ ಸಚಿವರಾಗಿದ್ದರು.

Similar News