‘ಹಿಕಿಕೊಮೊರಿ’ ಎಂಬ ಅಡಗುಮಾರಿ ಇಲ್ಲಿಗೂ ವಕ್ಕರಿಸೀತು ಜೋಕೆ

Update: 2023-05-20 19:30 GMT

ಹಿಕಿಕೊಮೊರಿ ಎಂಬುದು ಎಲ್ಲರಿಂದ ಪ್ರತ್ಯೇಕವಾಗಿ ಆದರೆ ಒಬ್ಬಂಟಿಯಾಗಿ ವಾಸಿಸುವ ಮಾನಸಿಕ ಕಾಯಿಲೆಯಾಗಿದೆ. ಈ ಮನೋರೋಗಕ್ಕೆ ತುತ್ತಾದವರು ಮನೆಯಿಂದ ಹೊರಬರುವುದೇ ಇಲ್ಲ. ಎರಡು ಮೂರು ತಿಂಗಳಿಂದ ವರ್ಷದವರೆಗೂ ಹೊರಬಾರದೇ ಅಂತರ್ಮುಖಿಗಳಾಗಿ ಜೀವಿಸುತ್ತಿದ್ದಾರೆ. ಇತರರಿಂದ ದೈಹಿಕ ಅಥವಾ ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿದು ಪ್ರತ್ಯೇಕವಾಗಿ ವಾಸಿಸುತ್ತಾರೆ. ದುಡಿಯಬೇಕಾದ ಅಥವಾ ತಾರುಣ್ಯದ ಹಮ್ಮಿನಲ್ಲಿ ಬೀಗಬೇಕಾದ ವಯಸ್ಸಿನಲ್ಲಿ ಎಲ್ಲರಿಂದ ದೂರ ಉಳಿದು ಬದುಕುತ್ತಿರುವುದು ಕಳವಳಕಾರಿ ಎನಿಸಿದೆ.


ಸಕುರಾ ಇಪ್ಪತ್ತೊಂದು ವರ್ಷದ ಹುಡುಗಿ. ಪದವೀಧರೆ. ನೋಡಲು ಸುಂದರವಾಗಿದ್ದಾಳೆ. ಆದರೆ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುವುದಿಲ್ಲ. ಕಳೆದ ಆರು ತಿಂಗಳಿಂದ ಮನೆಯವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಆರು ತಿಂಗಳಿಂದ ಮನೆಯಿಂದ ಹೊರ ಬಂದೇ ಇಲ್ಲ. ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದೆ ಒಬ್ಬಂಟಿಯಾಗಿದ್ದಾಳೆ. ತಾನಾಯಿತು, ತನ್ನ ಕೊಠಡಿಯಾಯಿತು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಊಟ. ಉಳಿದ ಸಮಯದಲ್ಲಿ ಪುಸ್ತಕ ಓದುತ್ತಾ, ಟೀವಿ ನೋಡುತ್ತಾ, ಮೊಬೈಲ್ ಬಳಸುತ್ತಾ ಕಾಲಕಳೆಯುತ್ತಾಳೆ. ಇಪ್ಪತ್ತೆಂಟು ವಯಸ್ಸಿನ ನೊಬುತೋಷಿಯದೂ ಇದೇ ಕತೆ. ಇಂಜಿನಿಯರಿಂಗ್ ಪದವೀಧರನಾಗಿದ್ದ ನೊಬುತೋಷಿ ಪ್ರಸಿದ್ಧ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎಂಟು ತಿಂಗಳಿಂದ ಕೆಲಸಕ್ಕೆ ಹಾಜರಾಗಿಲ್ಲ. ಇತ್ತ ಅವನ ಸ್ವಂತ ಊರಿಗೂ ಹೋಗಿಲ್ಲ. ಎಂಟು ತಿಂಗಳಿಂದ ಕೊಠಡಿಯಲ್ಲೇ ಇದ್ದಾನೆ. ಅಗತ್ಯವಿದ್ದಾಗ ಮಾತ್ರ ಕೊಠಡಿಯಿಂದ ಹೊರಬಂದು ಬೇಕಾದ ದಿನಸಿ ಸಾಮಾಗ್ರಿ ಖರೀದಿಸಿ ಕೊಠಡಿ ಸೇರಿದರೆ ಮುಗಿಯಿತು. ಪುನಃ ಹೊರಬರುವುದು ಅಗತ್ಯ ಸಾಮಗ್ರಿಗಳು ಬೇಕಾದಾಗ ಮಾತ್ರ.

ಸಕುರಾ ಮತ್ತು ನೊಬುತೋಷಿ ಇಬ್ಬರೂ ಯುವಕರು. ದುಡಿಯಬೇಕಾದ ವಯಸ್ಸಿನಲ್ಲಿ ಮೂಲೆಗುಂಪಾಗಿ ಹೊರಗಿನ ಪ್ರಪಂಚದ ಸಂಪರ್ಕ ಕಡಿದುಕೊಂಡಿದ್ದಾರೆ. ಸ್ನೇಹಿತರು, ಬಂಧುಗಳು, ಮನೆಯವರು ಎಲ್ಲರಿಂದಲೂ ದೂರವಿದ್ದು ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. ಇದು ಕೇವಲ ಇವರಿಬ್ಬರ ಕತೆಯಲ್ಲ. ಜಪಾನಿನಲ್ಲಿ ಇಂತಹ 15 ಲಕ್ಷ ಯುವಪೀಳಿಗೆ ಪ್ರತ್ಯೇಕ ವಾಸದಲ್ಲಿದ್ದಾರೆ. ‘ಹಿಕಿಕೊಮೊರಿ’ ಎಂದು ಕರೆಯಲ್ಪಡುವ ಸಾಮಾಜಿಕವಾಗಿ ಅಡಗುವ ಪಿಡುಗಿನ ಈ ಸ್ಥಿತಿಯು ಜಪಾನ್‌ನಲ್ಲಿ ಸಾಮಾನ್ಯವಾಗುತ್ತಿದೆ. ಹೆಚ್ಚಾಗಿ ಯುವಕರು ತಮ್ಮ ಕುಟುಂಬದ ಸದಸ್ಯರಿಂದ, ಸ್ನೇಹಿತರಿಂದ, ಬಂಧುಗಳಿಂದ ದೂರ ಉಳಿದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಿಕಿಕೊಮೊರಿ ಎಂಬುದು ಎಲ್ಲರಿಂದ ಪ್ರತ್ಯೇಕವಾಗಿ ಆದರೆ ಒಬ್ಬಂಟಿಯಾಗಿ ವಾಸಿಸುವ ಮಾನಸಿಕ ಕಾಯಿಲೆಯಾಗಿದೆ. ಈ ಮನೋರೋಗಕ್ಕೆ ತುತ್ತಾದವರು ಮನೆಯಿಂದ ಹೊರಬರುವುದೇ ಇಲ್ಲ. ಎರಡು ಮೂರು ತಿಂಗಳಿಂದ ವರ್ಷದವರೆಗೂ ಹೊರಬಾರದೇ ಅಂತರ್ಮುಖಿಗಳಾಗಿ ಜೀವಿಸುತ್ತಿದ್ದಾರೆ. ಇತರರಿಂದ ದೈಹಿಕ ಅಥವಾ ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿದು ಪ್ರತ್ಯೇಕವಾಗಿ ವಾಸಿಸುತ್ತಾರೆ. ದುಡಿಯಬೇಕಾದ ಅಥವಾ ತಾರುಣ್ಯದ ಹಮ್ಮಿನಲ್ಲಿ ಬೀಗಬೇಕಾದ ವಯಸ್ಸಿನಲ್ಲಿ ಎಲ್ಲರಿಂದ ದೂರ ಉಳಿದು ಬದುಕುತ್ತಿರುವುದು ಕಳವಳಕಾರಿ ಎನಿಸಿದೆ.

ಹಿಕಿಕೊಮೊರಿ ಸಮಸ್ಯೆ ಜಪಾನ್‌ನಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಸರಕಾರದ ಸಮೀಕ್ಷೆಯು ಸೂಚಿಸುತ್ತದೆ. ಸಮೀಕ್ಷೆಯ ಪ್ರಕಾರ, ಕೆಲಸ ಮಾಡುವ ವಯಸ್ಸಿನ ಸುಮಾರು 15 ಲಕ್ಷ ಜನರು ಸಾಮಾಜಿಕ ಏಕಾಂತೀಯರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಕ್ಯಾಬಿನೆಟ್ ಕಚೇರಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.

ಮನೋಶಾಸ್ತ್ರಜ್ಞರ ಪ್ರಕಾರ ಹಿಕಿಕೊಮೊರಿ ಎಂಬುದು ಸಾಮಾಜಿಕ ಒತ್ತಡದಿಂದ ದೂರ ಉಳಿಯುವ ಗೀಳಾಗಿದೆ. 15ರಿಂದ 35 ವಯೋಮಾನದವರು ಪ್ರತ್ಯೇಕವಾಸಕ್ಕೆ ಬಲಿಯಾಗಿದ್ದಾರೆ. ಹಿಕಿಕೊಮೊರಿಗೆ ತುತ್ತಾದವರು ಇತರರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ ಮತ್ತು ದೀರ್ಘಕಾಲದವರೆಗೆ ಮನೆಯಲ್ಲಿಯೇ ಇರುತ್ತಾರೆ. ಹೆಚ್ಚಿನ ಶೈಕ್ಷಣಿಕ ನಿರೀಕ್ಷೆಗಳು, ಕೆಲಸಕ್ಕಾಗಿ ಮತ್ತು ಸಾಮಾಜಿಕ ಒತ್ತಡಗಳು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಹಿಕಿಕೊಮೊರಿಯು ಸಾಮಾಜಿಕ ಆತಂಕ, ಖಿನ್ನತೆ, ಶೈಕ್ಷಣಿಕ ಒತ್ತಡ ಸೇರಿದಂತೆ ವಿವಿಧ ಅಂಶಗಳಿಂದ ಪ್ರಚೋದಿಸಬಹುದು. ಇದು ಸಾಮಾನ್ಯವಾಗಿ ಖಿನ್ನತೆ ಮತ್ತು ಆತಂಕದ ಅಸ್ವಸ್ಥತೆಗಳಂತಹ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ತಳಕುಹಾಕಿಕೊಂಡಿದೆ. ಹಿಕಿಕೊಮೊರಿ ಸಮಾಜದ ಮೇಲೆ ಅಪಾರ ಪರಿಣಾಮವನ್ನು ಬೀರುತ್ತದೆ. ಇದರಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಭಯಾನಕ ಪರಿಣಾಮಗಳು ಬೀರಬಹುದು.

ಜನರು ಸಮಾಜದಲ್ಲಿ ಮರು ಸೇರ್ಪಡೆಗೊಳ್ಳಲು ಇದು ಸವಾಲಾಗಿರಬಹುದು ಮತ್ತು ದುಃಖ, ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಾವಧಿಯ ಹಿಕಿಕೊಮೊರಿ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ನಿರೀಕ್ಷೆಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಅವರು ಉದ್ಯೋಗವನ್ನು ಹುಡುಕಲು ಅಥವಾ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಕಷ್ಟವಾಗುತ್ತದೆ. ಇದು ಜಪಾನ್‌ನಲ್ಲಿ ತುಂಬಾ ಗಂಭೀರ ಸ್ವರೂಪ ತಾಳುತ್ತಿದೆ. ಇದು ಸರಕಾರಕ್ಕೆ ತಲೆನೋವಾಗಿದೆ. ಹಿಕಿಕೊಮೊರಿ ಜಪಾನ್‌ನಲ್ಲಿ ವ್ಯಾಪಕವಾದ ಪರಿಣಾಮವನ್ನು ಹೊಂದಿದೆ. ಈ ಸಮಸ್ಯೆಯು ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಳ ಜೊತೆಗೆ ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನಿಶ್ಚಲತೆಯೊಂದಿಗೆ ಸಂಪರ್ಕ ಹೊಂದಿದೆ. ಹಿಕಿಕೊಮೊರಿ ಕಡಿಮೆ ಉತ್ಪಾದಕತೆಗೆ ಕಾರಣವಾಗಬಹುದು ಮತ್ತು ಆರ್ಥಿಕ ಹಿನ್ನ್ನಡೆಗೆ ಕಾರಣವಾಗಬಹುದು ಎಂಬ ಆತಂಕ ಮನೆಮಾಡಿದೆ. ಅಲ್ಲದೆ ಇದು ಜನಸಂಖ್ಯೆ ಕ್ಷೀಣತೆಗೆ ಕಾರಣವಾಗಬಹುದು ಎಂಬ ಆತಂಕವೂ ಇದೆ. ಈ ಪ್ರವೃತ್ತಿಯು ಜಪಾನ್‌ನ ಜನಸಂಖ್ಯೆಯ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಯೋಗಕ್ಷೇಮದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

 1990ರ ದಶಕದಲ್ಲಿ ಜಪಾನಿನ ಯುವಕರಲ್ಲಿ ತೀವ್ರವಾದ ಸಾಮಾಜಿಕ ಹಿಂದೆಗೆದುಕೊಳ್ಳುವಿಕೆಯ ಸಮಸ್ಯೆಗಳು ಪ್ರಾರಂಭವಾದವು. ಇದು ಜಪಾನ್‌ನಲ್ಲಿ ಆರ್ಥಿಕ ಹಿಮಯುಗವನ್ನು ಅನುಭವಿಸಿದ ಅವಧಿ. ಆರ್ಥಿಕ ಹಿನ್ನಡೆಯು ಅನೇಕ ಯುವಜನರು ತಮ್ಮ ಗುರಿಗಳನ್ನು ಸಾಧಿಸುವುದನ್ನು ತಡೆಯಿತು. ಅನೇಕರು ತಾವು ಅನುಭವಿಸಿದ ಅವಮಾನವನ್ನು ಮರೆಮಾಡಲು ಮರೆಯಾಗುವ ಮೂಲಕ ಪ್ರತಿಕ್ರಿಯಿಸಿದರು. ಕೆಲವರು ಕುಡಿತದ ಚಟಕ್ಕೆ ಬಲಿಯಾದರು, ಕೆಲವರು ಬದುಕಿನ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡರು. ಅದರ ಭಾಗವೇ ಹಿಕಿಕೊಮೊರಿ. ಹಿಕಿಕೊಮೊರಿ ಪದವು ‘ಹಿಕಿ’ ಮತ್ತು ‘ಕೊಮೊರಿ’ ಎಂಬ ಎರಡು ಪದಗಳ ಸಂಗಮ. ಹಿಕಿ ಎಂದರೆ ಹಿಂದೆಗೆದುಕೊಳ್ಳು ಮತ್ತು ಕೊಮೊರಿ ಎಂದರೆ ಒಳಗೆ ಇರು ಎಂದರ್ಥ. ಅಂದರೆ ಸಾಮಾಜಿಕವಾಗಿ ಹಿಂದೆಗೆದುಕೊಳ್ಳುವಿಕೆ ಮತ್ತು ಎಲ್ಲರಿಂದ ದೂರ ಉಳಿದು ಒಳಗೆ ಇರುವುದು ಎಂದರ್ಥ. 1998 ರಲ್ಲಿ ಜಪಾನಿನ ಮನೋವೈದ್ಯ ಪ್ರೊಫೆಸರ್ ಟಮಾಕಿ ಸೈಟೊ ಅವರು ಮೊದಲಬಾರಿಗೆ ಈ ಪದವನ್ನು ಬಳಸಿದರು. ಸೈಟೊ ಅವರು ಮಾನಸಿಕ ಆರೋಗ್ಯದ ರೋಗನಿರ್ಣಯದ ಮಾನದಂಡಗಳಿಗೆ ಹೊಂದಿಕೆಯಾಗದ ಅನೇಕ ಯುವಕರನ್ನು ವಿವರಿಸಲು ಈ ಪದವನ್ನು ಆಯ್ಕೆ ಮಾಡಿದರು. ಹಿಕಿಕೊಮೊರಿಯನ್ನು ಪ್ರಸಕ್ತ ಒಂದು ವಿಭಿನ್ನ ಮಾನಸಿಕ ಅಸ್ವಸ್ಥತೆಗಿಂತ ಹೆಚ್ಚಾಗಿ ಸಾಮಾಜಿಕ, ಸಾಂಸ್ಕೃತಿಕ ಮಾನಸಿಕ ಆರೋಗ್ಯದ ವಿದ್ಯಮಾನವಾಗಿ ವೀಕ್ಷಿಸಲಾಗಿದೆ.

ಹಿಕಿಕೊಮೊರಿಯ ಹಲವಾರು ಪ್ರಮುಖ ಲಕ್ಷಣವೆಂದರೆ, ಇದು ಬಾಧಿತ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲ ಅವರ ಮನೆಯಲ್ಲಿ ದೈಹಿಕವಾಗಿ ಪ್ರತ್ಯೇಕಿಸುವುದು, ಅರ್ಥಪೂರ್ಣ ಸಾಮಾಜಿಕ ಸಂಬಂಧಗಳಿಂದ ಕಡಿತಗೊಳಿಸುವುದು, ಎಲ್ಲರೊಂದಿಗೂ ಪರಸ್ಪರ ಸಂವಹನ ತಪ್ಪಿಸುವುದು ಮತ್ತು ಮೂಲಭೂತ ಸ್ವಯಂ ವ್ಯವಹರಿಸುವುದನ್ನು ಒಳಗೊಂಡಿರುತ್ತದೆ. ಅಂದರೆ ಈ ಮನೋರೋಗಕ್ಕೆ ತುತ್ತಾದವರು ಎಲ್ಲರಿಂದ ದೂರ ಉಳಿದು ಅಂತರ್ಮುಖಿಗಳಾಗುತ್ತಾರೆ. ಹಿಕಿಕೊಮೊರಿಯ ಜಾಗತಿಕ ಮನ್ನಣೆ ಹೆಚ್ಚಾದಂತೆ, ಈ ಸ್ಥಿತಿಯ ಹರಡುವಿಕೆಯು ಹೆಚ್ಚಾಗುವ ಸಾಧ್ಯತೆಯಿದೆ. ಕಾರಣ ಇದಕ್ಕೆ ಉತ್ತಮ ಚಿಕಿತ್ಸಾ ಕ್ರಮಗಳ ಅಗತ್ಯವಿದೆ. ಪ್ರಸಕ್ತ ಜಪಾನಿನಲ್ಲಿ ನಡೆಯುತ್ತಿರುವ ಚಿಕಿತ್ಸೆಗಳು ದೈಹಿಕ ಚಟುವಟಿಕೆಯ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ಇಂತಹ ಮಾನಸಿಕ ಸ್ಥಿತಿಗೆ ಸಾಮಾಜಿಕ ಮತ್ತು ಮಾನಸಿಕ ಸಂವಹನದ ಚಿಕಿತ್ಸೆಯ ಅಗತ್ಯ ಇದೆ. ಇದಕ್ಕೆ ತುತ್ತಾದವರನ್ನು ಸಾಮಾಜಿಕ ಕಳಂಕಿತರು ಎಂದು ಗಮನಿಸದೆ ಸಾಮಾಜೀಕರಣದ ವಂಚಿತರು ಎನ್ನುವ ಭಾವನೆಯಿಂದ ಚಿಕಿತ್ಸೆ ನೀಡಬೇಕಾಗಿದೆ. ಅವರಲ್ಲಿ ಸುಪ್ತವಾಗಿರುವ ಸಾಮರ್ಥ್ಯವನ್ನು ಹೊರಗಿನ ಪ್ರಪಂಚಕ್ಕೆ ತೋರಿಸುವ ರೀತಿಯ ಪ್ರಚೋದನಾತ್ಮಕ ಚಿಕಿತ್ಸೆ ಬೇಕಾಗಿದೆ.

ಉದಾಹರಣೆಗೆ ಜಪಾನಿನ ಕಲಾವಿದ ಅಟ್ಸುಶಿ ವಟನಾಬೆ ಅವರು ಹಿಕಿಕೊಮೊರಿಯಿಂದ ಚೇತರಿಸಿಕೊಳ್ಳಲು ಕಲೆ ಮತ್ತು ಸಾಮಾಜಿಕ ಕ್ರಿಯಾಶೀಲತೆಯನ್ನು ಬಳಸಿಕೊಂಡರು. ನಿರೀಕ್ಷೆಗಳು ಸಾಕಾರಗೊಳ್ಳದಿದ್ದಾಗ ಹತಾಶರಾದವರಲ್ಲಿ ಇಂತಹ ಮಾನಸಿಕ ತುಮುಲಗಳು ಸಾಮಾನ್ಯ. ಇಂತಹ ಪ್ರಕರಣಗಳನ್ನು ಸಾಮಾಜಿಕ ಹಾಗೂ ಮಾನಸಿಕ ಹಿನ್ನೆಲೆಯಲ್ಲಿ ಗಮನಿಸಿ, ಸೂಕ್ತ ಚಿಕಿತ್ಸೆಯ ಮೂಲಕ ಪರಿಹರಿಸಬಹುದಾಗಿದೆ. ಇದು ಸದ್ಯಕ್ಕೆ ನಮ್ಮಲ್ಲಿ ಇಲ್ಲ ಎಂಬುದೇ ಸಂತಸ. ಆದರೆ ಇಂದಿನ ಜಗತ್ತು ವೇಗವಾಗಿ ಸಂವಹನ ಹಾಗೂ ಸಂಪರ್ಕಕ್ಕೆ ಒಳಗಾಗುತ್ತಿದೆ. ನಮ್ಮ ಮನೆಯ ಅಥವಾ ನೆರೆಹೊರೆಯ ಯುವಕರೂ ಇದಕ್ಕೆ ಬಾಧಿತರಾಗಬಹುದು. ನಮ್ಮ ಮನೆಯ ಹಾಗೂ ದೇಶದ ಆಸ್ತಿಗಳಾದ ಯುವಪಡೆಯ ಮೇಲೆ ಒಂದು ಹದ್ದಿನ ಕಣ್ಣು ಇಡುವ ಮೂಲಕ ಇಂತಹ ಆಪತ್ತುಗಳಿಂದ ರಕ್ಷಿಸಿಕೊಳ್ಳೋಣವೇ?

Similar News