ಚೀನಾದಲ್ಲಿ 1 ದಶಲಕ್ಷಕ್ಕೂ ಅಧಿಕ ಉಯಿಗರ್ ಮರುಶಿಕ್ಷಣ ಕೇಂದ್ರ: ವರದಿ

Update: 2023-05-20 18:03 GMT

ಬೀಜಿಂಗ್, ಮೇ 20: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(CPC) ಇತ್ತೀಚಿನ ವರ್ಷಗಳಲ್ಲಿ ವಾಕ್ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಮೂಲಕ  ಉಯಿಗರ್ ದಮನ ಕಾರ್ಯವನ್ನು ವಿಸ್ತರಿಸಿದೆ ಎಂದು ‘ವಾಯ್ಸಸ್ ಅಗೈನ್ಸ್ಟ್ ಅಟೊಕ್ರಸಿ’ ವರದಿ ಮಾಡಿದೆ.

ಚೀನಾದಲ್ಲಿ ಉಯಿಗರ್ ಗಳ ವಿರುದ್ಧದ ದೌರ್ಜನ್ಯವು ಮಾನವೀಯತೆಯ ವಿರುದ್ಧದ ಅತ್ಯಂತ ಭಯಾನಕ ಅಪರಾಧವಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. 2017ರಿಂದ  ಚೀನೀ ಸರಕಾರವು ‘ಮರು ಶಿಕ್ಷಣ ಶಿಬಿರ’ಗಳಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಉಯಿಗರ್ ಗಳನ್ನು ಬಂಧಿಸಿದೆ.

ಬಂಧನಕ್ಕೆ ಒಳಪಡದವರ ಮೇಲೆ ನಿರಂತರ ನಿಗಾ ವಹಿಸುವ ಜತೆಗೆ  ಧಾರ್ಮಿಕ ನಿರ್ಬಂಧ, ಬಲವಂತದಿಂದ ಕೆಲಸ ಮಾಡಿಸುವುದು, ಬಲವಂತದಿಂದ ಸಂತಾನಶಕ್ತಿ ಹರಣ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತ ಗುಂಪಿನ ಅತೀ ದೊಡ್ಡ ಸೆರೆವಾಸ ಇದಾಗಿದೆ ಎಂದು ಪಾಶ್ಚಾತ್ಯ ಸಂಶೋಧಕರು ಬಣ್ಣಿಸಿರುವುದಾಗಿ  ವರದಿ ಹೇಳಿದೆ.

ಉಯಿಗರ್ ಶಿಬಿರದಲ್ಲಿ ಚಿತ್ರಹಿಂಸೆ ಅಥವಾ ಇತರ ರೀತಿಯ ಕ್ರೂರ, ಅಮಾನವೀಯ ಅಥವಾ ಅವಮಾನಕರ ಕೃತ್ಯ ನಡೆಯುತ್ತಿದೆ. ಆದರೆ ಶಿಬಿರಗಳಲ್ಲಿ ಬಂಧಿಯಾಗಿರುವವರು ಆರೋಪ ಹೊರಿಸಲು ಮುಂದಾಗಿಲ್ಲ ಮತ್ತು ತಮ್ಮ ಬಂಧನವನ್ನು ಪ್ರತಿಭಟಿಸಲು ಯಾವುದೇ ಕಾನೂನು ಆಶ್ರಯವನ್ನು ಹೊಂದಿರಲಿಲ್ಲ  ಎಂದು ಕಳೆದ ವರ್ಷ ಬಿಡುಗಡೆಯಾದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ಹೇಳಿಕೆ ತಿಳಿಸಿದೆ.

ವಿಶ್ವಸಂಸ್ಥೆ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಮತ್ತು ತನ್ನ ಅಧಿಕಾರಿಗಳು ಉಯಿಗರ್ಗಳ ಮೇಲಿನ ದಬ್ಬಾಳಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದನ್ನು ತಪ್ಪಿಸಲು ತನಗಿರುವ ಅಗಾಧ ಪ್ರಭಾವ ಬಳಸುವುದನ್ನು ಚೀನಾ ಮುಂದುವರಿಸಿದೆ ಎಂದು ವರದಿ ಹೇಳಿದೆ.

ಉಯಿಗರ್ ಗಳ ದುಸ್ಥಿತಿಯ ಬಗ್ಗೆ ಜಾಗತಿಕ ಗಮನ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಚೀನಾದಲ್ಲಿ ಉಯಿಗರ್ ಗಳ ದಮನವು ಮಾನವೀಯತೆಯ ವಿರುದ್ಧದ ಅತ್ಯಂತ ಘೋರ ಅಪರಾಧಗಳಲ್ಲಿ ಒಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಧಾರ್ಮಿಕ ಸ್ವಾತಂತ್ರ್ಯ’ ಕುರಿತಾದ ಅಮೆರಿಕ ವಿದೇಶಾಂಗ ಇಲಾಖೆಯ ವರದಿಯ ಪ್ರಕಾರ, ಚೀನಾ ಮತ್ತು ಇರಾನ್ನಲ್ಲಿ  ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಅತ್ಯಂತ ಕಳವಳಕಾರಿಯಾಗಿದೆ. ಧಾರ್ಮಿಕ ನಂಬಿಕೆಯ ವಿರುದ್ಧದ ದಮನದ ವ್ಯಾಪಕ ಅಭಿಯಾನದಲ್ಲಿ ಚೀನಾವು 2022ರಲ್ಲಿ 10,000ಕ್ಕೂ ಅಧಿಕ ಜನರನ್ನು ಜೈಲಿಗೆ ತಳ್ಳಿದೆ. ದೇಶದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಡಿ ತರುವ ಉದ್ದೇಶ ಇದರ ಹಿಂದೆ ಇದೆ ಎಂದು ವರದಿ ಹೇಳಿದೆ.

Similar News