ಬೆಂಗಳೂರು: ಮಳೆ ನೀರಿನಲ್ಲಿ ಮುಳುಗಿದ ಕಾರು; ಯುವತಿ ಮೃತ್ಯು, 6 ಮಂದಿಯ ರಕ್ಷಣೆ

Update: 2023-05-21 14:31 GMT

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರವಿವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಕೆ.ಆರ್.ವೃತ್ತದಲ್ಲಿನ ಅಂಡರ್ ಪಾಸ್‍ನಲ್ಲಿ ಮಳೆ ನೀರಿನಿಂದ ಜಲಾವೃತಗೊಂಡ ಕಾರಿನಲ್ಲಿದ್ದ ಸಿಲುಕಿದ್ದ ಏಳು ಜನರ ಪೈಕಿ 6 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಅಸ್ವಸ್ಥಗೊಂಡಿದ್ದ ಇನ್ಫೋಸಿಸ್ ಕಂಪೆನಿಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.    

ಮೃತ ಯುವತಿಯನ್ನು ಆಂಧ್ರಪ್ರದೇಶ ಮೂಲದ ಭಾನುರೇಖಾ(23) ಎಂದು ಗುರುತಿಸಲಾಗಿದೆ. ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಿಂದ 200 ಮೀಟರ್ ದೂರದಲ್ಲೇ ಇರುವ ಕೆ.ಆರ್.ವೃತ್ತದ ಬಳಿಯಿರುವ ಅಂಡರ್ ಪಾಸ್‍ನಲ್ಲಿ ಮಳೆ ನೀರಿನಲ್ಲಿ ಕಾರು ಸಿಲುಕಿಕೊಂಡು ಯುವತಿ ಭಾನುರೇಖಾ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಕಾರಿನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ವಿಜಯವಾಡ ಮೂಲದ ಭಾನುರೇಖಾ ಅವರು ಇನ್ಫೋಸಿಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬವು ಬೆಂಗಳೂರಿಗೆ ಬಂದಿತ್ತು. ಅವರಿಗೆ ಬೆಂಗಳೂರಿನ ವಿವಿಧ ಸ್ಥಳಗಳನ್ನು ತೋರಿಸಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ. 

ಅಂಡರ್ ಪಾಸ್‍ನಲ್ಲಿದ್ದ ಮಳೆ ನೀರಿನಲ್ಲಿ ಕಾರು ಮುಳುಗಡೆ ಆಗುತ್ತಿರುವ ದೃಶ್ಯವನ್ನು ಕಂಡ ತಕ್ಷಣ ಸ್ಥಳೀಯ ಸಾರ್ವಜನಿಕರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಮುಂದಾಗಿದ್ದು, ಆರು ಜನರನ್ನು ರಕ್ಷಣೆ ಮಾಡಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಯುವತಿ ಮೃತಪಟ್ಟಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ನಿರಾಕರಣೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅನಂತರ, ಸರಕಾರ ಸೂಚನೆ ನೀಡಿದ ನಂತರ ಅವರನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟರಲ್ಲಿ ಯುವತಿ ಸ್ಥಿತಿ ಗಂಭೀರವಾಗಿದ್ದು, ಪರಿಶೀಲಿಸಿದ ಆಸ್ಪತ್ರೆಯ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಭಾರಿ ಮಳೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಮುಂಭಾಗದಲ್ಲಿ ಕಾರು, ಬೈಕ್ ಮೇಲೆ ಬೃಹತ್ ಮರ ಬಿದ್ದಿದ್ದು, ಕುಮಾರಕೃಪಾ ರಸ್ತೆಯನ್ನು ಬಂದ್ ಮಾಡಲಾಗಿದೆ. ನಗರದ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ, ನಾಗರಭಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ವೃತ್ತದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು ಆಲಿಕಲ್ಲುಗಳು ಬಿದ್ದಿವೆ.

ನೆಲಮಂಗಲ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು. ಭಾರೀ ಮಳೆಗೆ ವಾಹನ ಸವಾರರು ತತ್ತರಿಸಿ ಹೋಗಿದ್ದರು. ಅಲ್ಲದೇ ಹಲವು ಕಡೆ ಮಳೆ ಜತೆಗೆ ಜೋರು ಗಾಳಿ ಬೀಸಿದ ಪರಿಣಾಮ ಮರಗಳು ಧರೆಗುರುಳಿವೆ. ಹೀಗಾಗಿ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.

ನಗರದಲ್ಲಿ ಸೋಮವಾರ(ಮೇ 22) ಸಾಧಾರಣ ಮಳೆಯಾಗಲಿದೆ. ಮೇ 23ರಿಂದ ಮಳೆ ಪ್ರಮಾಣ ಅಧಿಕವಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆಯು ಶನಿವಾರ ಸಂಜೆ ವೇಳೆ ಅಬ್ಬರಿಸಿತ್ತು. ರವಿವಾರವೂ ಅಬ್ಬರಿಸಿದೆ. ಬಿರುಗಾಳಿ ಸಹಿತ ಆರ್ಭಟಿಸಿದ ಮಳೆಗೆ ನಗರದ ಹಲವೆಡೆ 20ಕ್ಕೂ ಅಧಿಕ ಮರಗಳು ನೆಲಕ್ಕುರುಳಿದ್ದವು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಹರಸಾಹಸಪಟ್ಟರು. 

Similar News