ಸಾವರ್ಕರ್ ತತ್ವ ಮುಚ್ಚಿಡುವ ಪ್ರಯತ್ನ ನಡೆಯಿತು: ಬಿ.ಎಲ್. ಸಂತೋಷ್
ಬೆಂಗಳೂರು: ‘ವೀರ ಸಾವರ್ಕರ್ ಎಂದೂ ಸತ್ಯವನ್ನು ಮುಚ್ಚಿಡಲು ಹೋಗಲಿಲ್ಲ. ಆದರೆ, ಅವರ ತತ್ವಗಳನ್ನು ಮುಚ್ಚಿಡುವ ಪ್ರಯತ್ನ ನಡೆಯಿತು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದ್ದಾರೆ.
ರವಿವಾರ ‘ಸಾವರ್ಕರ್ ಸಮಗ್ರ ಸಂಪುಟ-6: ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಹಿಂದು ಪದ- ಪದಶಾಹಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶಿವಾಜಿ, ಸಾವರ್ಕರ್, ನೇತಾಜಿಯನ್ನು ಒಂದು ಚಿಂತನೆಯ ಕಡೆ ನೂಕುವ ಕೆಲಸವಾಯಿತು. ಆದರೆ ಇವರ ವಿಚಾರಗಳ ಪ್ರವಾಹವನ್ನು ಎಂದೂ ಶಾಶ್ವತವಾಗಿ ತಡೆಯಲು ಸಾಧ್ಯವಾಗಲಿಲ್ಲ. ಆದುದರಿಂದ ಇಂದು ಈ ಮಹನೀಯರು ಎಲ್ಲರಿಗೂ ಅರ್ಥವಾಗುತ್ತಿದ್ದಾರೆ ಎಂದರು.
ಸಾವರ್ಕರ್, ನೇತಾಜಿ ಮತ್ತು ಸರ್ದಾರ್ ಪಟೇಲ್‍ರನ್ನು ಯಶಸ್ವಿಯಾಗಿ ಮರೆ ಮಾಚಲು ಬ್ರಿಟಿಷರು ಪ್ರಯತ್ನಿಸಿದರು. ನೆಹರೂ ಕೆಲವೇ ತಿಂಗಳುಗಳು ಜೈಲಿನಲ್ಲಿ ಇದ್ದರೂ ದೊಡ್ಡದಾಗಿ ಬಿಂಬಿಸಲಾಯಿತು. ಇಂದು ಇತಿಹಾಸದ ಎಲ್ಲ ಸತ್ಯಗಳು ಒಂದೊಂದಾಗಿ ಬಯಲಾಗುತ್ತಿದ್ದು, ಈ ಮೂವರು ಮಹನೀಯರ ಚಿಂತನೆಗಳನ್ನು ಬಹುತೇಕ ಮಂದಿ ಅಳವಡಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಬಿ.ಎಲ್. ಸಂತೋಷ್ ಹೇಳಿದರು.
ಸಾವರ್ಕರ್ ನಂತರ ದೇಶಭಕ್ತಿಯ ಸಾಹಿತ್ಯ ರಚನೆಯಲ್ಲಿ ದೊಡ್ಡ ಅಂತರ ಉಂಟಾಗಿತ್ತು. ಆದರೆ ಸಾವರ್ಕರ್ ಸಾಹಿತ್ಯ ಸಂಘದಿಂದ ಜಿ.ಬಿ ಹರೀಶ್, ಎಸ್.ಆರ್.ಲೀಲಾ ಸಾಕಷ್ಟು ಅವರ ಸಾಹಿತ್ಯದ ಅನುವಾದವನ್ನು ಮಾಡಿ ಅಂತರವನ್ನು ತುಂಬಿದ್ದಾರೆ. ರೋಹಿತ್ ಚಕ್ರತೀರ್ಥ ಕೂಡ ಸಾಕಷ್ಟು ಲೇಖನಗಳನ್ನು ಬರೆದು ಸಾವರ್ಕರ್ ಹಾದಿಯಲ್ಲಿ ನಡೆಯುತ್ತಿದ್ದಾರೆ. ಈಗ ದೇಶ ವೈಚಾರಿಕವಾಗಿ ಮುಂದುವರೆಯುತ್ತಿದ್ದು, ಒಳ್ಳೆಯ ನಾಳೆಗಳ ಕಡೆ ಸಾಗುತ್ತಿದ್ದೇವೆ ಎಂದು ಬಿ.ಎಲ್. ಸಂತೋಷ್ ತಿಳಿಸಿದರು.
ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಸಾವರ್ಕರ್ ಯಾವಾಗಲೂ ವಿವಾದಾತ್ಮಕ ವ್ಯಕ್ತಿಯಾಗಿ ಉಳಿಯಲು ಕಾರಣ ಅವರ ರಾಷ್ಟ್ರೀಯವಾದಿ ಮತ್ತು ಹಿಂದುತ್ವ ಸಿದ್ಧಾಂತ. ಅವರು ತೀರಿಕೊಂಡ 57 ವರ್ಷಗಳ ನಂತರ ಅವರನ್ನು ಗುರುತಿಸಲಾಗುತ್ತಿದೆ. ಆದರೆ ಇಷ್ಟು ವರ್ಷಗಳ ನಂತರ ನಾವು ಹಿಂದೂಗಳೆಂದು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ, ಇಂದಿಗೂ ಸಹ ನಾವು ಅಸುರಕ್ಷಿತ ಭಾವನೆ ಹೊಂದಿದ್ದೇವೆ ಎಂದರು.
ಲೋಕಮಾನ್ಯ ತಿಲಕ್ ಮತ್ತು ಸಾವರ್ಕರ್ ಸಿಂಧೂ ನದಿಯಿಂದಲೇ ನಮ್ಮ ಸಂಸ್ಕೃತಿ ಪ್ರಾರಂಭ, ಇದು ನಮ್ಮ ಪಿತೃಭೂಮಿ ಮತ್ತು ಪುಣ್ಯ ಭೂಮಿ ಎಂದು ಹೇಳಿದ್ದಾರೆ. ಈ ನೆಲೆದಲ್ಲಿ ನಾಸ್ತಿಕರಾಗಿರುವವರನ್ನು ಹಿಂದೂ ಎಂದು ಕರೆಯಲಾಗುತ್ತದೆ, ಅನೇಕ ನ್ಯಾಯಾಲಯದ ತೀರ್ಪು ಇದನ್ನು ಪುನರುಚ್ಚರಿಸಿದೆ ಎಂದು ಸಾತ್ಯಕಿ ಸಾವರ್ಕರ್ ತಿಳಿಸಿದರು.
ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಹಿಟ್ಲರ್ ಎಂದು ಕರೆಯುತ್ತಿದ್ದಾರೆ. ಆದರೆ, ಅವರೇ ತಮ್ಮ ಸ್ವಂತ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಾಗದೆ ಕೇರಳಕ್ಕೆ ಓಡಿ ಹೋಗಿ ಹೇಡಿಯಂತೆ ಬದುಕುತ್ತಿದ್ದಾರೆ. ಇತರ ದೇಶಗಳಲ್ಲಿ ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ಆದರೆ, ಸಾವರ್ಕರ್ ಎಂದಿಗೂ ತಮ್ಮ ಜನರ ಮೇಲೆ ಹಿಂಸೆಯನ್ನು ಪ್ರೋತ್ಸಾಹಿಸಲಿಲ್ಲ, ಅವರು ಎಂದಿಗೂ ಕೋಮುವಾದಿಯಾಗಿರಲಿಲ್ಲ ಎಂದು ಸಾತ್ಯಕಿ ಸಾವರ್ಕರ್ ತಿಳಿಸಿದರು.
ಲೇಖಕ ಡಾ.ಜಿ.ಬಿ. ಹರೀಶ ಮಾತನಾಡಿ, ಸಾವರ್ಕರ್ ಬಗೆಗೆ ಸಮಗ್ರ ಸಾಹಿತ್ಯದ ಅವಶ್ಯಕತೆ ಇತ್ತು. ಅದು ಇಂದು ಒಂದು ಹಂತಕ್ಕೆ ತಲುಪಿದೆ. ತಮ್ಮ ಮರಣಶಯೆಯಲ್ಲಿ ಸಾವರ್ಕರ್ ಸಮಗ್ರ ಸಂಪುಟಗಳನ್ನು ರಚಿಸಿದರು. ಅವರ ಸಾಹಿತ್ಯ ಉನ್ನತವಾಗಿದ್ದು, ದೇಶದ ಸಮಕಾಲೀನರ ಲೇಖಕರ ಸಾಲಿಗೆ ಅವರು ಸೇರುತ್ತಾರೆ. ಆಚಾರ್ಯ ಅತ್ರಿ ಜ್ಞಾನೇಶ್ವರರ ನಂತರ ಮರಾಠಾ ಸಾಹಿತ್ಯದ ಶ್ರೇಷ್ಠ ಲೇಖಕ ಸಾವರ್ಕರ್ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಎಸ್.ಆರ್. ಲೀಲಾ, ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ಲೇಖಕರಾದ ಹರ್ಷ ಸಮೃದ್ಧ, ರೋಹಿತ್ ಚಕ್ರತೀರ್ಥ, ರಮೇಶ ದೊಡ್ಡಪುರ ಉಪಸ್ಥಿತರಿದ್ದರು.