ಮತದಾರರ ಮನಸ್ಸು ಅರಿತವರಾರು?

Update: 2023-05-23 05:50 GMT

ಭಾರತೀಯ ಮತದಾರ ಅಭಿಪ್ರಾಯಗಳಿಗೆ, ಸಿದ್ಧಾಂತಗಳಿಗೆ ಬೆಲೆ ಕೊಡುತ್ತಾನೆ. ಅವನಿಗೆ ಹಿಂದೆಂದೂ ಇಲ್ಲದಿದ್ದ ಸೈದ್ಧಾಂತಿಕ ಬದ್ಧತೆಯಿದೆ. ತಾನು ನಂಬಿರುವ ಸಿದ್ಧಾಂತಗಳನ್ನು ನಂಬಿ, ಮೈಗೂಡಿಸಿಕೊಂಡಿರುವವರ ಕುರಿತು ಮತದಾರನಿಗೆ ಕಾಳಜಿಯಿದೆ. ತಮ್ಮ ಬದುಕಿನಲ್ಲಿ ಭೌತಿಕ ಸುಧಾರಣೆಗಳನ್ನು ಮತದಾರರು ಬಯಸುತ್ತಾರೆ, ನಿಜ. ಆದರೆ ಅವರು ಮತ ನೀಡುವ ಅಥವಾ ಸೋಲಿಸಬಯಸುವ ನಾಯಕನ/ಪಕ್ಷದ ಸೈದ್ಧಾಂತಿಕ ಸಂಕೇತಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬಾಳಿನ ಬವಣೆಗಳು, ಅನುಭವಗಳು ಮತ್ತು ಗುರಿಯಿಟ್ಟು ತಲುಪಿಸಲಾದ ಸಂದೇಶಗಳು ಮತದಾರನಲ್ಲಿ ಸಿದ್ಧಾಂತಗಳನ್ನು ಹುಟ್ಟುಹಾಕುತ್ತವೆ. ಸಮೀಕ್ಷೆಗೆ ಹೋಗುವ ಮಂದಿಗೆ ಈ ಮಾಹಿತಿಯನ್ನು ಮತದಾರ ನೀಡಲಾರ. ಬಹುಶಃ ಈ ಎಲ್ಲಾ ವಿಷಯಗಳು ಅವನಿಗೇ ತಿಳಿಯದಂತೆ ಆತನನ್ನು ಪ್ರಭಾವಿಸುತ್ತಿವೆ ಕೂಡ!


ಎಲ್ಲಾ ಚುನಾವಣೆಗಳನ್ನೂ ಜಾತಿ ರಾಜಕೀಯದ ವಿರುದ್ಧದ ಮತ, ಅಭಿವೃದ್ಧಿಗೆ ನೀಡಿದ ಮತ, ಭ್ರಷ್ಟಾಚಾರದ ವಿರುದ್ಧದ ಮತ, ಮಹದಾಸೆಯ ಮತ, ಪಾಳೆಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧದ ಮತ ಅಥವಾ ಆಡಳಿತ ವಿರೋಧಿ ಅಲೆಯ ಮತವೆಂದು ಹೇಳಿಬಿಡುವುದು ಪ್ರಮಾದವೇ ಸರಿ. ಭಾರತದಲ್ಲಿ ಮತದಾರಳ/ನ ಆಯ್ಕೆ ಸಂಕೀರ್ಣ ವಿಷಯಗಳಿಂದ ನಿರ್ಧಾರವಾಗುತ್ತದೆ. ಆ ಆಯ್ಕೆಗಳನ್ನು ಅರ್ಥ ಮಾಡಿಕೊಂಡರೆ ಭಾರತದ ಪ್ರಜಾತಂತ್ರವನ್ನು ಅರ್ಥ ಮಾಡಿಕೊಂಡಂತೆ.

-ರುಕ್ಮಿಣಿ ಎಸ್.,

‘ಹೋಲ್ ನಂಬರ್ಸ್‌ ಆ್ಯಂಡ್ ಹಾಫ್ ಟ್ರುತ್ಸ್’

ಕರ್ನಾಟಕ ಚುನಾವಣೆ ಫಲಿತಾಂಶದ ನಂತರ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಅವುಗಳಲ್ಲಿ ಕೋಮುವಾದಿಗಳು ಹರಡುತ್ತಿರುವ ಸುಳ್ಳು ಕೂಡ ಒಂದು. ಇಂದು ಒಂದು ಪಕ್ಷ ಗೆದ್ದಿಲ್ಲ ಪಕ್ಕದ ದೇಶ ಗೆದ್ದಿದೆ ಎಂಬ ಬಾಲಿಶ ಹೇಳಿಕೆಗಳು ಕೇಳಲ್ಪಡುತ್ತಿವೆ. ಅದೇ ಉಸಿರಲ್ಲಿ ಮುಂದುವರಿದು ಕರ್ನಾಟಕದ ಮುಸ್ಲಿಮರೆಲ್ಲರೂ ಆ ಪಕ್ಷಕ್ಕೆ ಮತ ಹಾಕಿದರು ಎಂದು ಒತ್ತಿ ಹೇಳುವ ಪ್ರಯತ್ನಗಳು ಕೂಡ ವ್ಯಾಪಕವಾಗಿ ಆಗಿವೆ. ಉಳಿದಂತೆ ಮಾಧ್ಯಮಗಳು ‘‘ಆಡಳಿತ ವಿರೋಧಿ ಅಲೆಯ’’ ಹಳೆಯ ಕ್ಯಾಸೆಟ್ ಅನ್ನೇ ಮತ್ತೊಮ್ಮೆ ಪ್ಲೇ ಮಾಡುತ್ತಿವೆ.

ಭಾರತದ ಮತದಾರ ಮತದಾನ ಮಾಡುವಾಗ ಅವನ ಆಯ್ಕೆಗಳು ಏನೆಲ್ಲಾ ಅಂಶಗಳಿಂದ ನಿರ್ಧರಿತವಾಗುತ್ತದೆ? ಆಯ್ಕೆ ತುಂಬ ಸರಳವಾದ ಪ್ರಕ್ರಿಯೆಯೇ? ಹಣ, ಧರ್ಮ, ಜಾತಿಗಳು ಮಾತ್ರ ಮತದಾರನ ಮೇಲೆ ಪ್ರಭಾವ ಬೀರುತ್ತವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಭಾರತದ ಪ್ರಮುಖ ಡೇಟಾ ಜರ್ನಲಿಸ್ಟ್ ಆದ ರುಕ್ಮಿಣಿ ಎಸ್. ಅವರ ಕೃತಿ ಹೋಲ್ ನಂಬರ್ಸ್‌ ಆ್ಯಂಡ್ ಹಾಫ್ ಟ್ರುತ್ಸ್ ಓದಿದೆ. ಅಲ್ಲಿ ಓದಿದ ಕೆಲ ಅಂಶಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಕೆಳಗಿನ ಅಭಿಪ್ರಾಯಗಳು ರುಕ್ಮಿಣಿಯವರದ್ದೇ ಆಗಿವೆ, ಅವರ ಅಭಿಪ್ರಾಯಗಳಿಗೆ ಪುರಾವೆಯಾಗಿ ಅಂಕಿಅಂಶಗಳನ್ನೂ ಒದಗಿಸಿದ್ದಾರೆ. ಭಾರತದಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿ ಬಂದರೆ ಆ ಕ್ಷೇತ್ರದಲ್ಲಿನ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುತ್ತದೆ ಎಂಬುದರಲ್ಲಿ ಯಾವ ಸಂಶಯಗಳಿಲ್ಲ. ಲೋಕಸಭೆಯನ್ನೇ ಗಣನೆಗೆ ತೆಗೆದುಕೊಂಡು ಭಾರತದಲ್ಲಿ ಈ ರೀತಿಯ ಮುಸ್ಲಿಮ್ ಪ್ರಾಬಲ್ಯದ ಎಷ್ಟು ಕ್ಷೇತ್ರಗಳಿವೆ ಎಂದು ಒಮ್ಮೆ ಕಣ್ಣಾಡಿಸಿದರೆ ನಿಮಗೆ ಕಾಣುವ ಸಂಖ್ಯೆ ಕೇವಲ ಹದಿನೈದು. ಈ ಹದಿನೈದು ಲೋಕಸಭಾ ಕ್ಷೇತ್ರಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆಯಿದೆ. 2019ರಲ್ಲಿ ಹದಿಮೂರು ಮುಸ್ಲಿಮ್ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದರು. ಯಾವುದೇ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ. 20ಕ್ಕಿಂತ ಕಡಿಮೆಯಿದ್ದರೆ ಅಂತಹ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯ ಗೆಲುವಿನ ಸಂಭವ ನೂರಕ್ಕೆ ಒಂದರಷ್ಟು ಮಾತ್ರ. ಶೇ. 95-100ರಷ್ಟು ಮುಸ್ಲಿಮ್ ಜನಸಂಖ್ಯೆಯಿದ್ದ ನಮ್ಮ ದೇಶದ ಮೂರು ಲೋಕಸಭಾ ಕ್ಷೇತ್ರಗಳು ಸದಾ ಮುಸ್ಲಿಮ್ ಅಭ್ಯರ್ಥಿಯನ್ನು ಆಯ್ಕೆ ಮಾಡಿವೆ. ಅವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿದವು. 2019ರಿಂದ ಕೇಂದ್ರಾಡಳಿತ ಪ್ರದೇಶವಾದ ನಂತರ ಆ ಮೂರು ಮುಸ್ಲಿಮ್ ಕ್ಷೇತ್ರಗಳು ಕೂಡ ಶಾಶ್ವತವಾಗಿ ಕಣ್ಮರೆಯಾಗಿವೆ.

ಮುಸ್ಲಿಮ್ ಅಲ್ಪಸಂಖ್ಯಾತೀಕರಣ ಅಥವಾ ಪೊಲಿಟಿಕಲ್ ಘೆಟ್ಟೋಐಸೆಷನ್ 2014ರ ನಂತರ ಮತ್ತಷ್ಟು ಕೀಳು ಮಟ್ಟಕ್ಕೆ ಜಾರಿದೆ. 2014-2019ರ ನಡುವೆ ದೇಶವನ್ನಾಳಿದ ಪಾರ್ಟಿಯಲ್ಲಿ ಮುಸ್ಲಿಮ್ ಧರ್ಮಕ್ಕೆ ಸೇರಿದ ಒಬ್ಬನೇ ಒಬ್ಬ ಚುನಾಯಿತ ಸಂಸದನೂ ಇರಲಿಲ್ಲ. ಶೇ. 17 ಮುಸ್ಲಿಮರಿರುವ ಬಿಹಾರದ 2020ರ ರಾಜ್ಯ ಚುನಾವಣೆಯಲ್ಲಿ ಯಾರೊಬ್ಬ ಮುಸ್ಲಿಮ್ ಕೂಡ ಶಾಸಕನಾಗಿ ಆಯ್ಕೆಯಾಗಲಿಲ್ಲ. ಪ್ರತೀ ಐವರಲ್ಲಿ ಒಬ್ಬ ಮುಸ್ಲಿಮನಿರುವ ಉತ್ತರ ಪ್ರದೇಶದಲ್ಲಿ ಕೂಡ ಮುಸ್ಲಿಮರಿಗೆ ಆಡಳಿತಾರೂಢ ಪಕ್ಷ ಟಿಕೆಟ್ ನಿರಾಕರಿಸಿತ್ತು. ಶೇ. 9 ಮುಸ್ಲಿಮರಿರುವ ಗುಜರಾತ್‌ನಲ್ಲಂತೂ ಮುಸ್ಲಿಮರ ದನಿಯೇ ಅಡಗಿ ಹೋಗಿದೆ.

ನಮ್ಮ ಮಾಧ್ಯಮಗಳು ನಂಬಿರುವ ಸಮೀಕ್ಷೆಗಳಲ್ಲಿ ಹಿಂದೂ- ಮುಸ್ಲಿಮರು ಏಕ ದನಿಯಲ್ಲಿ ನಮ್ಮ ವೋಟು ಅಭಿವೃದ್ಧಿಗೆಂದು ಹೇಳಿದರೂ, ಪೊಲಿಟಿಕಲ್ ಸ್ಪೇಸ್, ರಾಜಕೀಯ ಹಕ್ಕು ನಿರಾಕರಣೆ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ದೈಹಿಕ ಅಸುರಕ್ಷತೆಯ, ಭಯ ಪ್ರತಿನಿತ್ಯ ಕಾಡುವ ಮುಸ್ಲಿಮರಿಗೆ ಅಭಿವೃದ್ಧಿಯೊಂದೇ ಮತದಾನಕ್ಕೆ ಎಂದಿಗೂ ಪ್ರೇರಣೆಯಾಗಲಾರದು.

ಮುಸ್ಲಿಮನೊಬ್ಬ ಮತಚಲಾಯಿಸುವಾಗ ಅವನ ಮನದಲ್ಲಿ ನಾನಾ ಯೋಚನೆಗಳು ಸುಳಿದಾಡುತ್ತಿರುತ್ತವೆ. ಫೆಬ್ರವರಿ 2020, ದಿಲ್ಲಿ ರಾಜ್ಯ ಚುನಾವಣೆ. ಆಗ ದಿಲ್ಲಿಯಲ್ಲಿ ಸಿಎಎ ಅಬ್ಬರ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ‘ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್’ ಆರ್ಭಟ. ಇಂತಹ ಸಮಯದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ ಸಮೀಕ್ಷೆಗಳು ಸಿಎಎಯನ್ನು ಸಂಪೂರ್ಣವಾಗಿ ಕಡೆಗಣಿಸಿ ‘‘ಅಭಿವೃದ್ಧಿಗಾಗಿ’’ ನಡೆಯುತ್ತಿರುವ ಚುನಾವಣೆಯಿದು ಎಂದು ಪ್ರತಿಪಾದಿಸಿದ್ದವು. ಕೇಜ್ರಿವಾಲ್ ಅವರ ಬಿಟ್ಟಿ ಕೊಡುಗೆಗಳು / ರಾಷ್ಟ್ರವಾದ ಎಂಬ ಟ್ಯಾಗ್‌ಲೈನ್ ಸೃಷ್ಟಿ ಮಾಡಲಾಯಿತು. ಆದರೆ ಆಳವಾದ ಅಧ್ಯಯನ ಮಾಡಿದವರಿಗೆ ಕಂಡ ಸತ್ಯವೇ ಬೇರೆ.

ದಿಲ್ಲಿಯ ಮೇಲ್ಜಾತಿಯ ಹಿಂದೂಗಳು ಕಮಲಕ್ಕೆ ಮತ ಹಾಕಿದರೆ, ಮುಸ್ಲಿಮ್ ಮತದಾರರ ಸಿಂಹಪಾಲು ಹೋಗಿದ್ದು ಆಮ್ ಆದ್ಮಿ ಪಾರ್ಟಿಗೆ. ಮುಸ್ಲಿಮರ ಬಹುಪಾಲು ವೋಟು ಆಮ್ ಆದ್ಮಿ ಪಾರ್ಟಿಗೆ ಬಿದ್ದರೆ, ಕೇಜ್ರಿವಾಲ್ ಸಿಎಎ ಕುರಿತಾಗಿ ತಾಳಿದ ತಟಸ್ಥ ನಿಲುವು ಮತ್ತು ಪಠಿಸಿದ ಅಭಿವೃದ್ಧಿ ಮಂತ್ರದಿಂದ ಸಾಕಷ್ಟು ಹಿಂದೂ ಮತಗಳು ಕೂಡ ಆಮ್ ಆದ್ಮಿ ಪಾರ್ಟಿ ತೆಕ್ಕೆಗೆ ಸೇರಿದವು.

ಇಲ್ಲಿ ದಿಲ್ಲಿಯ ಮುಸ್ಲಿಮ್ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಮತವೇಕೆ ಹಾಕಲಿಲ್ಲ ಎಂಬ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಿಎಎಯಂತಹ ವಿಷಯಗಳು ಭಾರತೀಯ ಮತದಾರರನ್ನು ಧ್ರುವೀಕರಣಗೊಳಿಸಿದವು. ಮುಸ್ಲಿಮರನ್ನು ತುಂಬ ಪ್ರಾಕ್ಟಿಕಲ್ ಆಗಿ ಯೋಚಿಸುವಂತೆಯೂ ಮಾಡಿದವು ಎಂದರೆ ತಪ್ಪಾಗಲಾರದು. ದಿಲ್ಲಿಯಲ್ಲಿ ಕಮಲ ಪಕ್ಷದ ವಿರುದ್ಧ ಗೆಲ್ಲುವ ಅತಿ ಹೆಚ್ಚು ಸಾಧ್ಯತೆಗಳಿದ್ದುದು ಕೇಜ್ರಿವಾಲರ ಆಮ್ ಆದ್ಮಿ ಪಾರ್ಟಿಗೆ ಮಾತ್ರ. ಈ ಅರಿವಿನಿಂದಲೇ ಅಲ್ಲಿನ ಮುಸ್ಲಿಮ್ ಮತದಾರ ಮತ ಹಾಕಿದ್ದು! ಕಮಲ-ಕೈ ನೇರ ಹಣಾಹಣಿ ಇರುವಂತಹ ರಾಜ್ಯಗಳಾದ ರಾಜಸ್ಥಾನ್, ಗುಜರಾತ್, ಮಧ್ಯಪ್ರದೇಶದಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರೆ, ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಮುಸ್ಲಿಮರು ಕಾಂಗ್ರೆಸ್ ಮೀರಿ ಕಮಲಕ್ಕೆ ಹೊರತಾದ ಮತ್ತೊಂದು ಪಕ್ಷಕ್ಕೆ ಒಲವು ತೋರಿದ್ದಾರೆ.

ದಿಲ್ಲಿ 2020ರ ಚುನಾವಣೆಯಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ಮತ ಚಲಾಯಿಸಿದರು. ಅವರಲ್ಲಿ ರಾಜಕೀಯದ ಅರಿವಿತ್ತು, ನಿರಂತರ ಧ್ರುವೀಕರಣ ಅವರನ್ನು ಒಂದುಗೂಡಿಸಿತ್ತು ಕೂಡ. ದಿಲ್ಲಿಯ ಜಾಮಿಯಾ ನಗರ್‌ನಲ್ಲಿ ಪುಟ್ಟ ಅಂಗಡಿಯೊಂದರ ಮಾಲಕನಾದ ಅನಸ್ ಅಲ್ವಿ ಹೇಳುವ ಮಾತುಗಳು ಇಲ್ಲಿ ಪ್ರಸ್ತುತ- ‘‘ಕೇಜ್ರಿವಾಲ್ ನನಗೆ ಯಾವಾಗಲೂ ತೀರಾ ಹಿಂದುತ್ವವಾದಿಯಂತೆಯೇ ಕಂಡಿದ್ದಾರೆ. ಆದರೆ ಆಗ ನಮಗೆ ರಕ್ಷಣೆ ಬೇಕಿತ್ತು. ಪೊಲೀಸರಿಗೆ ಹಫ್ತಾ ಪಾವತಿಸಿದಂತೆ ಅದನ್ನು ಭಾವಿಸಬೇಕು.’’

ರಾಜಕೀಯ ವಿಜ್ಞಾನಿಗಳಾದ ಪ್ರದೀಪ್ ಚಿಬ್ಬೇರ್ ಮತ್ತು ರಾಹುಲ್ ವರ್ಮಾ ಅವರ ಸಂಶೋಧನೆಯ ಪ್ರಕಾರ, 1990ರ ನಂತರ ಬಹುತೇಕ ಎಲ್ಲಾ ಪಕ್ಷಗಳ ಆರ್ಥಿಕ ನೀತಿಗಳು ಒಂದೇ ರೀತಿಯಲ್ಲಿದ್ದರೆ ಧಾರ್ಮಿಕ ನಿಲುವುಗಳ ಭಿನ್ನತೆ ತೀವ್ರ ಮತ್ತು ತೀಕ್ಷ್ಣವಾಗುತ್ತಿದೆ. ಕಳೆದ ಮೂರು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಲಾದ ಇಸ್ಲಾಮೊಫೋಬಿಯಾ, ದೇಶದ ಮುಸ್ಲಿಮರಲ್ಲಿ ಸೃಷ್ಟಿಸಲಾಗಿರುವ ಪರಕೀಯ ಭಾವ, ಭಯ, ಸುರಕ್ಷತೆಯ ಹಂಬಲ ಮುಸ್ಲಿಮರ ಮತದಾನದ ಮಾದರಿಯನ್ನು ನಿರ್ಧರಿಸುತ್ತಿದೆ ಎಂಬುದಂತೂ ಸ್ಪಷ್ಟ.

ಚುನಾವಣೆ ಮುಗಿದ ಮೇಲೆ ಮತ್ತೊಂದು ಮಾತು ಸದಾ ಎಲ್ಲೆಡೆ ಹರಿದಾಡುತ್ತದೆ. ಅಭ್ಯರ್ಥಿ/ಪಕ್ಷ ಹಣದ ಹೊಳೆಯನ್ನೇ ಹರಿಸಿದ್ದರಿಂದ ಜಯ ಸಾಧಿಸಿದರೆಂದು. ಆದರೆ ಪಕ್ಷಗಳು ಹಣ ಹಂಚಿದ ಮಾತ್ರಕ್ಕೆ ಗೆದ್ದುಬಿಡುತ್ತೇವೆ ಎಂಬ ನಂಬಿಕೆಯಿಂದ ದೂರ ನಡೆದಿವೆ. ಹಂಚಿದ ಹಣ ಅವರ ಗೆಲುವನ್ನೇನೂ ಖಾತರಿಪಡಿಸುವುದಿಲ್ಲ. ಆದರೆ ಮತದಾರರು ಪಕ್ಷದ ಅಭ್ಯರ್ಥಿಯನ್ನು ಗುರುತಿಸಿ, ಗಂಭೀರವಾಗಿ ಪರಿಗಣಿಸಬೇಕಾದರೆ ಹಣ ಹಂಚುವುದು ಅನಿವಾರ್ಯ ವಾಗಿದೆ. ಹಣ ಹಂಚುವುದು ರೂಢಿಗೆ ಬಂದ ಮೇಲಾದ ಬೆಳವಣಿಗೆಗಳಿವು.

 ಹಣ ಮತ್ತು ಮತದಾರರ ಆಯ್ಕೆಯನ್ನು ತಿಳಿಸುವ ಸಣ್ಣ ಉದಾಹರಣೆ ನೋಡುವ. ಮತದಾನದ ಮುಂಚಿನ ದಿನ ಹಣ ಚೆನ್ನೈ ಬರ್ಮಾ ಕಾಲನಿಯ ಮತದಾರರಾದ ವಾಸಂತಿ ಮತ್ತು ವಲ್ಲಿ ಕೈಸೇರುತ್ತದೆ. ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾರ ಅಭಿಮಾನಿಯಾದ ವಾಸಂತಿ ತನ್ನ ಮತವನ್ನು ಎಐಡಿಎಂಕೆಗೆ ಚಲಾಯಿಸುತ್ತಾಳೆ. ಗಂಡಸರೇ ಆವರಿಸಿಕೊಂಡಿರುವ ರಾಜಕೀಯದಲ್ಲಿ ಜಯಲಲಿತಾ ಮಾಡಿದ ಸಾಧನೆಯನ್ನು ವಾಸಂತಿ ಎಂದೂ ಮರೆಯಲಾರಳು. ಇನ್ನೊಂದೆಡೆ ವಲ್ಲಿಯ ಮತ ಡಿಎಂಕೆ ಪಕ್ಷಕ್ಕೆ ಹೋಗುತ್ತದೆ. ಉತ್ತರ ಭಾರತದವರ ಹಾವಳಿ, ಹಿಂದಿ ಹೇರಿಕೆಯನ್ನು ತಡೆಗಟ್ಟಿ ತಮಿಳರ ಆತ್ಮಗೌರವ ಉಳಿಸುವ ಏಕೈಕ ಪಕ್ಷ ಡಿಎಂಕೆ ಎಂಬುದು ಅವಳ ಅನಿಸಿಕೆ. ವಾಸಂತಿ, ವಲ್ಲಿ ಇಬ್ಬರೂ ಹಣ ಪಡೆದರೂ ಅವರ ಆಯ್ಕೆಯನ್ನು ನಿರ್ಧರಿಸಿದ್ದು ಹಣವಲ್ಲ! ಅವರು ಮತಗಟ್ಟೆಗೆ ಬರುವರು ಎಂಬ ಖಾತ್ರಿಯನ್ನು ಮಾತ್ರ ಪಕ್ಷಕ್ಕೆ ಆ ಹಣ ನೀಡಿತ್ತು.

ಕೊನೆಯ ಮಾತು- ಭಾರತೀಯ ಮತದಾರ ಅಭಿಪ್ರಾಯಗಳಿಗೆ, ಸಿದ್ಧಾಂತಗಳಿಗೆ ಬೆಲೆ ಕೊಡುತ್ತಾನೆ. ಅವನಿಗೆ ಹಿಂದೆಂದೂ ಇಲ್ಲದಿದ್ದ ಸೈದ್ಧಾಂತಿಕ ಬದ್ಧತೆಯಿದೆ. ತಾನು ನಂಬಿರುವ ಸಿದ್ಧಾಂತಗಳನ್ನು ನಂಬಿ, ಮೈಗೂಡಿಸಿಕೊಂಡಿರುವವರ ಕುರಿತು ಮತದಾರನಿಗೆ ಕಾಳಜಿಯಿದೆ. ತಮ್ಮ ಬದುಕಿನಲ್ಲಿ ಭೌತಿಕ ಸುಧಾರಣೆಗಳನ್ನು ಮತದಾರರು ಬಯಸುತ್ತಾರೆ, ನಿಜ. ಆದರೆ ಅವರು ಮತ ನೀಡುವ ಅಥವಾ ಸೋಲಿಸಬಯಸುವ ನಾಯಕನ/ಪಕ್ಷದ ಸೈದ್ಧಾಂತಿಕ ಸಂಕೇತಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬಾಳಿನ ಬವಣೆಗಳು, ಅನುಭವಗಳು ಮತ್ತು ಗುರಿಯಿಟ್ಟು ತಲುಪಿಸಲಾದ ಸಂದೇಶಗಳು ಮತದಾರನಲ್ಲಿ ಸಿದ್ಧಾಂತಗಳನ್ನು ಹುಟ್ಟುಹಾಕುತ್ತವೆ. ಸಮೀಕ್ಷೆಗೆ ಹೋಗುವ ಮಂದಿಗೆ ಈ ಮಾಹಿತಿಯನ್ನು ಮತದಾರ ನೀಡಲಾರ. ಬಹುಶಃ ಈ ಎಲ್ಲಾ ವಿಷಯಗಳು ಅವನಿಗೇ ತಿಳಿಯದಂತೆ ಆತನನ್ನು ಪ್ರಭಾವಿಸುತ್ತಿವೆ ಕೂಡ!

Similar News