ಗುಲಾಬಿ ನೋಟಿಗೆ ಬೈ ಬೈ

Update: 2023-05-23 05:56 GMT

ಈ ನಿರ್ಧಾರದಲ್ಲೂ ಹಲವು ಗೊಂದಲಗಳಿವೆ. ಉದಾಹರಣೆಗೆ 2,000 ರೂ. ಮುಖಬೆಲೆಯ ನೋಟು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ ಎನ್ನಲಾಗಿದೆ. ಇನ್ನೊಂದೆಡೆ ಇದನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಸೆಪ್ಟಂಬರ್ 30ರವರೆಗೆ ಮಾತ್ರ ಎನ್ನಲಾಗಿದೆ. ಹಾಗಾದರೆ ನಂತರವೂ ಇದು ಕಾನೂನು ಬದ್ಧವಾಗಿರುತ್ತದೆ ಅನ್ನುವುದಕ್ಕೆ ಅರ್ಥವಾದರೂ ಏನು?

ಎರಡು ಸಾವಿರ ರೂ. ಮುಖಬೆಲೆಯ ನೋಟುಗಳು ಹಲವು ದಿನಗಳಿಂದಲೇ ಅಪರೂಪವಾಗಿತ್ತು, ಎಟಿಎಂಗಳಲ್ಲೂ ಸಿಗುತ್ತಿರಲಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೂ ಆಗಿತ್ತು. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಹಿಂದೆೆಗೆದುಕೊಂಡಿದೆ. ತನ್ನ ಸ್ವಚ್ಛ ನೋಟು ನೀತಿಗೆ ಅನುಗುಣವಾಗಿ ಅಂದರೆ ನೋಟುಗಳನ್ನು ಸ್ವಚ್ಛವಾಗಿ ಹಾಗೂ ಚಲಾವಣೆಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಜಾರಿಯಾದ ನೀತಿಗೆ ಅನುಗುಣವಾಗಿ 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. 

ಆದರೆ 2,000 ರೂ. ಮುಖಬೆಲೆಯ ನೋಟುಗಳು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ. ನೋಟುಗಳ ವಾಪಸಾತಿಯನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ಮತ್ತು ಇದಕ್ಕಾಗಿ ಸಾರ್ವಜನಿಕರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಲು 2023ರ ಸೆಪ್ಟಂಬರ್ 30ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಬ್ಯಾಂಕುಗಳು 2,000 ರೂ. ಮುಖಬೆಲೆಯ ನೋಟುಗಳನ್ನು ಖಾತೆಗೆ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಲಾಗಿದೆ. 

ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂದೆಗೆದುಕೊಳ್ಳುವುದಕ್ಕೆ ಹಲವು ಕಾರಣಗಳನ್ನು ನೀಡಿದೆ.
2017ರ ಮಾರ್ಚ್ ವೇಳೆಗೆ ಸುಮಾರು 89ಶೇ. 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಅಂದರೆ ಅವುಗಳ 4ರಿಂದ 5 ವರ್ಷಗಳ ಜೀವಿತಾವಧಿ ಮುಗಿಯಲಿದೆ. ಇದೇ ವಾದವನ್ನು ಮುಂದುವರಿಸುವುದಾದರೆ ಲೆಕ್ಕವಿಲ್ಲದಷ್ಟು 500 ರೂ. ಮುಖಬೆಲೆಯ ಜೀವಿತಾವಧಿಯೂ ಮುಗಿದಿರಬೇಕಲ್ಲವೆ?

ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾಗಿದೆ. 2018ರ ಮಾರ್ಚ್ 31ರಲ್ಲಿ ಒಟ್ಟಾರೆ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳ ಮೌಲ್ಯವು 6.73 ಲಕ್ಷಕೋಟಿ ರೂ.ಗಳು. ಮಾರ್ಚ್ 2023, ಮಾರ್ಚ್ 31ರ ವೇಳೆಗೆ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟುಗಳ ಮೌಲ್ಯ ರೂ. 3.63 ಲಕ್ಷ ಕೋಟಿಯಾಗಿತ್ತು. 2018 ಮಾರ್ಚ್ 31ರಲ್ಲಿ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳ ಸಂಖ್ಯೆ ಶೇ. 37.3. 2023 ಮಾರ್ಚ್ 31ರ ವೇಳೆಗೆ ಅದರ ಪ್ರಮಾಣ ಶೇ. 10.8ಕ್ಕೆ ಇಳಿದಿತ್ತು.

ಈ ನೋಟುಗಳನ್ನು ವ್ಯವಹಾರದಲ್ಲಿ ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಅದೂ ಅಲ್ಲದೆ ಜನರ ವ್ಯವಹಾರಕ್ಕೆ ಬೇಕಾದಷ್ಟು ಇತರ ಮುಖಬೆಲೆಯ ನೋಟುಗಳ ಸಂಗ್ರಹವಿದೆ. ಹಾಗಾಗಿ 2,000 ರೂ. ನೋಟುಗಳನ್ನು ಹಿಂದೆಗೆದುಕೊಳ್ಳಬಹುದು ಎನ್ನುವುದು ಆರ್ಬಿಐ ವಾದ.

ನಿಜ, ಆರು ವರ್ಷಗಳ ಹಿಂದೆ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂದೆಗೆದುಕೊಳ್ಳುವಾಗ ಆದಷ್ಟು ತೊಂದರೆ 2,000 ರೂ. ಹಿಂದೆಗೆದುಕೊಳ್ಳುವಾಗ ಆಗುವುದಿಲ್ಲ. ಆಗ ಚಲಾವಣೆಯಲ್ಲಿದ್ದ ಶೇ. 86ರಷ್ಟು ಹಣವನ್ನು ಹಿಂದೆೆಗೆದುಕೊಳ್ಳಲಾಗಿತ್ತು. ಈಗ ಹಿಂದೆೆಗೆದುಕೊಳ್ಳುತ್ತಿರುವುದು ಶೇ. 10.8ರಷ್ಟು ನೋಟುಗಳು ಮಾತ್ರ. 2019ರಲ್ಲೇ ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿತ್ತು. 

ಈ ನೋಟುಗಳ ಚಲಾವಣೆ ತಾಂತ್ರಿಕವಾಗಿ ನಿಂತಿಲ್ಲದಿದ್ದರೂ ಬಹುತೇಕ ಚಲಾವಣೆಯಿಂದ ಹೋದಂತೆಯೇ. ಯಾಕೆಂದರೆ ಆರ್ಬಿಐ ಇದನ್ನು ಹಿಂದೆಗೆದುಕೊಂಡಿರುವುದರಿಂದ ಜನ ಇದನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚು.

ಆದರೆ ಆರ್ಬಿಐ ನೀಡುವ ಕೆಲವು ಕಾರಣಗಳನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗಬಹುದು. ಉದಾಹರಣೆಗೆ ನೋಟುಗಳ ಜೀವಿತಾವಧಿ ಮುಗಿಯುತ್ತಿದೆ ಅನ್ನುವುದು. ಆರ್ಬಿಐ ಹಾಗೂ ಸರಕಾರವೇ ಸಂಸತ್ತಿನಲ್ಲಿ ಒಪ್ಪಿಕೊಂಡಂತೆ 2,000 ರೂ. ಮುಖಬೆಲೆಯ ನೋಟುಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದೆ. ಹಾಗೆ ಸಂಗ್ರಹಿಸಿಟ್ಟ, ಚಲಾವಣೆಗೆ ಬಾರದ ಹಣ ಹಳತಾಗಿರುವುದಕ್ಕೆ ಕಾರಣವಿಲ್ಲ.

ಎರಡನೆಯದಾಗಿ ನಗದು ಅಮಾನ್ಯದಿಂದ ಕಪ್ಪುಹಣವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವುದನ್ನು ಹಿಂದಿನ ಅನುಭವ ತಿಳಿಸಿದೆ. ಹಣ ಕೂಡಿಟ್ಟವರಿಗೆ ಅದನ್ನು ವಿನಿಮಯ ಮಾಡಿಕೊಳ್ಳುವ ಕ್ರಮ ಗೊತ್ತು, ಅದಕ್ಕೆ ಬೇಕಾದ ಸಾಮರ್ಥ್ಯವೂ ಇರುತ್ತದೆ.

ಕೊನೆಗೂ ಸಮಸ್ಯೆಯಾಗುವುದು ವ್ಯವಹಾರವನ್ನು ನಗದಿನಲ್ಲಿ ಮಾಡುವ ಉದ್ದಿಮೆಗಳಿಗೆ. ವಿಶೇಷವಾಗಿ ಕಟ್ಟಡ ನಿರ್ಮಾಣ, ಕೃಷಿ ಮೊದಲಾದವು ಹೆಚ್ಚಾಗಿ ನಗದನ್ನೇ ಅವಲಂಬಿಸಿವೆ.

ಜೊತೆಗೆ ಈ ನಿರ್ಧಾರದಲ್ಲೂ ಹಲವು ಗೊಂದಲಗಳಿವೆ. ಉದಾಹರಣೆಗೆ 2,000 ರೂ. ಮುಖಬೆಲೆಯ ನೋಟು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ ಎನ್ನಲಾಗಿದೆ. ಇನ್ನೊಂದೆಡೆ ಇದನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಸೆಪ್ಟಂಬರ್ 30ರವರೆಗೆ ಮಾತ್ರ ಎನ್ನಲಾಗಿದೆ. ಹಾಗಾದರೆ ನಂತರವೂ ಇದು ಕಾನೂನು ಬದ್ಧವಾಗಿರುತ್ತದೆ ಅನ್ನುವುದಕ್ಕೆ ಅರ್ಥವಾದರೂ ಏನು?

ಜೊತೆಗೆ ಒಂದು ಸಲಕ್ಕೆ 20,000 ರೂ. ಮಿತಿಯನ್ನು ಹಾಕಿದ್ದಾರೆ. ಆದರೆ ದಿನಕ್ಕೆ ಎಷ್ಟು ಸಲ ವಿನಿಮಯ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಮಿತಿ ಇದ್ದಂತಿಲ್ಲ. ಅಂದರೆ ಈ ಆದೇಶ ಇನ್ನು ಹಲವು ತಿದ್ದುಪಡಿಗಳನ್ನು ಕಾಣಲಿದೆ. 
ಮೊದಲಿನಿಂದಲೂ ಈ 2,000 ಮುಖಬೆಲೆಯ ನೋಟಿಗೆ ಸಂಬಂಧಿಸಿದಂತೆ ವಿವಾದಗಳಿದ್ದೇ ಇದೆ. ಮೊದಲಲ್ಲಿ ದೊಡ್ಡ ಮುಖಬೆಲೆಯ ನೋಟುಗಳನ್ನು ಕೂಡಿಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಹಾಗಾಗಿ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿಯವರು ಘೋಷಿಸಿದ್ದರು. ಆದರೆ ಅದಕ್ಕಿಂತ ದೊಡ್ಡ ಮೌಲ್ಯದ 2,000 ರೂ. ಮುಖಬೆಲೆಯ ನೋಟನ್ನು ಜಾರಿಗೆ ತಂದು ವಿವಾದ ಸೃಷ್ಟಿಸಿದ್ದರು.

ಎರಡನೆಯದಾಗಿ ಇದನ್ನು ಆರ್ಬಿಐ ಕಾಯ್ದೆಯ ಸೆಕ್ಷನ್ 24(2) ರ ಅಡಿಯಲ್ಲಿ ತರಲಾಯಿತು. ಆದರೆ ಅದು ಆರ್ಬಿಐಗೆ ನೋಟು ಮುದ್ರಿಸುವ ಅಧಿಕಾರವನ್ನು ಕೊಡುವುದಿಲ್ಲ. ಆಮೇಲೆ ಅದನ್ನು ಸೆಕ್ಷನ್ 24(1) ಎಂದು ಸರಿಪಡಿಸಿಕೊಳ್ಳಲಾಯಿತು.

2,000 ರೂ. ಮುಖಬೆಲೆಯ ನೋಟಿನ ಗಾತ್ರವೂ ಬೇರೆಯಾಗಿದ್ದರಿಂದ ಎಟಿಎಂನಲ್ಲಿ ಬಳಸುವುದಕ್ಕೆ ಪ್ರಾರಂಭದಲ್ಲಿ ಸಾಧ್ಯವಾಗಲಿಲ್ಲ. ಎಟಿಎಂನಲ್ಲಿ ಸೂಕ್ತ ಮಾರ್ಪಾಡು ಮಾಡಬೇಕಾಯಿತು.

ಈ ನೋಟನ್ನು ನಕಲು ಮಾಡುವುದು ಸಾಧ್ಯವಾಗಿತ್ತು. ಹಲವು ಖೋಟಾ ನೋಟುಗಳು ಪತ್ತೆಯಾದ ವರದಿಗಳು ಪ್ರಕಟವಾಗಿದ್ದವು. ಸರಕಾರ ಮುದ್ರಿಸುವುದನ್ನು ನಿಲ್ಲಿಸಿದ ಮೇಲೆ ಖಾಸಗಿಯವರು ಮುದ್ರಿಸಿದ್ದರು. 

ಏನೇ ಇರಲಿ, ಈ ನಿರ್ಧಾರದ ಹಿಂದೆ ಆರ್ಥಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳು ಮುಖ್ಯವಾಗಿರಬಹುದು ಎಂದು ಹಲವರು ಅನುಮಾನಿಸಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಶೇ. 40 ಕಮಿಷನ್ ಆರೋಪ ಬಿಜೆಪಿ ಸರಕಾರದ ಸೋಲಿಗೆ ಒಂದು ಮುಖ್ಯ ಕಾರಣವಾಗಿದೆ. ಅದನ್ನು ಅಳಿಸಲು ತಾವು ಇನ್ನು ಕಪ್ಪುಹಣವನ್ನು ನಿರ್ಮೂಲನ ಮಾಡಲು ಉತ್ಸುಕರಾಗಿದ್ದೇವೆ ಎಂದು ತೋರಿಸುವ ಪ್ರಯತ್ನವಾಗಿರಬಹುದು.

ಇನ್ನು ಕೆಲವು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅದು ಕೂಡ ಈ ನಿರ್ಧಾರದ ಹಿನ್ನೆಲೆಯಲ್ಲಿರಬಹುದು. ಹಿಂದೆ ನಗದು ಅಮಾನ್ಯವನ್ನು ಉತ್ತರ ಪ್ರದೇಶದ ಚುನಾವಣೆಯ ಮೊದಲು ಮಾಡಲಾಗಿತ್ತು. ಹಾಗಾಗಿ ಅನುಮಾನಗಳನ್ನು ತಳ್ಳಿಹಾಕಲಾಗುವುದಿಲ್ಲ.

Similar News