ಬಾಯಿ ಮುಚ್ಚಿಸಿ ಕೂರಿಸೋದು ಸರಿಯಲ್ಲ..'; ಯು.ಟಿ ಖಾದರ್ ಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ

''ಅವರು ಎಲ್ಲಿ ಹೋದರೂ ಅದರ ಘನತೆಯನ್ನು ಹೆಚ್ಚಿಸುವರು..''

Update: 2023-05-23 13:48 GMT

ಬೆಂಗಳೂರು: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು.ಟಿ ಖಾದರ್ ಅವರನ್ನು ಆಯ್ಕೆ ಮಾಡಿರುವ ಕಾಂಗ್ರೆಸ್ ನಾಯಕರ ನಡೆಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

'ಖಾದರ್ ಅವರಿಗೆ ಸ್ಪೀಕರ್ ಹೊರತು ಪಡಿಸಿ ಇತರ ಯಾವುದೇ ಖಾತೆಗಳನ್ನು ಕೊಡಿ' ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ತಿಳಿಸಿದ್ದಾರೆ. 

ಈ ಸಂಬಂಧ  ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಶಶಿಧರ್ ಹೆಮ್ಮಾಡಿ, ''ಉಡುಪಿ-ದಕ್ಷಿಣ ಕನ್ನಡದಿಂದ ಆಯ್ಕೆಯಾದವರೇ ಇಬ್ಬರು ಕಾಂಗ್ರೆಸ್ ಶಾಸಕರು. ಅದರಲ್ಲಿ ಯು.ಟಿ. ಖಾದರ್ ಒಬ್ಬರು. ರಾಜ್ಯದಲ್ಲಿ ಆಯ್ಕೆಯಾಗಿರುವ ಮುಸ್ಲಿಂ ಶಾಸಕರ ಪೈಕಿ ಅತ್ಯಂತ ಸಮರ್ಥರು. ಖಾದರ್ ಅವರಿಗೆ ಒಳ್ಳೆಯ ಖಾತೆಯಲ್ಲಿ ಸಚಿವ ಸ್ಥಾನ ಕೊಡಬೇಕು. ದುಡಿಸಿಕೊಳ್ಳಬೇಕು. ದಕ್ಷಿಣ ಕನ್ನಡದಲ್ಲೂ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು. ಅದನ್ನೆಲ್ಲ ಬಿಟ್ಟು ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿ ಬಾಯಿ ಮುಚ್ಚಿಸಿ ಕೂರಿಸೋದು ಮುಸ್ಲಿಂ ಸಮುದಾಯಕ್ಕೆ ಮತ್ತು ಕರಾವಳಿಗೆ ಮಾಡುವ ದ್ರೋಹ.  ಮುಸ್ಲಿಮರನ್ನು ರಾಷ್ಟ್ರಪತಿ, ಸ್ಪೀಕರ್ ಮಾಡಿ ಬಿಜೆಪಿಯವರು ಉದ್ಧಾರ ಮಾಡಿದ್ದು ಸಾಕು.  ಕಾಂಗ್ರೆಸ್‌ನವರೂ ಅದೇ ಉದ್ಧಾರದ ಕೆಲಸ ಮುಂದುವರಿಸುವುದು ಬೇಡ. ಕಾಂಗ್ರೆಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದ್ದರೆ ಮುಸ್ಲಿಮರಿಗೆ ಸರ್ಕಾರದಲ್ಲಿ ಸರಿಯಾದ ಪಾಲು ಕೊಡಲಿ, ಸರಿಯಾದ ಸ್ಥಾನಮಾನ ಕೊಡಲಿ. ಅವರೂ ಬೆಳೆಯಲಿ, ಸಮುದಾಯವೂ ಗಟ್ಟಿಗೊಳ್ಳಲಿ. ಕರಾವಳಿಗೂ ಒಳ್ಳೆಯದಾಗಲಿ'' ಎಂದು ಬರೆದುಕೊಂಡಿದ್ದಾರೆ. 

'ಕರಾವಳಿಯಂತಹಾ ಕರಾವಳಿಯಲ್ಲೂ ಯಾವತ್ತಿಗೂ ಕಾಂಗ್ರೆಸ್ ನೆಲಕಚ್ಚದಂತೆ ಕೈಹಿಡಿದವರು ಯುಟಿ ಖಾದರ್ ಅವರು. ಜನಸ್ನೇಹಿ ವ್ಯಕ್ತಿತ್ವದ ಖಾದರ್ ಅವರು ಮಂತ್ರಿಯಾಗುತ್ತಾರೆ ಎಂದು ನಿರೀಕ್ಷಿಸುತ್ತಿದ್ದೆವು.ಅದರಲ್ಲೂ ಶಿಕ್ಷಣ ಮಂತ್ರಿಯಾಗಬೇಕೆಂದು ಮನಸಲ್ಲಿ ಮಂಡಿಗೆ ತಿನ್ನುತ್ತಿದ್ದೆ. ಇದೀಗ ಸ್ಪೀಕರ್ ಆಗಿದ್ದಾರೆ.ಒಬ್ಬ ಚಟುವಟಿಕೆಯ ಯುವನಾಯಕ ಸ್ಪೀಕರ್ ಆಗುವುದು ನಾಡಿಗೂ..ಅವರ ಕ್ಷೇತ್ರಕ್ಕೂ..ಅವರಿಗೂ..ಯಾವ ಕಾರಣದಿಂದಲೂ ಒಳ್ಳೆಯದಲ್ಲ. ಏನೇ ಇರಲಿ ಖಾದರ್ ಅವರಿಗೆ ಹೃದತಾಂತರಾಳದ ಅಭಿನಂದನೆಗಳು..ಅವರು ಎಲ್ಲಿ ಹೋದರೂ ಅದರ ಘನತೆಯನ್ನು ಹೆಚ್ಚಿಸುವರು..' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. 

'ಕರ್ನಾಟಕ ರಾಜ್ಯದ ವಿಧಾನಸಭಾ ವ್ಯವಸ್ಥೆಯ ಇತಿಹಾಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂಟ್ವಾಳ ವೈಕುಂಠ ಬಾಳಿಗರ ನಂತರ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿರುವ ಯು.ಟಿ ಖಾದರ್ ಅವರಿಗೆ ಅಭಿನಂದನೆಗಳು. ಮೈಸೂರು ರಾಜ್ಯ ಮತ್ತು ಕರ್ನಾಟಕ ರಾಜ್ಯ ಇವೆರಡರ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರನ್ನು ರಾಜ್ಯದ 224 ಕ್ಷೇತ್ರದ ಸದಸ್ಯರುಗಳ ಕಲಾಪಗಳನ್ನು ತೀರ್ಮಾನಿಸಲು ನೇಮಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತದ ಸಂವಿಧಾನದಲ್ಲಿ ಅತ್ಯಂತ ಗೌರವಯುತ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರನ್ನು ನೇಮಿಸುತ್ತಿರುವ ಕಾಂಗ್ರೆಸ್ ಪಕ್ಷದ ತೀರ್ಮಾನವನ್ನು ಕೊಂಡಾಡುತ್ತೇನೆ' ಎಂದು ಮತ್ತೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

'ಯುಟಿ ಖಾದರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದರೆ ಅದು ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಬೇಕು. 60ರ ದಶಕದಲ್ಲಿ ಸ್ಪೀಕರ್ ಆಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಬಂಟ್ವಾಳ ವೈಕುಂಠ ಬಾಳಿಗರು ಅಲಂಕರಿಸಿದ್ದ ಸ್ಥಾನದಲ್ಲಿ ಈಗ ಯುಟಿಕೆ ಆಯ್ಕೆಯಾಗಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಗೌರವ ಬೇರೆ ಇರಲಾರದು. ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಯೋಜನೆಗಳಿವೆ, ಅವಕ್ಕೆ ಕಾರಣಗಳೂ, ಸಮರ್ಥನೆಗಳೂ ಪಕ್ಷದಲ್ಲಿರುತ್ತವೆ. ಹೊರಗಿರುವವರು ಎಲ್ಲದರಲ್ಲೂ ಕೊಂಕು, ಕುಹಕ, ಸಂಶಯ ಪಡುವುದು ಸರಿಯಾಗದು'  ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ. 

Full View

Similar News