ಅಭಿವೃದ್ಧಿಯ ಒತ್ತಡ ಮತ್ತು ಹಿಮಗರ್ಭದ ತಾಕಲಾಟಗಳು

ಹವಾಮಾನ ಬದಲಾವಣೆ ಮತ್ತು ಬೃಹತ್ ನಿರ್ಮಾಣ ಯೋಜನೆಗಳು ಹಿಮಾಲಯದಲ್ಲಿನ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುತ್ತಿವೆ ಮತ್ತು ವಿಪತ್ತುಗಳನ್ನು ಹೆಚ್ಚು ಮಾಡುತ್ತಿವೆ.

Update: 2023-05-24 07:48 GMT

ಹವಾಮಾನ ಬದಲಾವಣೆ ಹಿಮಾಲಯದಲ್ಲಿ ಸಂಕೀರ್ಣ ವಿಪತ್ತುಗಳನ್ನು ಹೆಚ್ಚು ಮಾಡುತ್ತಿದೆ. ಹಿಮಾಲಯ ಪ್ರದೇಶದಾದ್ಯಂತ ಭೂಕುಸಿತಗಳು ಹೆಚ್ಚುತ್ತಿವೆ. ನೇಪಾಳ-ಚೀನಾ ಗಡಿ ಪ್ರದೇಶ ೨೦೬೧-೨೧೦೦ರ ವೇಳೆಗೆ ಶೇ. ೩೦-೭೦ರಷ್ಟು ಹೆಚ್ಚು ಭೂಕುಸಿತಗಳನ್ನು ಕಾಣಲಿದೆ ಎಂದು ೨೦೨೦ರಲ್ಲಿ ನಾಸಾ ಸಂಶೋಧನಾ ತಂಡ ಅಂದಾಜಿಸಿದೆ. ಈ ಪ್ರದೇಶ ಅನೇಕ ಹಿಮನದಿಗಳು ಮತ್ತು ಹಿಮನದಿ ಸರೋವರಗಳನ್ನು ಹೊಂದಿದೆ. ಅಂದರೆ GLOFಗಳಿಗೆ ಕಾರಣವಾಗುವ ಭೂಕುಸಿತಗಳ ಸಾಧ್ಯತೆ ಹೆಚ್ಚು. ಇದಲ್ಲದೆ ಹವಾಮಾನ ಬದಲಾವಣೆ ಎತ್ತರದ ಪರ್ವತ ಪ್ರದೇಶಗಳಲ್ಲಿ ಇಳಿಜಾರಿನ ಅಸ್ಥಿರತೆಯನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಈಗ ಸ್ಪಷ್ಟ ಪುರಾವೆಗಳಿವೆ. ಅದು ಬಂಡೆಗಳು ಮತ್ತು ಭೂಕುಸಿತಗಳಿಗೆ ಹೆಚ್ಚಾಗಿ ಒಳಗಾಗುತ್ತವೆ.

ಮಾಲಯ ನಿಜವಾಗಿಯೂ ಒತ್ತಡ ಸ್ಥಿತಿಗೆ ತುತ್ತಾಗುತ್ತಿದೆ. ಟೆಕ್ಟೋನಿಕ್ ಪ್ಲೇಟ್‌ಗಳು ಪರಸ್ಪರ ವಿರುದ್ಧವಾಗಿ ಜಾರಿದಾಗ ಉಂಟಾಗುವ ಒತ್ತಡದ ಪರಿಣಾಮವಾಗಿ ಭೂಕಂಪಗಳು ಉಂಟಾಗುತ್ತವೆ ಮತ್ತು ಈ ಪ್ಲೇಟ್ ಚಲನೆ ಮುಂದುವರಿದಂತೆ, ಹಿಮಾಲಯದ ಪ್ರದೇಶ ಭೂಕಂಪಗಳಿಗೆ ಹೆಚ್ಚು ಹೆಚ್ಚು ಒಳಗಾಗುತ್ತದೆ.

ಹವಾಮಾನ ಬದಲಾವಣೆ ಹವಾಮಾನದ ಮಾದರಿಗಳ ಮೇಲೆ ಪರಿಣಾಮ ಬೀರುತ್ತ, ಹಿಮನದಿಗಳ ಕರಗುವಿಕೆ ಮತ್ತು ಪರ್ವತ ಇಳಿಜಾರುಗಳನ್ನು ಅಸ್ಥಿರಗೊಳಿಸುವುದರೊಂದಿಗೆ ಈಗಾಗಲೇ ಹಿಮಾಲಯದಲ್ಲಿ ಭೂಕಂಪ ಸಂಬಂಧಿ ಅಪಾಯಗಳನ್ನು ಹೆಚ್ಚಿಸುತ್ತಿದೆ. ಇದರ ನಡುವೆಯೇ, ಹವಾಮಾನ ಬದಲಾವಣೆ ಈ ಪ್ರದೇಶದಲ್ಲಿನ ಭೂಕಂಪಗಳು ಪುನರಾವರ್ತಿತವಾಗುವುದರ ಮೇಲೆಯೂ ಪರಿಣಾಮ ಬೀರಬಹುದು ಎಂದು ಹೊಸ ಸಂಶೋಧನೆ ಹೇಳುತ್ತಿದೆ.

೧೯೦೦ರಿಂದ ೨೦೧೦ರ ಅವಧಿಯಲ್ಲಿ ಹಿಮಾಲಯದಲ್ಲಿನ ಭೂಕಂಪ ಸ್ಥಿತಿ ವಿಶ್ಲೇಷಣೆಯಿಂದ ಗೊತ್ತಾಗಿರುವುದೇನೆಂದರೆ, ೨೦೦೦ದ ನಂತರ ದಾಖಲಾದ ಭೂಕಂಪಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂಬುದು. ವಿಶ್ಲೇಷಣೆಯ ಪ್ರಕಾರ, ೧೯೬೦-೭೦ರ ದಶಕದಲ್ಲಿ ಹಿಮಾಲಯ ವರ್ಷಕ್ಕೆ ೧೦೦ಕ್ಕಿಂತ ಕಡಿಮೆ ಭೂಕಂಪಗಳನ್ನು ಕಂಡಿದೆ. ಆದರೆ ೨೦೦೦-೨೦೧೦ರಲ್ಲಿ ಇದು ೫೦೦-೬೦೦ಕ್ಕೆ ಏರಿದೆ. ಈ ಭೂಕಂಪಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ ೨.೦ ಮತ್ತು ೬.೦ರ ನಡುವೆ ಇತ್ತು. ಆದರೆ ಭೂಕಂಪನಗಳಲ್ಲಿನ ಈ ಏರಿಕೆಗೂ ಹವಾಮಾನ ಬದಲಾವಣೆಗೂ ಕಾರಣವಿತ್ತೆ ಎಂಬುದು ಈ ವಿಶ್ಲೇಷಣೆಯಿಂದ ಗೊತ್ತಾಗಿಲ್ಲ.

ಹಿಮಾಲಯದಲ್ಲಿ ಸುಮಾರು ಒಂದು ಲಕ್ಷ ಚ.ಕಿ.ಮೀ. ವಿಸ್ತಾರಕ್ಕೆ ಹಿಮನದಿಗಳು ಆವರಿಸುತ್ತವೆ. ಹಾಗಾಗಿ ಇದು ಭೂಮಿಯ ಮೇಲಿನ ಅತಿದೊಡ್ಡ ಐಸ್ ರಿಸರ್ವ್ ಆಗಿದೆ. ಹಿಮಾಲಯ ಜಾಗತಿಕ ಸರಾಸರಿಗಿಂತ ವೇಗವಾಗಿ ಬೆಚ್ಚಗಾಗುತ್ತಿರುವುದು ೨೦೨೨ರಲ್ಲಿ ದಾಖಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ೨೦೩೦ರ ವೇಳೆಗೆ ಹಿಮನದಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಆಗಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದಾರೆ. ಹಿಮಾಲಯದಲ್ಲಿನ ಹಿಮದ ದ್ರವ್ಯರಾಶಿಯಲ್ಲಿನ ಈ ಬದಲಾವಣೆ ಹೆಚ್ಚಿನ ಭೂಕಂಪಗಳಿಗೆ ಕಾರಣವಾಗಬಹುದು.

ಆದರೆ ಹಿಮಾಲಯದಲ್ಲಿ ಭೂಮಿಯ ಹೊರಪದರದ ಮೇಲೆ ಒತ್ತಡವನ್ನು ಉಂಟುಮಾಡು ವುದು ಹಿಮನದಿಗಳು ಮಾತ್ರವಲ್ಲ. ಕೇವಲ ನಾಲ್ಕು ತಿಂಗಳುಗಳಲ್ಲಿ (ಜೂನ್‌ನಿಂದ ಸೆಪ್ಟಂಬರ್‌ವರೆಗೆ) ತನ್ನ ವಾರ್ಷಿಕ ಮಳೆಯ ಸುಮಾರು ಶೇ. ೮೦ರಷ್ಟು ದಕ್ಷಿಣ ಏಶ್ಯಕ್ಕೆ ಒದಗಿಸುವ ಮಾನ್ಸೂನ್ ಪಾತ್ರವೂ ಇದೆ.

ಫ್ರೆಂಚ್ ಮತ್ತು ನೇಪಾಳದ ವಿಜ್ಞಾನಿಗಳು ಹಿಮಾಲಯದಲ್ಲಿನ ೧೦,೦೦೦ ಭೂಕಂಪಗಳ ಕಾಲೋಚಿತ ಮಾದರಿಗಳ ಮೇಲೆ ನಡೆಸಿರುವ ಸಂಶೋಧನೆಯಿಂದ ಕಂಡುಕೊಂಡಿರುವ ಪ್ರಕಾರ, ಚಳಿಗಾಲದಲ್ಲಿ ಭೂಕಂಪಗಳ ಸಂಖ್ಯೆ ಬೇಸಿಗೆಯಲ್ಲಿ ಸಂಭವಿಸುವುದಕ್ಕಿಂತ ಎರಡು ಪಟ್ಟು ಹೆಚ್ಚು. ಮಾನ್ಸೂನ್ ಋತುವಿನಲ್ಲಿ ಇರುವ ನೀರಿನ ಬೃಹತ್ ತೂಕದಿಂದ ಗಂಗಾ ಜಲಾನಯನದ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹವಾಮಾನ ಬದಲಾವಣೆ ಮಾನ್ಸೂನ್ ಹೆಚ್ಚು ಅನಿಯಮಿತವಾಗಲು ಕಾರಣವಾಗುತ್ತದೆ. ಯಾವಾಗ ಮತ್ತು ಎಲ್ಲಿ ದೊಡ್ಡ ಪ್ರಮಾಣದ ನೀರು ಇರಬೇಕೆಂಬ ಪ್ರಾಕೃತಿಕ ಸ್ಥಿತಿಗೆ ವಿರುದ್ಧವಾದ ವಿದ್ಯಮಾನ ಉಂಟಾಗಿ, ಸೂಕ್ಷ್ಮ ಕಂಪನದ ಮೇಲೆ ಪರಿಣಾಮ ಬೀರಬಹುದು. ಈ ಸಣ್ಣ ಭೂಕಂಪಗಳಲ್ಲಿ ಹೆಚ್ಚಿನವು ಮನುಷ್ಯರ ಅರಿವಿಗೆ ಬರುವುದಿಲ್ಲ. ಹಾನಿಯೂ ಕಡಿಮೆ. ಆದರೆ ಇವು ಒತ್ತಡವನ್ನು ನಿವಾರಿಸುತ್ತವೆಯೇ, ರಿಕ್ಟರ್ ಮಾಪಕದಲ್ಲಿ ೬ಕ್ಕಿಂತ ಹೆಚ್ಚಿನ ತೀವ್ರತೆಯ ದೊಡ್ಡ ವಿನಾಶಕಾರಿ ಭೂಕಂಪಗಳನ್ನು ಕಡಿಮೆ ಮಾಡುತ್ತದೆಯೇ ಅಥವಾ ಈ ಸಣ್ಣ ಭೂಕಂಪಗಳು ದೊಡ್ಡ ವಿಪತ್ತನ್ನು ಪ್ರಚೋದಿಸುತ್ತವೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

೨೦೧೯ರ ಸಂದರ್ಶನವೊಂದರಲ್ಲಿ, ಕ್ಯಾಲಿಫೋರ್ನಿಯಾ ದ ಪಸಾಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಪಾಲ್ ಲುಂಡ್‌ಗ್ರೆನ್ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಭೂಮಿಯ ಒಳಸ್ವರೂಪದಲ್ಲಿ ಫಲಕಗಳಲ್ಲಿನ ದೋಷ ಸೂಕ್ಷ್ಮ ಹಂತದಲ್ಲಿದ್ದಾಗ ಹವಾಮಾನದ ಪ್ರಭಾವ ಕೂಡ ಜೊತೆಯಾಗಿ ದೊಡ್ಡ ಭೂಕಂಪದಂಥ ಅನಾಹುತಕ್ಕೆ ಕಾರಣವಾಗಬಹುದು. ಹವಾಮಾನ ಪ್ರಕ್ರಿಯೆಗಳು ದೊಡ್ಡ ಭೂಕಂಪವನ್ನು ಪ್ರಚೋದಿಸಬಹುದು ಎಂದು ಹೇಳುವ ಸ್ಥಿತಿಯಲ್ಲಿ ನಾವು ಈ ಹಂತದಲ್ಲಿ ಇಲ್ಲ ಎಂದಿದ್ದಾರೆ ಅವರು.

ಭೂಕಂಪಗಳಿಗೆ ಮಿತಿಮೀರಿದ ಮಾನವ ಚಟುವಟಿಕೆಗಳು ಕಾರಣ. ೧೯೬೦ರ ದಶಕದಿಂದಲೂ ಜಲವಿದ್ಯುತ್ ಅಣೆಕಟ್ಟುಗಳ ಸಂದರ್ಭದಲ್ಲಿಯೇ ಇದನ್ನು ಕಂಡುಕೊಳ್ಳಲಾಗಿದೆ. ದೊಡ್ಡ ಜಲಾಶಯಗಳ ಪರಿಣಾಮಗಳಿಂದಾಗಿ ಉಂಟಾಗುವ ಇವನ್ನು ಜಲಾಶಯ-ಪ್ರೇರಿತ ಭೂಕಂಪ ಎಂದು ಕರೆಯಲಾಗುತ್ತದೆ. ಇದು ಅಪಾಯಕ್ಕೊಳಪಟ್ಟಿರುವ ರೇಖೆಯ ಮೇಲೆ ಅಥವಾ ಅದರ ಸಮೀಪವಿರುವ ದೊಡ್ಡ ಜಲಾಶಯದಲ್ಲಿ ನೀರಿನಿಂದ ಉಂಟಾಗುವ ಒತ್ತಡದಿಂದ ಆಗುವಂಥದ್ದು. ಇದು ಭೂಮಿಯ ಹೊರಪದರದ ಕೆಳಗಿರುವ ಜಾರುವಿಕೆಗೆ ಕಾರಣವಾಗಿ, ಭೂಕಂಪವನ್ನು ಉಂಟುಮಾಡುತ್ತದೆ.

ಪ್ರಸಕ್ತ ಹಿಮಾಲಯ ಪ್ರದೇಶದಾದ್ಯಂತ ಸುಮಾರು ೧೦೦ ಜಲವಿದ್ಯುತ್ ಅಣೆಕಟ್ಟುಗಳಿವೆ. ಚೀನಾ, ಭಾರತ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ಸೇರಿದಂತೆ ಇನ್ನೂ ೬೫೦ ಅಣೆಕಟ್ಟುಗಳು ಯೋಜನೆ ಅಥವಾ ನಿರ್ಮಾಣ ಹಂತದಲ್ಲಿವೆ. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ, ಹಿಮಾಲಯ ವಿಶ್ವದಲ್ಲೇ ಅತ್ಯಂತ ಅಣೆಕಟ್ಟು ದಟ್ಟಣೆಯ ಪ್ರದೇಶವಾಗಲಿದೆ. ವಿಶೇಷವಾಗಿ ಜಮ್ಮುವಿನ ಚೆನಾಬ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಬ್ರಹ್ಮಪುತ್ರದ ಉದ್ದಕ್ಕೂ ಇರುವ ಪ್ರದೇಶಗಳು ಇಂತಹ ಒತ್ತಡಕ್ಕೆ ತುತ್ತಾಗಲಿವೆ.

ಭೂ ವಿಜ್ಞಾನದ ಸಮಗ್ರ ಸಂಶೋಧಕ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮೂಲದ ಸಂಶೋಧನಾ ಸಂಸ್ಥೆಯಾದ ತೆಹಕೀಕ್ ಇಂಟರ್‌ನ್ಯಾಶನಲ್‌ನ ನಿರ್ದೇಶಕ ಅಯಾಝ್ ಮಹಮೂದ್ ದಾರ್ ಪ್ರಕಾರ, ಚೆನಾಬ್ ಕಣಿವೆ ಜಲಾಶಯ-ಪ್ರೇರಿತ ಭೂಕಂಪನದ ಅಧ್ಯಯನದ ಕ್ಷೇತ್ರವಾಗಿದೆ. ಚೆನಾಬ್ ಕಣಿವೆಯಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಮೆಗಾ ಜಲವಿದ್ಯುತ್ ಯೋಜನೆಗಳ ಜೊತೆಗೆ, ಕನಿಷ್ಠ ಆರು ಇತರ ಮೆಗಾ ಯೋಜನೆಗಳು ಪ್ರಸಕ್ತ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ.

ಆಗಸ್ಟ್ ೨೦೨೨ರಲ್ಲಿ, ಐದು ದಿನಗಳ ಅವಧಿಯಲ್ಲಿ ಕಣಿವೆಯಲ್ಲಿ ೧೩ ಭೂಕಂಪಗಳು ಸಂಭವಿಸಿದವು. ಮೆಗಾ ಅಣೆಕಟ್ಟುಗಳ ನಿರ್ಮಾಣ ಈ ಪ್ರದೇಶದಲ್ಲಿ ಹೆಚ್ಚಿದ ಭೂಕಂಪಗಳಿಗೆ ಮುಖ್ಯ ಕಾರಣ ಎಂಬುದು ಸ್ಪಷ್ಟವಾಗಿದೆ. ಆದರೂ ಸಮಗ್ರ ಚಿತ್ರವನ್ನು ಪಡೆಯಲು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎನ್ನುತ್ತಾರೆ ದಾರ್.

ಭೂಕಂಪದಂತಹ ವಿಪತ್ತು ಒಂದೆಡೆಗಾದರೆ, ಭೂಕುಸಿತ ಅಥವಾ ಹಿಮನದಿಗಳ ಸರೋವರದ ಪ್ರಕೋಪ ಪ್ರವಾಹ (GLOF)ದಂತಹ ವಿಪತ್ತು ಮತ್ತೊಂದೆಡೆ ಉಂಟಾಗುವುದು ಇಲ್ಲಿನ ಬಹುದೊಡ್ಡ ಅಪಾಯ. ಹಿಮನದಿಯಿಂದ ಕರಗಿದ ನೀರಿನಿಂದ ರೂಪುಗೊಂಡ ಸರೋವರ ಅದರ ದಡವನ್ನು ಉಲ್ಲಂಘಿಸಿದಾಗ GLOF ಸಂಭವಿಸುತ್ತದೆ. ಹಿಮನದಿಗಳ ಸರೋವರ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಆದರೆ GLOF ಸ್ಥಿತಿ ಸಂಭವಿಸಿದಾಗ ಭಾರೀ ಹಾನಿಗೆ ಕಾರಣವಾಗುತ್ತದೆ. ಜಾಗತಿಕವಾಗಿ ೧೫ ದಶಲಕ್ಷಕ್ಕಿಂತಲೂ ಹೆಚ್ಚು ಜನರು GLOFಗಳ ಅಪಾಯದಲ್ಲಿದ್ದಾರೆ. ಅಂಥ ಅಪಾಯದ ಎದುರಲ್ಲಿರುವ ಮೂರನೇ ಒಂದು ಭಾಗದಷ್ಟು ಜನರು ಭಾರತದಲ್ಲಿ (೩೦ ಲಕ್ಷ) ಮತ್ತು ಪಾಕಿಸ್ತಾನದಲ್ಲಿ (೨೦ ಲಕ್ಷ) ಇದ್ದಾರೆ.

ನೇಪಾಳದ ಕಠ್ಮಂಡು ವಿಶ್ವವಿದ್ಯಾನಿಲಯದ ಹಿಮಾಲ ಯನ್ ಕ್ರಯೋಸ್ಪಿಯರ್, ಹವಾಮಾನ ಮತ್ತು ವಿಪತ್ತು ಸಂಶೋಧನಾ ಕೇಂದ್ರದ ಭೂಕಂಪಶಾಸ್ತ್ರಜ್ಞ ರಾಕೇಶ್ ಕಾಯಸ್ಥ ಅವರ ಪ್ರಕಾರ, ಹಿಮಾಲಯದಲ್ಲಿ ರಿಕ್ಟರ್ ಮಾಪಕದಲ್ಲಿ ೫ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಇದೇ ರೀತಿಯ ಬೇರೆಡೆಗಿನ ಭೂಕಂಪಕ್ಕೆ ಹೋಲಿಸಿದರೆ ಹೆಚ್ಚಿನ ಅಪಾಯವನ್ನು ಹೊಂದಿದೆ. ಏಕೆಂದರೆ ಇದು GLOF ಸ್ಥಿತಿಗೂ ಕಾರಣವಾಗಬಹುದು.

ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ತಾಪಮಾನ ಹಿಮಾಲಯದ ಹಿಮನದಿಗಳು ತೀವ್ರ ಪ್ರಮಾಣದಲ್ಲಿ ಕರಗಲು ಕಾರಣವಾಗುತ್ತದೆ. ಇದು ಹೆಚ್ಚು ಹೆಚ್ಚು ಹಿಮಸರೋವರಗಳನ್ನು ಸೃಷ್ಟಿಸುತ್ತದೆ. ಸಂಶೋಧಕರು ಹಿಮಾಲಯದಲ್ಲಿ ೮,೦೦೦ಕ್ಕೂ ಹೆಚ್ಚು ಹಿಮನದಿಗಳ ಸರೋವರಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ೨೦೦ರಷ್ಟು ಅಪಾಯಕಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ೨೦೦೩ ಮತ್ತು ೨೦೧೦ರ ಅವಧಿಯಲ್ಲಿ ಹಿಮಾಲಯದ ಸಿಕ್ಕಿಂ ಒಂದರಲ್ಲಿಯೇ ೮೫ ಹೊಸ ಹಿಮನದಿಗಳ ಸರೋವರಗಳು ರೂಪುಗೊಂಡವು. ತಗ್ಗು ಪ್ರದೇಶಗಳಲ್ಲಿನ ಕಲ್ಲಿದ್ದಲು ಸ್ಥಾವರಗಳಂತಹ ಮೂಲಗಳಿಂದ ಬರುವ ಮಾಲಿನ್ಯಕಾರಕಗಳು ಹಿಮಾಲಯದಲ್ಲಿನ ಹಿಮನದಿಗಳ ಮೇಲೆ ನೆಲೆಗೊಳ್ಳುತ್ತವೆ. ಅವು ಕೂಡ ಹಿಮನದಿಯ ಕರಗುವಿಕೆ ಹೆಚ್ಚುವಿಕೆಗೆ ಕಾರಣವಾಗುತ್ತವೆ. ಮಾತ್ರವಲ್ಲ, ತಾಪಮಾನ ಏರಿಕೆಯ ಪರಿಣಾಮಗಳನ್ನು ಉಲ್ಬಣಗೊಳಿಸುತ್ತವೆ.

ಹವಾಮಾನ ಬದಲಾವಣೆಯ ತಾಪಮಾನವು ಹಿಮಾಲಯದಲ್ಲಿ ಭೂಕಂಪಗಳನ್ನು ಪ್ರಚೋದಿಸುವ ಇನ್ನೊಂದು ವಿಧಾನವೆಂದರೆ, ಕರಗುವ ಹಿಮನದಿಯ ದೊಡ್ಡ ಭಾಗ ಒಡೆದುಬೀಳುವುದು. ಹೀಗೆ ಹಿಮನದಿಗಳ ಒಡೆಯುವಿಕೆ ರಿಕ್ಟರ್ ಮಾಪಕದಲ್ಲಿ ೭ರವರೆಗೆ ತೀವ್ರತೆಗೆ ಕಾರಣವಾಗಬಹುದು ಎನ್ನುತ್ತಾರೆ ಅಯಾಝ್ ಮಹಮೂದ್ ದಾರ್.

ಇಲ್ಲಿಯವರೆಗೆ, ಹಿಮನದಿಗಳ ಒಡೆಯುವಿಕೆ ಹಿಮಾಲಯದಲ್ಲಿ ದೊಡ್ಡ ಮಟ್ಟದ ಅಪಾಯ ತಂದಿಲ್ಲ. ಆದರೆ ಹಿಮನದಿಗಳು ಒಡೆಯುವುದು ಪ್ರವಾಹಗಳು ಮತ್ತು ಭೂಕುಸಿತಗಳಿಗೆ ಕಾರಣವಾಗುತ್ತದೆ. ಫೆಬ್ರವರಿ ೨೦೨೧ರಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಹಿಮನದಿಯ ದೊಡ್ಡ ಭಾಗ ಒಡೆದು, ಭೂಕಂಪಕ್ಕಿಂತ ಹೆಚ್ಚಾಗಿ ಹಿಮಪಾತಕ್ಕೆ ಕಾರಣವಾಯಿತು. ಹಠಾತ್ ಪ್ರವಾಹವನ್ನು ಉಂಟುಮಾಡಿತು ಮತ್ತು ನಿರ್ಮಾಣ ಹಂತದಲ್ಲಿರುವ ಅಣೆಕಟ್ಟನ್ನು ಹಾನಿಗೊಳಿಸಿತು.

ಹವಾಮಾನ ಬದಲಾವಣೆ ಹಿಮಾಲಯದಲ್ಲಿ ಸಂಕೀರ್ಣ ವಿಪತ್ತುಗಳನ್ನು ಹೆಚ್ಚು ಮಾಡುತ್ತಿದೆ. ಹಿಮಾಲಯ ಪ್ರದೇಶದಾದ್ಯಂತ ಭೂಕುಸಿತಗಳು ಹೆಚ್ಚುತ್ತಿವೆ. ನೇಪಾಳ-ಚೀನಾ ಗಡಿ ಪ್ರದೇಶ ೨೦೬೧-೨೧೦೦ರ ವೇಳೆಗೆ ಶೇ. ೩೦-೭೦ರಷ್ಟು ಹೆಚ್ಚು ಭೂಕುಸಿತಗಳನ್ನು ಕಾಣಲಿದೆ ಎಂದು ೨೦೨೦ರಲ್ಲಿ ನಾಸಾ ಸಂಶೋಧನಾ ತಂಡ ಅಂದಾಜಿಸಿದೆ. ಈ ಪ್ರದೇಶ ಅನೇಕ ಹಿಮನದಿಗಳು ಮತ್ತು ಹಿಮನದಿ ಸರೋವರಗಳನ್ನು ಹೊಂದಿದೆ. ಅಂದರೆ GLOFಗಳಿಗೆ  ಕಾರಣವಾಗುವ ಭೂಕುಸಿತಗಳ ಸಾಧ್ಯತೆ ಹೆಚ್ಚು. ಇದಲ್ಲದೆ ಹವಾಮಾನ ಬದಲಾವಣೆ ಎತ್ತರದ ಪರ್ವತ ಪ್ರದೇಶಗಳಲ್ಲಿ ಇಳಿಜಾರಿನ ಅಸ್ಥಿರತೆಯನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಈಗ ಸ್ಪಷ್ಟ ಪುರಾವೆಗಳಿವೆ. ಅದು ಬಂಡೆಗಳು ಮತ್ತು ಭೂಕುಸಿತಗಳಿಗೆ ಹೆಚ್ಚಾಗಿ ಒಳಗಾಗುತ್ತವೆ.

ದೊಡ್ಡ ಭೂಕಂಪದ ಸಂದರ್ಭದಲ್ಲಿ ಈ ಎಲ್ಲಾ ವಿಪತ್ತುಗಳೂ ಏಕಕಾಲದಲ್ಲಿ ಘಟಿಸಲೂ ಬಹುದು. ಅಂತಹ ಸಂಕೀರ್ಣ ವಿಪತ್ತುಗಳು ಬೃಹತ್ ಹಾನಿಯನ್ನುಂಟುಮಾಡುತ್ತವೆ. ಆಗ ಪರಿಹಾರ ಪ್ರಯತ್ನ ಕ್ಲಿಷ್ಟಕರವಾಗುತ್ತದೆ.

‘‘೨೦೦೫ರಲ್ಲಿ ಕಾಶ್ಮೀರದಲ್ಲಿನ ಭೂಕಂಪದ ವೇಳೆ ಆಗಿದ್ದು ಇದೇ ಥರದ ಅನಾಹುತ. ಹಿಮಾಲಯದ ಉದ್ದಕ್ಕೂ ಭೂಕುಸಿತ ಗಂಭೀರ ಸ್ವರೂಪದಲ್ಲಿ ಆಯಿತು. ೮೬,೦೦೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಭೂಕುಸಿತಗಳು, ಬೀಳುವ ಬಂಡೆಗಳು ಮತ್ತು ಹಲವಾರು ಉತ್ತರಾಘಾತದ ಪರಿಣಾಮವಾಗಿ, ಬದುಕುಳಿದವರ ರಕ್ಷಣೆಯ ಕಾರ್ಯಾಚರಣೆಗೆ ಕೂಡ ಅಡ್ಡಿಯಾಗಿತ್ತು. ಹೆದ್ದಾರಿಗಳು ಮತ್ತು ಪರ್ವತ ಪ್ರದೇಶದ ರಸ್ತೆಗಳನ್ನು ಹಾನಿಗೊಳಿಸಿತು ಮಾತ್ರವಲ್ಲದೆ, ಪೀಡಿತ ಪ್ರದೇಶಗಳನ್ನು ಹಲವಾರು ವಾರಗಳವರೆಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು’’ ಎಂದು ಪಾಕಿಸ್ತಾನದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಕೇಂದ್ರದ ಝಾಹಿದ್ ರಫಿ ನೆನೆಯುತ್ತಾರೆ.

(ಕೃಪೆ: thethirdpole.net)

Similar News