ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಸೇರಿ 4 ಸದಸ್ಯರ ನಾಮನಿರ್ದೇಶನ ರದ್ದು ಅಧಿಸೂಚನೆ ವಾಪಸ್

Update: 2023-05-24 12:37 GMT

ಬೆಂಗಳೂರು, ಮೇ 24: ರಾಜ್ಯ ಸರಕಾರವು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಸೇರಿದಂತೆ ನಾಲ್ವರು ಸದಸ್ಯರ ನಾಮ ನಿರ್ದೇಶನವನ್ನು ರದ್ದುಗೊಳಿಸಿ ಮಂಗಳವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದಿದೆ.

ರಾಜ್ಯ ಸರಕಾರದ ಅಧೀನದಲ್ಲಿ ಇರುವ 140ಕ್ಕೂ ಹೆಚ್ಚು ನಿಗಮ, ಮಂಡಳಿಗಳ ನಾಮ ನಿರ್ದೇಶಿತ ಅಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರ ನೇಮಕಾತಿಯನ್ನು ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು. ಅದೇ ರೀತಿ, ರಾಜ್ಯ ವಕ್ಫ್ ಬೋರ್ಡ್ನ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು. 

ರಾಜ್ಯ ವಕ್ಫ್ ಬೋರ್ಡ್ ಸ್ವಾಯತ್ತ ಸಂಸ್ಥೆಯಾಗಿದ್ದು, ಸದಸ್ಯರ ಅಧಿಕಾರ ಅವಧಿಯು 5 ವರ್ಷಗಳಾಗಿರುತ್ತದೆ. ಈ ವಿಷಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆದು ಆದೇಶ ಹೊರಡಿಸಲಾಗಿದೆ.

ಸರಕಾರವು ವಕ್ಫ್ ಬೋರ್ಡ್ ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಸ್ಪೀಕರ್ ಯು.ಟಿ.ಖಾದರ್, ಶಾಸಕ ಎನ್.ಎ.ಹಾರೀಸ್ ಸೇರಿದಂತೆ ಎಲ್ಲ ಮುಸ್ಲಿಮ್ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ‘ವಾರ್ತಾಭಾರತಿ’ಗೆ ತಿಳಿಸಿದರು.

Similar News