ಅಂಬೇಡ್ಕರ್, ತುಳುನಾಡಿನ ವೈಕುಂಠ ಬಾಳಿಗಾರನ್ನು ಸ್ಮರಿಸಿ ಕಾರ್ಯನಿರ್ವಹಿಸುವೆ: ನೂತನ ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು, ಮೇ 23: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಪಿತ ಗಾಂಧೀಜಿ, ಜವಾಹರಲಾಲ್ ನೆಹರು, ಸ್ಪೀಕರ್ ಆಗಿ ಕೆಲಸ ಮಾಡಿದ ತುಳುನಾಡಿನ ವೈಕುಂಠ ಬಾಳಿಗ ಸೇರಿದಂತೆ ಹಲವು ಸಾಧಕರು ಮಾಡಿರುವ ಕೆಲಸಗಳನ್ನು ಸ್ಮರಿಸಿ ಕಾರ್ಯನಿರ್ವಹಿಸುತ್ತೇನೆ ಎಂದು ವಿಧಾನಸಭೆ ನೂತನ ಸಭಾಧ್ಯಕ್ಷ ಯು.ಟಿ.ಖಾದರ್ ನುಡಿದರು.
ಬುಧವಾರ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಮಾತನಾಡಿದ ಅವರು, ‘12ನೆ ಶತಮಾನದಲ್ಲಿ ಅನುಭವ ಮಂಟಪದಿಂದ ಈಗಿನ ಸಂವಿಧಾನ ಕೊಡುವ ಮೌಲ್ಯಗಳು ಮುಖ್ಯ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, ಸದನದಲ್ಲಿ ತಾತ್ವಿಕ ಅಭಿಪ್ರಾಯ ಭೇದ, ಇಲ್ಲಿ ಮಂಡಿಸುವ, ಚರ್ಚಿಸುವ ವಿಷಯಗಳು ನಾಡಿನ ಜನತೆಗೆ ಒಳಿತಾಗಬೇಕು ಎಂದು ಹೇಳಿದರು.
ಈ ರಾಜ್ಯದ ಜನತೆ ಆಯ್ಕೆ ಮಾಡಿರುವ ಪ್ರತಿನಿಧಿಗಳು ಸಶಕ್ತವಾಗಿ ಕಾರ್ಯನಿರ್ವಹಿಸಿ, ಈ ಸದನದಲ್ಲಿ ಹಿರಿಯ ಸದಸ್ಯರು, ಅನುಭವಿ, ಉತ್ಸಾಹಿ ಯುವಕರು ಹಲವರು ಈ ಸದನದ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದಾರೆ. ಪಕ್ಷಭೇಧ ಮರೆತು ಸಶಕ್ತವಾಗಿ ಕಾರ್ಯನಿರ್ವಹಿಸುವುದಲ್ಲದೇ, ಒಬ್ಬ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯವೆಂದು ತಿಳಿಸಿ ಕಾನೂನು ಪದವಿ ಪಡೆದಿರುವ ನಾನು ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಹೊಸದಾಗಿ ಆಯ್ಕೆಯಾಗಿ ಬಂದಿರುವ ಕಿರಿಯ ಸದಸ್ಯರು ಹಿರಿಯರ ಅನುಭವದ ಮಾತುಗಳನ್ನು ಆಲಿಸಿ ಗ್ರಹಿಸಬೇಕು. ರೂಲ್ಸ್‍ಬುಕ್ಸ್‍ಗಳನ್ನು ಓದಿ ತಿಳಿದುಕೊಳ್ಳಬೇಕು. ಅಂಬೇಡ್ಕರ್ ಅವರು ಹೇಳಿರುವಂತ ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಸರಿಯಾದ ಭವಿಷ್ಯ ನಿರ್ಮಾಣ ಮಾಡಲು ಇತಿಹಾಸ ಓದಬೇಕು. ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು. ಸಂವಿಧಾನ ಸರ್ವಗ್ರಂಥ. ಈ ಗ್ರಂಥದ ಮೌಲ್ಯಗಳನ್ನು ಅರಿತು ಅದರಂತೆ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸುವುದಾಗಿ ಖಾದರ್ ಹೇಳಿದರು.
ಎಲ್ಲ ಪಕ್ಷದ ಅಭಿಪ್ರಾಯಗಳಿಗೆ ಗೌರವ ಕೊಡುತ್ತೇನೆ. ಕರ್ನಾಟಕದ ಸ್ಪೀಕರ್ ಕರ್ನಾಟಕದ ನಾಡಗೀತೆಯಾದ ಕುವೆಂಪು ರಚಿತ ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ನಾಣ್ನುಡಿಯಂತೆ ಕರ್ನಾಟಕದ ಪಾಲು ಹೆಚ್ಚಾಗಿರಲಿ ಎಂದು ಬಯಸುತ್ತೇನೆ ಎಂದ ಅವರು, ಜನಪ್ರತಿನಿಧಿಗಳಿಗೆ ಸರಕಾರದ ಸ್ಥಿತಿಗತಿಗಳನ್ನು ಮುಟ್ಟಿಸುವಲ್ಲಿ ಪತ್ರಿಕಾರಂಗದ ಕಾರ್ಯ ಕೂಡ ಅತ್ಯವಶ್ಯ. ಜನಪರ ಕಾರ್ಯದಲ್ಲಿ ಪತ್ರಿಕಾ ರಂಗದ ಜವಬ್ದಾರಿ ಹೆಚ್ಚು ಇದೆ. ಸರಕಾರದ ಜನಪರ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಧ್ಯಮ ರಂಗ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಅವಿರೋಧವಾಗಿ ಆಯ್ಕೆ ಮಾಡಿದ ಹಿರಿಯ ಹಾಗೂ ಕಿರಿಯ ಸದಸ್ಯರು, ತಂದೆ ತಾಯಿಗಳು, ನನ್ನ ಮತಕ್ಷೇತ್ರದ ಮತದಾರರು, ವಿದ್ಯಾರ್ಥಿ ಜೀವನ, ರಾಜಕೀಯ ಜೀವನ, ರೂಪಿಸಿಕೊಟ್ಟ ಹಲವು ಗಣ್ಯ ವ್ಯಕ್ತಿಗಳಾದ ಜನಾರ್ಧನ್ ಪೂಜಾರಿ, ಆಸ್ಕರ್ ಫನಾರ್ಂಡಿಸ್, ವೀರಪ್ಪ ಮೊಯ್ಲಿ, ವ್ಯಕ್ತಿತ್ವ ರೂಪಿಸಿಕೊಟ್ಟ ಗಜಾನಂದ ಪಂಡಿತ್, ಜಯರಾಮಶೆಟ್ಟಿ ಇನ್ನಿತರ ಗಣ್ಯರು ನನಗೆ ಪ್ರೇರಣೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತಾ ಧನ್ಯವಾದ ಅರ್ಪಿಸಿದರು.