ನಾಮನಿರ್ದೇಶನ ರದ್ದು ಪಡಿಸಿದರೂ ರಾಜೀನಾಮೆ ನೀಡದ ನಿಗಮ-ಮಂಡಳಿಗಳ ಪದಾಧಿಕಾರಿಗಳನ್ನು ವಜಾಗೊಳಿಸಿ: ರಮೇಶ್ ಬಾಬು ಒತ್ತಾಯ

''ಉನ್ನತ ಶಿಕ್ಷಣ ಪರಿಷತ್‍ನ ಉಪಾಧ್ಯಕ್ಷರ ನಡೆ ಗೊಂದಲಗಳಿಗೆ ಕಾರಣವಾಗಿದೆ''

Update: 2023-05-25 09:19 GMT

ಬೆಂಗಳೂರು, ಮೇ 25:  ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯ ಸರಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೆ ಸರ್ಕಾರಿ, ಅರೆ ಸರಕಾರಿಯ ನಾಮ ನಿರ್ದೇಶನಗಳನ್ನು ರದ್ದು ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದರೂ ತಮ್ಮ ಸ್ಥಾನಗಳಿಗೆ ಇನ್ನೂ ರಾಜೀನಾಮೆ ಸಲ್ಲಿಸದ ಹಲವು ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಇತರೆ ಪದಾಧಿಕರಿಗಳನ್ನು ಕೂಡಲೇ ವಜಾಗೊಳಿಸಬೇಕು' ಎಂದು ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಒತ್ತಾಯಿಸಿದ್ದಾರೆ. 

ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ  ರಮೇಶ್ ಬಾಬು, 'ರಾಜೀನಾಮೆ ನೀಡದ ಇಂತಹ ಸರ್ಕಾರಿ ನಾಮಾಂಕಿತ ಪದಾಧಿಕಾರಿಗಳು ತಮ್ಮ ಸ್ಥಾನಗಳನ್ನು/ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಇರುತ್ತದೆ. ಒಂದು ವೇಳೆ ಸರ್ಕಾರಿ ನಾಮಾಂಕಿತ ಪದಾಧಿಕಾರಿಗಳ ರಾಜೀನಾಮೆ ಪಡೆಯದೇ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

'ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಿನ ಸರ್ಕಾರದಿಂದ ನೇಮಕಗೊಂಡವರು ಇಲ್ಲಿಯವರೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಿಲ್ಲ. ಉನ್ನತ ಶಿಕ್ಷಣ ಸಚಿವರು ನೇಮಕವಾಗದ ಕಾರಣ ಪರಿಷತ್ತಿನ ಅಧ್ಯಕ್ಷ ಸ್ಥಾನವೂ ಖಾಲಿ ಇರುತ್ತದೆ. ಈ ಸಮಿತಿಯ ಉಪಾಧ್ಯಕ್ಷರು ಸ್ವಯಂ ಘೋಷಿತವಾಗಿ ತಮ್ಮ ಅಧ್ಯಕ್ಷತೆಯಲ್ಲಿ ಏಕ ರೂಪ ಪರೀಕ್ಷಾ ಶುಲ್ಕದ ಸಂಬಂಧ ಸರ್ಕಾರ ಸಮಿತಿ ರಚಿಸಿರುವುದಾಗಿ ಮಾದ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಇಂದಿನ ದಿನಪತ್ರಿಕೆಗಳಲ್ಲಿ ವರದಿಯೂ ಪ್ರಕಟಗೊಂಡಿದೆ. ಸರ್ಕಾರದ ಆದೇಶದ ನಂತರವೂ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿರುತ್ತದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯಿಂದ ಯಾವುದೇ ಮಾಹಿತಿ ದೊರೆಯುತ್ತಿಲ್ಲ' ಎಂದು ಅವರು ತಿಳಿಸಿದ್ದಾರೆ. 

'ಈ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಉನ್ನತ ಶಿಕ್ಷಣ ಪರಿಷತ್‍ನ ಉಪಾಧ್ಯಕ್ಷರ ರಾಜೀನಾಮೆಯನ್ನು ಪಡೆಯದೇ ಇರುವುದು ಗೊಂದಲಗಳಿಗೆ ಅವಕಾಶವಾಗಿದೆ. ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡದವರನ್ನು ರಾಜ್ಯ ಸರ್ಕಾರ ವಜಾಗೊಳಿಸಬೇಕು' ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. 



                                                    
 

Similar News