ಕಾಂಗ್ರೆಸ್ ಸರಕಾರದಲ್ಲಿ ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್: ಆರ್.ಅಶೋಕ್ ಟೀಕೆ

''ಗ್ಯಾರಂಟಿ ಜಾರಿ ಮಾಡದಿರುವುದು ಜನರಿಗೆ ಮಾಡಿದ ದೊಡ್ಡ ಅಪಮಾನ''

Update: 2023-05-26 08:41 GMT

ಬೆಂಗಳೂರು: 'ಬಿಜೆಪಿ ವಿರೋಧ ಪಕ್ಷವಾಗಿ ಜನರ ಭಾವನೆಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಹೊಸ ಸರಕಾರ ಬಂದಿದೆ. ಮಂತ್ರಿಕಾರ್ಡ್ ಯಾರ್ಯಾರಿಗೆ ಗ್ಯಾರಂಟಿ ಎಂದು ಗೊತ್ತಿಲ್ಲ. ಇದೊಂದು ಡಬಲ್ ಸ್ಟೇರಿಂಗ್ ಸರಕಾರ' ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಪಾರ್ಟಿ ಘೋಷಣೆಯಿಂದ ಇದು ಸಿಕ್ಕಿದೆ. ಪ್ರತಿ ಸಭೆಯಲ್ಲೂ ಸಿಎಂ ಮಾತನಾಡುವ ಮೊದಲು ಉಪ ಮುಖ್ಯಮಂತ್ರಿ ಮಾತನಾಡುತ್ತಾರೆ. ಹೊಸ ಸರಕಾರ ಬಂದಾಗ ಮುಖ್ಯಮಂತ್ರಿಗಳು ಖಡಕ್ ಮಾತನಾಡುವುದು ಪರಿಪಾಠ. ಆದರೆ, ಇಲ್ಲಿ ಸಿಎಂ ಸೈಲೆಂಟ್, ಡೆಪ್ಯುಟಿ ಸಿಎಂ ವೈಲೆಂಟ್. ಅಧಿಕಾರಿಗಳು, ಪೊಲೀಸರು, ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಧಮ್ಕಿ ಹಾಕುವುದು ಅವರ ಹಣೆಬರಹ' ಎಂದು ನುಡಿದರು.

'ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ರವರ ಡಬಲ್ ಸ್ಟೇರಿಂಗ್ ಸರಕಾರ ಮಾಡದೆ ಇರುವುದು ರಾಜ್ಯದ ಜನರಿಗೆ ಮಾಡಿದ ದೊಡ್ಡ ಅಪಮಾನ. ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಅವರು ಪ್ರತ್ಯೇಕ ಗ್ಯಾರಂಟಿ ಕಾರ್ಡ್ ಹಿಡಿದರು. ಸರಕಾರ ಬಂದು 24 ಗಂಟೆಗಳ ಒಳಗೆ ಮಾಡುವುದಾಗಿ ಹೇಳಿದ್ದರು. 240 ಗಂಟೆ ಕಳೆದರೂ ಅವು ಈಡೇರಿಲ್ಲ. ಶಾಸಕರು ಮತ್ತು ಸಿಎಂ, ಡಿಸಿಎಂರವರು ಸೋನಿಯಾ- ರಾಹುಲ್ ಮನೆಗೆ ಹೋಗಿ ಖಾತೆ ಗ್ಯಾರಂಟಿ ಮಾಡುತ್ತಿದ್ದಾರೆ. ಜನರ ಭಾವನೆಗೆ ಬೆಲೆ ಇಲ್ಲ' ಎಂದು ಟೀಕಿಸಿದರು.

Similar News