‘ಗ್ಯಾರಂಟಿ’ ಕುರಿತು ಬಿಜೆಪಿ ಬೊಬ್ಬೆ ಹೊಡೆಯುವುದ ಬೇಡ: ಸಚಿವ ರಾಮಲಿಂಗಾರೆಡ್ಡಿ

Update: 2023-05-26 15:03 GMT

ಬೆಂಗಳೂರು, ಮೇ 26: ಕಾಂಗ್ರೆಸ್ ಪಕ್ಷ ಕೊಟ್ಟಿರುವ ಗ್ಯಾರಂಟಿಗಳನ್ನು ಖಚಿತವಾಗಿ ಜಾರಿಗೊಳಿಸಲಿದೆ. ಆದರೆ, ಬಿಜೆಪಿ ಪಕ್ಷದವರು ಈ ಕುರಿತು ಬೊಬ್ಬ ಹಾಕುವುದು ನಿಲ್ಲಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶುಕ್ರವಾರ ನಗರದ ಬನ್ನಪ್ಪ ಪಾರ್ಕ್ ಬಳಿಯ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ನೂರಕ್ಕೆ ನೂರರಷ್ಟು ಈಡೇರಿಕೆ ಮಾಡಲಿದೆ.ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಬಿಜೆಪಿ ನಾಯಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದು, ಕಾಂಗ್ರೆಸ್ ಸರಕಾರ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆ ವ್ಯಾಪ್ತಿಗಳಲ್ಲಿ ಕ್ಯಾಂಟೀನ್‍ಗಳನ್ನು ಆರಂಭಿಸಲಾಯಿತು.ಇದರಿಂದ ಲಕ್ಷಾಂತರ ಬಡವರು ದಿನನಿತ್ಯ ಊಟ ಮಾಡುವಂತೆ ಆಗಿತ್ತು. ಆದರೆ, ಬಿಜೆಪಿ ಸರಕಾರ ಬಂದ ನಂತರ ಉದ್ದೇಶ ಪೂರಕವಾಗಿಯೇ ಅನುದಾನ ನೀಡದೆ ಬಂದ್ ಆಗುವಂತೆ ಮಾಡಿತ್ತು. ಈಗ ಮತ್ತೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಕ್ಯಾಂಟೀನ್‍ಗಳಿಗೆಮರು ಜೀವ ನೀಡಲಾಗುತ್ತಿದೆ ಎಂದರು.

ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರುತ್ತಾರೆ. ಜತೆಗೆ ಬೆಂಗಳೂರಿನಲ್ಲಿರುವವರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲಕ್ಕಾಗಿಯೇ 5 ರೂಪಾಯಿಗೆ ತಿಂಡಿ, 10 ರೂ.ಗೆ ಊಟ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು, ಕ್ಯಾಂಟೀನ್ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಗಳ ನೇಮಕ ಅಗತ್ಯವಿದ್ದು, ಈ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಸೇರಿದಂತೆ ಪ್ರಮುಖರಿದ್ದರು.

Similar News