ನೂತನ ಸಂಸತ್ ಭವನದ ಅಗತ್ಯವಿರಲಿಲ್ಲ; ಹಳೆಯ ಸಂಸತ್ ಭವನ ಐತಿಹಾಸಿಕ: ನಿತೀಶ್ ಕುಮಾರ್

Update: 2023-05-27 08:13 GMT

ಪಾಟ್ನಾ: ನೂತನ ಸಂಸತ್ ಭವನದ ಉದ್ಘಾಟನೆಗೆ ಇನ್ನು ಒಂದು ದಿನ ಮಾತ್ರ ಬಾಕಿಯಿರುವಾಗ, ನೂತನ ಸಂಸತ್ ಭವನ ನಿರ್ಮಾಣದ ಅಗತ್ಯದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಲವು ಪ್ರಶ್ನೆಗಳನ್ನೆತ್ತಿದ್ದಾರೆ ಎಂದು indiatoday.in ವರದಿ ಮಾಡಿದೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಹಳೆಯ ಸಂಸತ್ ಭವನ ಐತಿಹಾಸಿಕವಾದುದು" ಎಂದು ಬಣ್ಣಿಸಿದ್ದಾರೆ.

"ಬೇಕಾರ್ ಹೈ ವಹಾಂ ಜಾನಾ... (ಅಲ್ಲಿಗೆ ಹೋಗುವುದು ಅನುಪಯುಕ್ತವಾಗಿದೆ)" ಎಂದೂ ನಿತೀಶ್ ಕುಮಾರ್ ಹೇಳಿದ್ದಾರೆ.

"ನೂತನ ಸಂಸತ್ ಭವನ ನಿರ್ಮಿಸಬೇಕಾದ ಅಗತ್ಯವೇನಿತ್ತು? ಹಳೆಯ ಸಂಸತ್ ಭವನ ಐತಿಹಾಸಿಕವಾದುದು. ನಾನು ಪದೇ ಪದೇ ಹೇಳುತ್ತಿದ್ದೇನೆ, ಅಧಿಕಾರದಲ್ಲಿರುವವರು ಈ ದೇಶದ ಚರಿತ್ರೆಯನ್ನು ಬದಲಾಯಿಸಲಿದ್ದಾರೆ" ಎಂದು ಅವರು ಪ್ರತಿಪಾದಿಸಿದ್ದಾರೆ.

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿರುವ ವಿರೋಧ ಪಕ್ಷಗಳ ಪೈಕಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಕೂಡಾ ಸೇರಿದೆ.

Similar News