ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದ ಹಿರಿಯ ಶಾಸಕರ ಅಸಮಾಧಾನ

Update: 2023-05-27 12:24 GMT

ಬೆಂಗಳೂರು, ಮೇ 27: ‘ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ ಕೆಲ ಹಿರಿಯ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ ಚಾಮರಾಜನಗರ, ಹಾಸನ, ಕೋಲಾರ, ಹಾವೇರಿ, ಕೊಡಗು, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ಸೇರಿ ಏಳೆಂಟು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಿಲ್ಲ’ ಎಂದು ಆರೋಪ ವ್ಯಕ್ತವಾಗಿದೆ.

ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ತನ್ವೀರ್ ಸೇಠ್, ಎಂ.ಕೃಷ್ಣಪ್ಪ, ನಸೀರ್ ಅಹ್ಮದ್, ಎನ್.ಎ.ಹಾರೀಸ್, ಬಿ.ಕೆ.ಹರಿಪ್ರಸಾದ್, ಅಜಯ್ ಸಿಂಗ್, ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ಎಸ್.ಆರ್. ಶ್ರೀನಿವಾಸ್, ವಿನಯ್ ಕುಲಕಣಿ ಹಾಗೂ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಇನ್ನೂ ಹಲವು ಮಂದಿಗೆ ಸಚಿವ ಸ್ಥಾನ ಕೈತಪ್ಪಿದೆ.

‘ನನಗೆ ಸಚಿವ ಸ್ಥಾನ ದೊರೆಯದಿರುವುದು ಸಹಜವಾಗಿ ಅಸಮಾಧಾನ ತಂದಿದೆ. ನಾನು ಪ್ರಾಮಾಣಿಕ ಕಾಂಗ್ರೆಸಿಗ. ದುಡಿದು ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ದಿಲ್ಲಿಯಲ್ಲಿ ವಿಮಾನ ಹತ್ತುವರೆಗೂ ಸಂಭನೀಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು, ಅನಂತರ ಏನಾಯಿತು ಎಂದು ಗೊತ್ತಿಲ್ಲ’ ಎಂದು ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಯಚಂದ್ರ, ‘ನಾನು 1978ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೆ. ನಾನು ಶಾಸಕನಾಗಿದ್ದಾಗ, ಈಗ ಮಂತ್ರಿ ಮಂಡಲದಲ್ಲಿ ಸಚಿವರಾಗಿರುವ ಯಾರು ಶಾಸನ ಸಭೆಯಲ್ಲಿ ಇರಲಿಲ್ಲ. ಏಳನೆ ಬಾರಿ ವಿಧಾನಸಭೆ ಪ್ರವೇಶ ಮಾಡುತ್ತಿದ್ದೇನೆ. ಅತ್ಯಂತ ಹಿರಿಯ ಶಾಸಕನಾಗಿರುವ ನನಗೆ ಅವಕಾಶ ಸಿಗಬೇಕಿತ್ತು. ಇದನ್ನು ನಾನು ನಿರೀಕ್ಷೆ ಇರಲಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ಫಲಿತಾಂಶ ಬಂದ ಮಾರನೇ ದಿನದಿಂದಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದೆ. ನನ್ನನ್ನು ಸಂಪುಟ ಸೇರ್ಪಡೆಯಿಂದ ಕೈಬಿಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ’ ಎಂದು ಜಯಚಂದ್ರ ತಿಳಿಸಿದರು.

'ಅಸಮಾಧಾನ ಇಲ್ಲ': ‘ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಮರಳಿರುವುದೇ ತಮಗೆ ಸಂತೋಷ. ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ಬಂದಿದ್ದೇನೆ. ನನಗೆ ಸಚಿವ ಸ್ಥಾನ ದೊರೆಯದಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ’ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

‘ಪಕ್ಷದಲ್ಲಿ ಯಾರು ಎಷ್ಟೇ ಹಿರಿಯರಾದರೂ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಲೇಬೇಕು. ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವ ಬಿ.ಕೆ.ಹರಿಪ್ರಸಾದ್‍ರಿಗೆ ಹೇಳುವಂತದ್ದು ಏನೂ ಇಲ್ಲ. ಪಕ್ಷದಲ್ಲಿ ಯಾರು ಎಷ್ಟೇ ಹಿರಿಯಾದರೂ, ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಬೇಕು’

-ವೀರಪ್ಪ ಮೊಯ್ಲಿ ಮಾಜಿ ಮುಖ್ಯಮಂತ್ರಿ

ಬೆಂಬಲಿಗರ ಪ್ರತಿಭಟನೆ: ಮೈಸೂರಿನ ನರಸಿಂಹರಾಜ ಕ್ಷೇತ್ರದ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ

ಎಂ.ಕೃಷ್ಣಪ್ಪ ಬೆಂಬಲಿಗರಿಂದ ಘೋಷಣೆ: ಬೆಂಗಳೂರಿನ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅವರ ಬೆಂಬಲಿಗರು ರಾಜಭವನದ ಹೊರಗೆ ಎಂ.ಕೃಷ್ಣಪ್ಪ ಭಾವಚಿತ್ರಗಳನ್ನು ಹಿಡಿದುಕೊಂಡು ತಮ್ಮ ನಾಯಕನ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು.

Similar News