ತಿಂಗಳೊಳಗಾಗಿ ರಾಜ್ಯ ಸರಕಾರ ಉಚಿತ ಭರವಸೆ ಈಡೇರಿಸದಿದ್ದರೆ ಜುಲೈ1ರಿಂದ ರಾಜ್ಯಾದ್ಯಂತ ಹೋರಾಟ: ನಳಿನ್ ಕುಮಾರ್ ಕಟೀಲ್

Update: 2023-05-27 13:13 GMT

ಮಂಗಳೂರು, ಮೇ 27: ಕಾಂಗ್ರೆಸ್ ನೇತೃತ್ವದ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ  ಐದು ಗ್ಯಾರಂಟಿ ಸೇರಿದಂತೆ ವಿವಿಧ ಭರವಸೆಗಳನ್ನು ಒಂದು ತಿಂಗಳ ಒಳಗಾಗಿ ಅನುಷ್ಠಾನಗೊಳಿಸದಿದ್ದರೆ  ಜುಲೈ 1ರಿಂದ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ರಾಜ್ಯ ಸರಕಾರ ತನಿಖೆ ಮಾಡಬೇಕು ಮತ್ತು ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಲಾದ ಲೋಕಾಯುಕ್ತ ಪ್ರಕರಣದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬೇಸರವಿದೆ: ನೂತನ ಕಾಂಗ್ರೆಸ್ ಸರಕಾರ ದ.ಕ. ಜಿಲ್ಲೆಗೆ  ಸಚಿವ ಸ್ಥಾನ ನೀಡದಕ್ಕೆ ಬೇಸರವಿದೆ. ಹೀಗಿದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ  ಸರಕಾರಕ್ಕೆ  ನಾವು ಪೂರ್ಣ  ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಸರಕಾರಿ ನೌಕರರಿಗೆ ಏಟು ಉಚಿತ: ಅಧಿಕಾರ ವಹಿಸಿಕೊಂಡು 24 ಗಂಟೆಯೊಳಗೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿಸುವುದಾಗಿ ಚುನಾವಣೆಗೆ ಮೊದಲು ಭರವಸೆ ನೀಡಿದ್ದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು 20 ದಿನಗಳಾದರೂ ಅನುಷ್ಠಾನಗೊಳಿಸುವ ಕಾರ್ಯ ನಡೆದಿದೆ.

ಸರಕಾರ ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಕಾರ್ಯದಲ್ಲಿ ವಿಫಲವಾಗಿದೆ. ಇದರ ಪರಿಣಾಮವಾಗಿ  ರಾಜ್ಯದಲ್ಲಿ ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಉಚಿತ ಏಟು ಭಾಗ್ಯ ಲಭ್ಯವಾಗಿದೆ. ವಿದ್ಯುತ್ ಬಿಲ್ ಕಲೆಕ್ಟರ್‌ಗಳು ಬಿಲ್ ಮಾಡಲು ಹೋದಾಗ ಜನರಿಂದ ವಿರೋಧ ಮತ್ತು ಗಲಾಟೆ ಮಾಡಿರುವುದನ್ನು ನೋಡಿದ್ದೇವೆ.  ಬಸ್‌ಗೆ ಹತ್ತಿದ  ಮಹಿಳೆಯರು ಟಿಕೆಟ್ ವಿಚಾರದಲ್ಲಿ  ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ  ಘಟನೆಗಳು  ವರದಿಯಾಗಿವೆ ಎಂದರು.

ದ್ವೇಷದ ರಾಜಕಾರಣ ಮುಂದುವರಿಕೆ: ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ಹೆಚ್ಚಿಕೊಂಡಿದೆ. ವಿಜಯೋತ್ಸವದಲ್ಲಿ ಕಾಂಗ್ರೆಸ್ ಗಲಭೆಯನ್ನು ಸೃಷ್ಟಿಸಿತ್ತು. ಒಬ್ಬನ ಹತ್ಯೆಯಾಗಿತ್ತು. ಮೂರು ನಾಲ್ಕು ಮನೆಗಳ ಮೇಲೆ ದಾಳಿ ನಡೆದಿದೆ. ದ.ಕ. ಜಿಲ್ಲೆಯಲ್ಲೂ ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು  ತನ್ನ ಮಾತಿನಲ್ಲಿ ಹಿಂದೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 24 ಮಂದಿ ಹಿಂದೂ ಯುವಕರ ಹತ್ಯೆಯಾಗಿತ್ತು ಎಂದು ಉಲ್ಲೇಖ ಮಾಡಿದ್ದರು. ಇದಕ್ಕಾಗಿ ಅವರ ಮೇಲೆ ಕೇಸ್ ದಾಖಲಾಗಿದೆ. ಬಂಟ್ವಾಳದ ಮಣಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವನ ಮೇಲೆ ಕೇಸು ದಾಖಲಾಗಿದೆ. ಸುಳ್ಯದಲ್ಲೂ  ಒಂದು ಘಟನೆ ನಡೆದಿದೆ. ದ್ವೇಷ ರಾಜಕಾರಣದ ಮೂಲಕ ನಾಯಕರ ಮೇಲೆ  ಕೇಸು ದಾಖಲಿಸುವುದ ಮಾತ್ರವಲ್ಲದೆ ಕಾರ್ಯಕರ್ತರ ಮೇಲೆ  ಹಲ್ಲೆ, ಗೂಂಡಾಗಿರಿ, ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ  ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆ, ಧ್ವಜ ಹಾರಿಸುವಿಕೆ ನಡೆದಿದೆ ಎಂದು ಆರೋಪಿಸಿದ ನಳೀನ್‌ ಕುಮಾರ್ ತಾಕತ್ತಿದ್ದರೆ ಅವರ ಮೇಲೆ ಕೇಸು ಹಾಕಿ ಎಂದು ಸವಾಲು ಎಸೆದರು.

ಪ್ರವೀಣ್ ಪತ್ನಿಗೆ ಎನ್‌ಎಂಪಿಎಯಲ್ಲಿ  ಉದ್ಯೋಗ ನೀಡಲು ಯತ್ನ : ಬಿಜೆಪಿ ಕಾರ್ಯಕರ್ತ  ಪ್ರವೀಣ್ ನೆಟ್ಟಾರು ಪತ್ನಿ ನೂತನ್ ಕುಮಾರಿಗೆ ಅನುಕಂಪದ ನೆಲೆಯಲ್ಲಿ ಹಿಂದಿನ ಸರಕಾರ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರ ಇದನ್ನು ರದ್ದುಪಡಿಸಿದೆ. ಸರಕಾರ ಹೀಗೆ ಮಾಡಬಾರದಿತ್ತು. ಅವರಿಗೆ  ಅನುಕಂಪ ಆಧಾರದಲ್ಲಿ ಉದ್ಯೋಗವನ್ನು ಪುನ: ನೀಡುವಂತೆ  ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಸರಕಾರ ಪರಿಹಾರ ನೀಡಿದೆ. ಬಿಜೆಪಿ ವತಿಯಿಂದ ಮನೆ ಕಟ್ಟಿಸಿಕೊಡಲಾಗಿತ್ತು. ಪ್ರವೀಣ್ ಪತ್ನಿಗೆ ಹಿಂದಿನ ಬಿಜೆಪಿ ಸರಕಾರ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿತ್ತು. ಖಾಯಂ ಮಾಡುವ  ಪ್ರಯತ್ನ ನಡೆಯುತ್ತಿತ್ತು. ಅಷ್ಟರಲ್ಲಿ ಸರಕಾರ ಬದಲಾಯಿತು. ಒಂದು ವೇಳೆ ರಾಜ್ಯ ಸರಕಾರ ಉದ್ಯೋಗ ನೀಡದಿದ್ದರೆ ಚಿಂತೆಯಿಲ್ಲ. ನಾವು  ಕೇಂದ್ರ ಸರಕಾರದ ಎನ್‌ಎಂಪಿಟಿ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಹಿಂದೆ  ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನಗಳನ್ನು, ಗುತ್ತಿಗೆ ಕಾಮಗಾರಿಯನ್ನು  ನೂತನ ಸರಕಾರ ತಡೆ ಹಿಡಿದಿದೆ. ಇದು ಸರಿಯಲ್ಲ . ಈ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿಲ್ಲ ಎಂದರು.

ಕಾಂಗ್ರೆಸ್‌ನವರಿಗೆ ನಾವೇ ಉತ್ತರ ಕೊಡುತ್ತೇವೆ:  ಬಿಜೆಪಿಯಿಂದ ಯಾರೂ ರಾಜೀನಾಮೆ ಕೊಡುವವರು ಇಲ್ಲವೇ? ಎಂದು ಕಾಂಗ್ರೆಸ್‌ನ ಟ್ವೀಟ್ ಬಗ್ಗೆ  ಸುದ್ದಿಗಾರರು ಗಮನ ಸೆಳೆದಾಗ ಕಾಂಗ್ರೆಸ್‌ನವರಿಗೆ ನಾವೇ ಉತ್ತರ ಕೊಡುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಫೋಟೊಕ್ಕೆ ಚಪ್ಪಲಿ ಹಾಕಿರುವ ಘಟನೆ ನಡೆದಾಗ ತಾನು ನಗರದಲ್ಲಿ ಇರಲಿಲ್ಲ. ಬೆಂಗಳೂರಿನಲ್ಲಿ ಇದ್ದೆ. ತಾನು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಿಜೆಪಿ ಈ ವಿಚಾರದಲ್ಲಿ ಕೇಸು ನೀಡಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವಾಗ ತಮ್ಮ ಬಗ್ಗೆ ತುಂಬಾ ಟೀಕೆ ಕೇಳಿ ಬರುತ್ತದೆ ಎಂದಾಗ ರಾಜಕಾರಣದಲ್ಲಿ, ಸಾಮಾಜಿಕ ರಂಗದಲ್ಲಿ  ಟೀಕೆ ಸಹಜ. ರಚನಾತ್ಮಕ ಟೀಕೆಗಳನ್ನು ಸ್ವೀಕಾರ ಮಾಡುತ್ತೇವೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್ , ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ವಿಪ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.

Similar News