ಅಪಹಾಸ್ಯ ಮಾಡುವ ಮುನ್ನ...

ಮೆಲ್ಮಾತು

Update: 2023-05-28 04:54 GMT

ಒಬ್ಬ ವ್ಯಕ್ತಿ ತಿಳಿದು ಮಾಡುವ ತಪ್ಪುಗಳನ್ನು ಅನ್ಯರು ವ್ಯಂಗ್ಯ, ತಿಳಿ ವಿಮರ್ಶೆ, ಕಟು ಟೀಕೆಯ ಮೂಲಕ ಕಾಲೆಳೆಯುವುದೇ ಬೇರೆ, ಜನರ ಸರಿಪಡಿಸಲಾಗದ ಹುಟ್ಟು ಸಮಸ್ಯೆಗಳನ್ನು ಪರಿಹಾಸ್ಯ ಮಾಡುವುದೇ ಬೇರೆಯಾಗಿದೆ. ಮೊದಲಿನದರಲ್ಲಿ ಜನರ ಬುದ್ಧಿವಂತಿಕೆ ಗುರುತಿಸಲ್ಪಟ್ಟರೆ ಎರಡನೆಯದರಲ್ಲಿ ಮನುಷ್ಯನ ರಾಕ್ಷಸ ಗುಣದ ಪ್ರದರ್ಶನವಾಗುವುದು.

ಒಂದೊಮ್ಮೆ ಕಪ್ಪೆಯೊಂದು ದೊಡ್ಡದೊಂದು ಮರವನ್ನು ಏರತೊಡಗಿತಂತೆ. ಅರ್ಧಕ್ಕೇರಿದ ಕಪ್ಪೆಏರುವುದನ್ನು ನಿಲ್ಲಿಸಿ ಕೆಳಕ್ಕೆ ನೋಡಿತಂತೆ. ಅಲ್ಲಿ ತನ್ನ ಬಹಳಷ್ಟು ಬಂಧು-ಬಳಗ ಜಮಾಯಿಸಿ ಕೈ ಮೇಲಕ್ಕೆತ್ತಿ ಎಚ್ಚರಿಸುತ್ತಿರುವುದು ಅದಕ್ಕೆ ಕಾಣಿಸುತ್ತದೆ. ಈ ಕಪ್ಪೆಯು ಈಗಾಗಲೇ ಅವುಗಳ ಮಾತುಗಳು ಕೇಳಿಸದಷ್ಟು ಮೇಲಕ್ಕೆ ಏರಿಯಾಗಿತ್ತು. ಆದಕಾರಣ ಕೆಳಗಿರುವವುಗಳ ಕೂಗನ್ನು ಮರ ಹತ್ತುತ್ತಿರುವ ಕಪ್ಪೆಯು ಸಕಾರಾತ್ಮಕವಾಗಿ ತೆಗೆದುಕೊಂಡಿತು. ಅಂದರೆ ‘‘ಇವರು ಶಹಬ್ಬಾಸ್! ಎಂದು ನನ್ನನ್ನು ಪ್ರೇರೇಪಿಸುತ್ತಿರುವರು’’ ಎಂದೇ ಅದು ಭಾವಿಸುತ್ತದೆ ಹಾಗೂ ತಾನು ಮೇಲೇರುವುದನ್ನು ಮುಂದುವರಿಸಿ ಅದು ಮರದ ಮೇಲಿನ ಕೊನೆಯ ಕೊಂಬೆಯನ್ನು ತಲುಪಿತಂತೆ.

ಆದರೆ ನಿಜವೆನೆಂದರೇ.. ಕೆಳಗೆ ನಿಂತವುಗಳು ‘‘ನಿನ್ನಿಂದ ಇದು ಆಗದು, ನಿನಗೆ ಸಾಧ್ಯವಿಲ್ಲ, ಬೇಡಾ.... ಕೆಳಕ್ಕಿಳಿ’’ ಎಂದೇ ಕಿರುಚುತ್ತಿದ್ದವಂತೆ.

ಇದೊಂದು ಕಥೆ ಮಾತ್ರಾ.

ಮನುಷ್ಯರಲ್ಲಿ ಹುಟ್ಟಿನಿಂದಲೇ ಕೆಲವೊಂದು ಕುಂದುಕೊರತೆ ಅಥವಾ ಸಮಸ್ಯೆಗಳಿರುತ್ತವೆ. ಅವುಗಳಲ್ಲಿ ಕೆಲವು ಸಮಸ್ಯೆ ಅನ್ಯರ ಗಮನಕ್ಕೆ ಬಂದರೆ, ಇನ್ನು ಕೆಲವು ನಮಗೆ ಮಾತ್ರ ತಿಳಿದಿದ್ದು, ಅನ್ಯರಿಗೆ ತಿಳಿಯದ್ದೂ ಇವೆ.

ಇದರಂತೆಯೇ ಮತ್ತೆ ಕೆಲವು ನಮ್ಮ ಸಮಸ್ಯೆ; ಅನ್ಯರಿಗೆ ತಿಳಿದಿದ್ದು, ನಮಗೆ ಗೊತ್ತಾಗದ್ದೂ ಅಥವಾ ನಮಗೆ ಗೊತ್ತಿದ್ದರೂ.. ನಮ್ಮಿಂದ ಸರಿಪಡಿಸಲು ಅಸಾಧ್ಯವಾದುದು ಮತ್ತು ಕಷ್ಟಸಾಧ್ಯವಾದುದೂ ಇವೆ.

ಇವುಗಳಲ್ಲಿ ಮಾತಿನ ಉಗ್ಗುವಿಕೆ, ತೊದಲು, ಉಚ್ಚಾರಣಾ ದೋಷ ಅಥವಾ ಆಲಿಸುವಿಕೆಯ ಸಮಸ್ಯೆ ಮುಂತಾದವುಗಳೂ ಸೇರಿಕೊಂಡಿವೆ.

ಇವು ಹುಟ್ಟಿನಿಂದಲೇ ಇರುವ ಸಮಸ್ಯೆಗಳಾಗಿದ್ದು. ಇವುಗಳನ್ನು ‘ಪ್ರಯತ್ನದಿಂದ ಸರಿಪಡಿಸಲು ಸಾಧ್ಯವಿರುವಂತ ಹದ್ದು’ ಮತ್ತು ‘ಸರಿಪಡಿಸಲು ಸಾಧ್ಯವೇ ಆಗದ್ದು’ ಎಂದು ವಿಂಗಡಿಸಬಹುದು.

 ಕರಾವಳಿಗರು ಕನ್ನಡ ಮಾತಾಡುವುದು ತುಳುವಿನ ಧಾಟಿಯಲ್ಲಿ. ಇದರಲ್ಲಿ ಪೂರ್ತಿ ಅಕ್ಷರ, ಪದ, ವಾಕ್ಯಗಳು ಸ್ಪಷ್ಟವಾಗಿ ವಿವರವಾಗಿ ಇರುತ್ತದೆ.

ಉದಾಹರಣೆಗೆ: ‘‘ನಾನು ಹೋಗುವುದಿಲ್ಲ, ನಾನು ಬರುವುದಿಲ್ಲ’’.

ಆದೇ ತರ ಘಟ್ಟದ ಮೇಲಿನ, ಮೈಸೂರು, ಬೆಂಗಳೂರು, ಮಲೆನಾಡಿಗರ ಭಾಷೆ ಅವಸರದಲ್ಲಿ ಆಡಿ ಮುಗಿಸುವಂತಿದೆ.

ಉದಾಹರಣೆಗೆ: ‘‘ನಾ ಬರಲ್ಲ, ನಾ ಹೋಗಲ್ಲ’’.

ಇನ್ನೂ ವಿಶೇಷವೆಂದರೆ ಕರಾವಳಿಗರಾದರೂ ಒಮ್ಮೆ ನಮಗೆ ಘಟ್ಟದ ಮೇಲಿನ ಕನ್ನಡ ಭಾಷೆ ಒಗ್ಗಿಕೊಂಡು ಅಭ್ಯಾಸವಾಗಿ ಬಿಟ್ಟರೆ ಮತ್ತೆ ಕರಾವಳಿ ಶೈಲಿಯಲ್ಲಿ ಕನ್ನಡ ಮಾತಾಡಲು ಕಷ್ಟವಾಗುವುದುಂಟು.

ಇದೇ ತರ ಕೇರಳಿಗರ ಮಲಯಾಳಂ ಶೈಲಿ; ಕೇರಳಿಗರು ಯಾವುದೇ ಭಾಷೆಯನ್ನು ಮಲಯಾಳಂನ ಧಾಟಿಯಲ್ಲೇ ಮಾತಾಡುವುದನ್ನು ನಾವು ಗಮನಿಸಿರುತ್ತೇವೆ. ಅವರು ಮಾತ್ರವಲ್ಲದೆ ದೇಶೀಯ, ವಿದೇಶಿಯ ಹಲವು ಭಾಷಿಗರು ಅನ್ಯಭಾಷೆಯನ್ನು ತಮ್ಮದೇ ಭಾಷಾ ಧಾಟಿಯಲ್ಲಿ ಮಾತಾಡುತ್ತಿರುವುದು ನಾವು ಕಂಡು ಕೇಳಿರುತ್ತೇವೆ.

ಈ ತರ ತಮಗೆ ಒಮ್ಮೆ ಒಗ್ಗಿಕೊಂಡ ಉಚ್ಚಾರ ಶೈಲಿಯನ್ನು ‘ಬದಲಿಸಲು ಸಾಧ್ಯವಿದ್ದೂ.. ಬದಲಿಸಲಾಗದವರು’ ಹಾಗೂ ‘ಬದಲಿಸಲೆಂದೆಂದೂ ಸಾಧ್ಯವೇ ಆಗದವರು’ ಇರುವುದನ್ನು ನಾವು, ನಮ್ಮಲ್ಲಿ ವಿಮರ್ಶಾತ್ಮಕ ಗುಣವಿದ್ದರೆ ಮಾತ್ರ ಬಹಳ ಸುಲಭವಾಗಿ ಗುರುತಿಸಬಹುದು.

ಭಾಷೆ ಚೆನ್ನಾಗಿ ಗೊತ್ತಿದ್ದು, ಮಾತಾಡುವ ಕಲೆಯೂ ಗೊತ್ತಿದ್ದು, ಸ್ಪಷ್ಟವಾಗಿ ಎಲ್ಲಾ ಪದಗಳನ್ನು ಮಾತ್ರ ಉಚ್ಚರಿಸಲಾಗದಂತಹ ಹುಟ್ಟುಸಮಸ್ಯೆ ಕೆಲವರಲ್ಲಿರುತ್ತದೆ. ಇದು ಮಾತಾಡುವವರು ಮಾಡುವ ತಪ್ಪಲ್ಲದಿದ್ದರೂ ಇದನ್ನು ಆಲಿಸುವವರಲ್ಲಿ ಕೆಲವರು ಇವರನ್ನು ಪರಿಹಾಸ್ಯ ಮಾಡುತ್ತಿರುವುದು ಮಾತ್ರ ದೊಡ್ಡ ತಪ್ಪಾಗಿರುತ್ತದೆ.

ಒಬ್ಬ ವ್ಯಕ್ತಿ ತಿಳಿದು ಮಾಡುವ ತಪ್ಪುಗಳನ್ನು ಅನ್ಯರು ವ್ಯಂಗ್ಯ, ತಿಳಿ ವಿಮರ್ಶೆ, ಕಟು ಟೀಕೆಯ ಮೂಲಕ ಕಾಲೆಳೆಯುವುದೇ ಬೇರೆ, ಜನರ ಸರಿಪಡಿಸಲಾಗದ ಹುಟ್ಟು ಸಮಸ್ಯೆಗಳನ್ನು ಪರಿಹಾಸ್ಯ ಮಾಡುವುದೇ ಬೇರೆಯಾಗಿದೆ. ಮೊದಲಿನದರಲ್ಲಿ ಜನರ ಬುದ್ಧಿವಂತಿಕೆ ಗುರುತಿಸಲ್ಪಟ್ಟರೆ ಎರಡನೆಯದರಲ್ಲಿ ಮನುಷ್ಯನ ರಾಕ್ಷಸ ಗುಣದ ಪ್ರದರ್ಶನವಾಗುವುದು.

ಒಬ್ಬನ ಹುಟ್ಟಿನಿಂದಲೇ ಬರುವ (ದೈವದತ್ತ) ಮಾತಿನ ಉಗ್ಗು, ತೊದಲು, ಉಚ್ಛಾರ ದೋಷವನ್ನು ನೋಡುವ ಅಥವಾ ಆಲಿಸುವ ಜನರಲ್ಲೂ ಕೆಲವು ವಿಂಗಡಗಳಿರುತ್ತವೆ.

ಉಗ್ಗುವ, ತೊದಲುವ ಅಥವಾ ಅನ್ಯರ ಯಾವುದೇ ಸಮಸ್ಯೆಯನ್ನು ‘ಸಹಜವಾಗಿ ನೋಡುವವರು, ಕರುಣೆಯಿಂದ ನೋಡುವವರು ಹಾಗೂ ಅಪಹಾಸ್ಯ ಮಾಡುವವರು’ ಎನ್ನುವ ಮೂರು ಗುಂಪಿನವರನ್ನು ನಾವು ಮನುಷ್ಯ ವರ್ಗದಲ್ಲಿ ಕಾಣಬಹುದು.

ವಿಚಿತ್ರವೆಂದರೆ ಈ ಅಪಹಾಸ್ಯ ಮಾಡುವ ಗುಣದವರಲ್ಲಿ ಹಲವು ವಿದ್ಯಾ ಪಾರಂಗತರೂ ಇರುವರು. ಇವರಿಗೆ ಅನ್ಯರನ್ನು ಅಪಹಾಸ್ಯ ಮಾಡುವ ಭರದಲ್ಲಿ ತಮ್ಮ ಕಿಯೆಯಲ್ಲಿ ಯಾವುದೇ ತಪ್ಪು-ಸರಿ, ಪಾಪ-ಪುಣ್ಯಗಳು ಗಣನೆಗೆ ಬರುವುದೇ ಇಲ್ಲ.

ಇದು ಯಾಕೆ ಹೀಗೆಂದರೆ.... ಮನುಷ್ಯ ಸಾಮಾನ್ಯವಾಗಿ ಮೈಗೂಡಿಸಿಕೊಂಡ ಅಸಹಜ ಪ್ರಕ್ರಿಯೆಗಳಲ್ಲಿ ಈ ಅನಾಗರಿಕತೆಯ ಗುಣವನ್ನು ತನ್ನೊಳಗೆ ತುಂಬಿಕೊಂಡಿರುವನು.

ಇದು ಉಗ್ಗು, ತೊದಲು, ಉಚ್ಚಾರ ದೋಷಕ್ಕಿಂತಲೂ ವಿಚಿತ್ರವಾದ ಹಾಗೂ ವಿಕೃತವಾದ ಅವರೊಳಗಿನ ಸಮಸ್ಯೆಯಾಗಿರುತ್ತದೆ. ಆದ್ದರಿಂದಲೇ ಇವರು ಕರುಣೆ, ಮಾನವೀಯತೆ ಇಲ್ಲದೆ ಅನ್ಯರ ಹುಟ್ಟು ಸಮಸ್ಯೆಯನ್ನು ಅಪಹಾಸ್ಯ ಮಾಡುತ್ತಿರುವರು.

ಆದರೆ ಇವರು ಬಯಸಿದರೆ ತಮ್ಮ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾತ್ರ ಖಂಡಿತಾ ಸಾಧ್ಯವಿದೆ.

 ನಾವು ಹಲವು ಐತಿಹಾಸಿಕ ಕಥೆಗಳನ್ನು ಓದಿರುತ್ತೇವೆ. ಅವುಗಳಲ್ಲಿ, ತಮ್ಮ ಹುಟ್ಟು ದೌರ್ಬಲ್ಯದಿಂದಾಗಿ ಅದೆಷ್ಟೋ ಮಹಾನ್ ವ್ಯಕ್ತಿಗಳು ಅಪಮಾನಗಳನ್ನು ಅನುಭವಿಸಿದರೂ ಎಲ್ಲಾ ನುಂಗಿಕೊಂಡು ಎಳ್ಳಷ್ಟೂ ಕುಗ್ಗದೆ ಎತ್ತರಕ್ಕೆ ಬೆಳೆದು ನಿಂತು ಉತ್ತಮ ಸಾಧನೆಗೈದಿರುವ ಕಥೆಗಳೂ ಬಹಳ ಇವೆ. ಈ ಕಥೆಗಳನ್ನು ಓದಿಯೋ ಗುರುಹಿರಿಯರಿಂದ ಅರಿತುಕೊಂಡೋ ನಾವು ಮೆಚ್ಚಿಕೊಂಡಿರುತ್ತೇವೆ. ಅದೇ ರೀತಿ ಆ ಕಥೆಗಳನ್ನು ಹೆಮ್ಮೆಯಿಂದ ಕೊಂಡಾಡಿ ನಮ್ಮ ಮಕ್ಕಳಿಗೂ ಹೇಳುತ್ತಿರುತ್ತೇವೆ. ಆದರೆ ಇಂತಹ ಐತಿಹಾಸಿಕ ಕಥೆಗಳನ್ನು ಬಹಳ ಇಷ್ಟಪಡುವ ಇವತ್ತಿನ ಯುವಪೀಳಿಗೆಯ ಈ ‘ಅಪಹಾಸ್ಯದ ಗುಣ’ದವರಿಗೆ ಮಾತ್ರ, ತಾವೀಗ ಖುದ್ದು ಆ ಐತಿಹಾಸಿಕ ಕಥೆಯಲ್ಲಿನ ಖಳನಾಯಕನ ಪಾತ್ರ ನಿರ್ವಹಿಸುತ್ತಿರುವುದರ ಅರಿವೇ ಇರುವುದಿಲ್ಲ.

ಅಂದರೆ ಇವರು ಈ ವಿದ್ಯಾವಂತಿಕೆಯ ಕಾಲಘಟ್ಟದಲ್ಲಿದ್ದೂ ಸಕಾರಾತ್ಮಕ ಚಿಂತನೆಯಿಂದ ಜನರ ‘ಬೆನ್ನು ತಟ್ಟುವವರಾಗಿರದೆ, ಬದಲಿಗೆ ಅಪಮಾನಿಸುವ’ ವರ್ಗಕ್ಕೆ ಸೇರಿರುವುದು ಇವರದೇ ಗಮನಕ್ಕೆ ಬಾರದಿರುವುದು ವಿಷಾದಕರ ಸಂಗತಿಯಾಗಿದೆ.

ಇದರಿಂದಾಗಿ ಕೆಲ ಜನರಿಂದು ತಮ್ಮಲ್ಲಿ ಎಷ್ಟೇ ದೊಡ್ಡ ಪದವಿ ಸರ್ಟಿಫಿಕೇಟು ಇದ್ದರು ಕೂಡಾ.. ಅವಿದ್ಯಾವಂತ, ಅನಾಗರಿಕ ವರ್ಗಕ್ಕೆ ಸರಿಸಮಾನರಾಗಿ ನಿಲ್ಲುವರು. ವಿವೇಚನೆ ಇಲ್ಲದೆ ತಮ್ಮ ಈ ಅಪಹಾಸ್ಯದ ಮಾತುಗಳ ಬಾಣವನ್ನು ಇನ್ನೊಬ್ಬರ ಮೇಲೆ ಜಾಲತಾಣಗಳಲ್ಲಿ ಧಾರಾಳವಾಗಿ ಪ್ರಯೋಗಿಸುವ ಮೂಲಕ ಇವರು ತಮಗರಿವಿಲ್ಲದೇ ಮುಂದಿನ ಪೀಳಿಗೆಗೂ ಇದನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತಿರುತ್ತಾರೆ.

ಹಾಗಾಗಿ ಜಾಲತಾಣ ಬಳಸುವ ಪ್ರತಿಯೊಬ್ಬರು ಇಂದು ಏಕಾಂತದಲ್ಲಿ ಕುಳಿತು ಆವಾಗವಾಗ ತಮ್ಮಲ್ಲಿಯೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಇದರಿಂದ ಜ್ಞಾನೋದಯವಾಗಿ ಸ್ವಯಂ ಮಾನಸಿಕ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಉತ್ತಮವಾಗಿ ಕಾಪಾಡಿಕೊಳ್ಳಲು ಖಂಡಿತಾ ಸಾಧ್ಯವಾಗುವುದು.

Similar News