ಪ್ರಮುಖ ಖಾತೆಗೆ ಪಟ್ಟು: ರಾಮಲಿಂಗಾರೆಡ್ಡಿ ಭೇಟಿ ಮಾಡಿ ಮನವೊಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-05-28 14:16 GMT

ಬೆಂಗಳೂರು, ಮೇ 28: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.

ರವಿವಾರ ಕೋರಮಂಗಲದಲ್ಲಿರುವ ರೆಡ್ಡಿ ನಿವಾಸಕ್ಕೆ ತೆರಳಿದ ಡಿ.ಕೆ.ಶಿವಕುಮಾರ್, ‘ಸರಕಾರ ಅಧಿಕಾರಕ್ಕೆ ಬಂದಿರುವ ಆರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.

‘ಈ ಹಿಂದೆ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸಾರಿಗೆ ಖಾತೆ ನಿರ್ವಹಿಸಿದ್ದೇನೆ. ಇದೀಗ ಅದೇ ಖಾತೆ ನಿರ್ವಹಿಸಲು ನನಗೆ ಉತ್ಸುಕತೆ ಇಲ್ಲ. ಹೀಗಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಅಲ್ಲದೆ, ತನಗೆ ಪ್ರಮುಖ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದರು ಎಂದು ಎನ್ನಲಾಗಿತ್ತು.

ಉಪಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಸೇರಿದಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮನೋಹರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News