ನನ್ನ ಮಗ ಫಾಝಿಲ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಉಮರುಲ್ ಫಾರೂಕ್

"ಕೊಲೆ ಮಾಡಿಸಿದ್ದು ನಮ್ಮವರೇ ಅಂತ ಶರಣ್ ಪಂಪ್ವೆಲ್ ಹೇಳ್ತಿದ್ದಾನೆ"

Update: 2023-05-28 17:11 GMT

ಸುರತ್ಕಲ್, ಮೇ 28: ನನ್ನ ಮಗ ಫಾಝಿಲ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕೆಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಅವರ ತಂದೆ ಉಮರುಲ್ ಫಾರೂಕ್ ನೂತನ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ರವಿವಾರ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಸುಳ್ಯ ತಾಲೂಕಿನ ನೆಟ್ಟಾರು ನಿವಾಸಿ ಪ್ರವೀಣ್ ನೆಟ್ಟಾರ್ ಅವರ ಕೊಲೆಗೆ ಪ್ರತೀಕಾರವಾಗಿ ನನ್ನ ಮಗನ ಕೊಲೆ ಮಾಡಿಸಲಾಗಿತ್ತು. ಈ ಕುರಿತು ಸಂಘ ಪರಿವಾರದ ಮುಖಂಡ ಶರಣ್ ಪಂಪ್ವೆಲ್ ಸಭೆಯೊಂದರಲ್ಲಿ ಮಾತನಾಡುತ್ತಾ, ಫಾಝಿಲ್‌ನನ್ನು ನಮ್ಮ ಸಂಘಟನೆಯ ಯುವಕರಿಂದ ಮಾಡಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ ಎಂದು ಉಮರುಲ್ ಫಾರೂಕ್ ತಿಳಿಸಿದ್ದಾರೆ.

ಹಿಂದಿನ ಬೊಮ್ಮಾಯಿ ಸರಕಾರವಿದ್ದಾಗ ನಾನು ಪೊಲೀಸ್ ಉನ್ನತ ಅಧಿಕಾರಿಗಳು, ಸರಕಾರದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಲಿಖಿತ ದೂರುಗಳನ್ನು ಸಲ್ಲಿಸಿದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ನೇತೃತ್ವದ ಅಹಿಂದ ಸರಕಾರವಿದ್ದು, ನನ್ನ ಮಗನ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು. ಆ ಮೂಲಕ ಕೊಲೆ ಹಿಂದಿನ ಕೈಗಳನ್ನು ಬಂಧಿಸಿ ಸೂಕ್ತ ಕಾನುನು ಕ್ರಮಗಳನ್ನು ಕೈಗೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಉಮರುಲ್ ಫಾರೂಕ್  ಸರಕಾರವನ್ನು ಆಗ್ರಹಿಸಿದ್ದಾರೆ.

ಪ್ರವೀಣ್ ನೆಟ್ಟಾರು ಪತ್ನಿಯ ಮರು ನೇಮಕ ಸ್ವಾಗತಾರ್ಹ, ಅಂತೆಯೇ ನನ್ನ ಮಗನ ಕೊಲೆಗೂ ನ್ಯಾಯ ಒದಗಿಸಿ. ಪ್ರವೀಣ್ ನೆಟ್ಟಾರುಗೆ ಪ್ರತಿಕಾರವಾಗಿ ನನ್ನ ಮಗನ ಕೊಲೆ ನಡೆಸಲಾಗಿತ್ತು.  ಆದರೆ, ಅಂದಿನ ಬಿಜೆಪಿ ಸರಕಾರ ಪ್ರವೀಣ್ ನೆಟ್ಟರು ಕುಟುಂಬಕ್ಕೆ ಮನೆ ಮೂಲ ಸೌಕರ್ಯ ಹಾಗೂ ಅವರ ಪತ್ನಿಗೆ ಅನುಕಂಪದ ಮೇರೆಗೆ ಉದ್ಯೋಗ ಕಲ್ಪಿಸಿತ್ತು.

ನೂತನ ಸರಕಾರ ಬಂದಾಗ ನೆಟ್ಟಾರು ಅವರ ಪತ್ನಿಯ ಉದ್ಯೋಗ ಹಿಂಪಡೆಯಲಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗಂಟೆಗಳ ಒಳಗಾಗಿ ಮರುನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ. ಅದೇ ರೀತಿ ನನ್ನ ಮಗನ ಕೊಲೆಗೂ ಸರಕಾರ ನ್ಯಾಯ ಒದಗಿಸಬೇಕೆಂದು ಎಂದು ಫಾಝಿಲ್ ಅವರ ತಂದೆ ಉಮರುಲ್ ಫಾರೂಕ್  ಆಗ್ರಹಿಸಿದ್ದಾರೆ.

Similar News