ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೊಂದು ಷರತ್ತು, ಸಲಹೆ..: ಸಿಎಂಗೆ ಪತ್ರ ಬರೆದ ತಳಸಮುದಾಯಗಳ ಅಧ್ಯಯನ ಕೇಂದ್ರ

Update: 2023-05-28 18:26 GMT

ಬೆಂಗಳೂರು, ಮೇ 28: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಪ್ರಗತಿ ಸಾಧಿಸಲಿವೆ’ ಎಂದು ಬಣ್ಣಿಸಿರುವ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರವೂ, ‘ಈ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ಷರತ್ತು ವಿಧಿಸುವ ಸಲಹೆ’ ನೀಡಿದೆ.

ರವಿವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಳಸಮುದಾಯಗಳ ಅಧ್ಯಯನ ಕೇಂದ್ರದ ಡಾ.ಆರ್.ವಿ.ಚಂದ್ರಶೇಖರ್ ಪತ್ರ ಬರೆದಿದ್ದು, ‘ಗೃಹ ಲಕ್ಷ್ಮಿ ಯೋಜನೆ, ಯುವ ನಿಧಿ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಸೇರಿದಂತೆ ರಾಜ್ಯ ಸರಕಾರ ಜಾರಿಗೊಳಿಸಲು ಹೊರಟಿರುವ ಐದು ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗಿದ್ದು, ಇದನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

-‘ಯುವ ನಿಧಿ’ ನಿರುದ್ಯೋಗ ಭತ್ಯೆ: ರಾಜ್ಯ ಸರಕಾರ ಯುವ ಜನರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಪ್ರಕಟಿಸಿದ್ದು, ಈ ಸಂಬಂಧ ಫಲಾನುಭವಿಗಳು ಸಂಪೂರ್ಣವಾಗಿ ನಿರುದ್ಯೋಗಿಯಾಗಿಬೇಕು. ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸ ಮಾಡಿರಬೇಕು. ಬಿಪಿಎಲ್ ಪಡಿತರ ಚೀಟಿ, ನಿರುದ್ಯೋಗಿ ಎಂದು ಸ್ಥಳೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದಿರಬೇಕು. ಅದೇ ರೀತಿ, ಎಲ್ಲಿಗೂ ಪೂರ್ಣ ಹಾಗೂ ಅಲ್ಪವಧಿ ಕಾರ್ಯನಿರ್ವಹಣೆ ಮಾಡುತ್ತಿರಬಾರದು.

-ಗೃಹ ಲಕ್ಷ್ಮೀ ಯೋಜನೆ: ಈ ಯೋಜನೆ ಮೂಲಕ ರಾಜ್ಯದ ಪ್ರತಿ ಗೃಹಣಿ, ಮನೆಯ ಯಾಜಮಾನಿಗೆ ರಾಜ್ಯ ಸರಕಾರವೂ ಮಾಸಿಕ 2 ಸಾವಿರ ರೂ.ನೀಡಲಿದ್ದು, ಇದಕ್ಕೆ ಫಲಾನುಭವಿ ಕನಿಷ್ಟ 10 ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿರಬೇಕು ಎನ್ನುವ ನಿಬಂಧನೆ ಇರಬೇಕು. ಅದೇ ರೀತಿ, ಬಿಪಿಎಲ್ ಪಡಿತರ ಹೊಂದಿರಬೇಕು. ಸರಕಾರಿ ನೌಕರರು ಇರಬಾರದು, 10 ಎಕರೆಗಿಂತ ಅಧಿಕ ಕೃಷಿ ಭೂಮಿ ಇರಬಾರದು. ಬೇರೆ ಯೋಜನೆಗಳಲ್ಲಿ ಫಲಾನುಭವಿಗಳಾಗಿ ಇರಬಾರದು. ವಾರ್ಷಿಕ ಆದಾಯ 25ಸಾವಿರ ರೂ. ಕ್ಕಿಂತಲೂ ಹೆಚ್ಚಿಗೆ ಇರಬಾರದು. ಅದೇ ರೀತಿ, 5 ಲಕ್ಷ ರೂ.ಗಳಿಗಿಂತ ಅಧಿಕ ಆಸ್ತಿ ಇರಬಾರದು.

-ಗೃಹ ಜ್ಯೋತಿ ಯೋಜನೆ: 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಪಡೆಯಲು 10ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿರಬೇಕು. 200 ಯೂನಿಟ್‍ಗಿಂತ ಅಧಿಕ ವಿದ್ಯುತ್ ಬಳಕೆ ಮಾಡಿದರೆ, ಪೂರ್ಣ ಮೊತ್ತ ಪಾವತಿ ಮಾಡಬೇಕು. ಒಂದು ಮನೆಗೆ ಒಂದೇ ಯೋಜನೆ ಇರಬೇಕು. ವಾಣಿಜ್ಯ ಉದ್ದೇಶಗಳಿದ್ದರೆ ಇದರಲ್ಲಿ ವಿನಾಯಿತಿ ನೀಡಬಾರದು. ಬಳಸಿದ ಯೂನಿಟ್‍ಗೆ ಮಾತ್ರ ಉಚಿತ ನೀಡಿ, ನಿಗದಿತ ಶುಲ್ಕವಾದ 80 ಹಾಗೂ 100 ರೂ.ಗಳನ್ನು ಪಡೆಯಬೇಕು.

ಮಹಿಳೆಯರಿಗೆ ಉಚಿತ ಪ್ರಯಾಣ: ಈ ಯೋಜನೆಯನ್ನು ಪಡೆಯುವವರು 10 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರಬೇಕು. ರಾಜ್ಯದಲ್ಲಿ ಮಾತ್ರ ಸಾಮಾನ್ಯ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುವ ಎಲ್ಲ ಮಹಿಳೆಯರಿಗೂ ಗುರುತಿನ ಚೀಟಿಯನ್ನು ನೀಡಿ ಅದನ್ನು ತೋರಿಸಿದವರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಬಾರ್ ಕೋಡ್ ಮಾದರಿಯ ಗುರುತಿನ ಚೀಟಿ ನೀಡಬೇಕು. 18 ವರ್ಷ ಮೇಲ್ಪಟ್ಟವರನ್ನು ಮಾತ್ರ ಮಹಿಳೆಯರು ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

Similar News