ನೂತನ ಸಂಸತ್‌ಭವನಕ್ಕೆ ಅಂಟಿಕೊಂಡ ಕಳಂಕಗಳು!

Update: 2023-05-29 06:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಹತ್ತು ಹಲವು ಟೀಕೆ, ವಿಮರ್ಶೆಗಳ ನಡುವೆ ನೂತನ ಸಂಸತ್ ಭವನ ಉದ್ಘಾಟನೆಗೊಂಡಿದೆ.  ಭಾರತದ ಪಾಲಿಗೆ ಇದು ಮಹತ್ವದ ದಿನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಧುನಿಕ ದಿನಗಳ ಅಗತ್ಯಗಳನ್ನು ಈಡೇರಿಸುವ, ಸಕಲ ಸವಲತ್ತುಗಳನ್ನು, ಅನುಕೂಲಗಳನ್ನು ಹೊಂದಿರುವ ಅತ್ಯಾಧುನಿಕ ಸಂಸತ್ ಭವನವೊಂದು ಭಾರತದ ಅಗತ್ಯವಾಗಿತ್ತು ನಿಜ. ಆರ್ಥಿಕ ಹಿಂಜರಿತ, ಲಾಕ್‌ಡೌನ್, ಕೊರೋನ ನಾಶ ನಷ್ಟಗಳ ನಡುವೆ ಆತುರಾತುರವಾಗಿ   ನೂತನ ಸಂಸತ್ ಭವನವೊಂದರ ನಿರ್ಮಾಣದ ಆಗತ್ಯವಿತ್ತೆ ಎನ್ನುವ ಪ್ರಶ್ನೆಗಳ ನಡುವೆಯೇ ಈ ವೈಭವೋಪೇತವಾದ ಭವನ ಕೊನೆಗೂ ತಲೆ ಎತ್ತಿ ನಿಂತಿದೆ. ಇದರ ಲೋಕಾರ್ಪಣೆೆಯನ್ನು ಎಲ್ಲರ ಒಳಗೊಳ್ಳುವಿಕೆಯೊಂದಿಗೆ ನಡೆಸುವುದು ಪ್ರಧಾನಮಂತ್ರಿಯ ಹೊಣೆಗಾರಿಕೆಯಾಗಿತ್ತು.  ಯಾಕೆಂದರೆ ಸಂಸತ್‌ನ ಘನತೆಯು ಕಟ್ಟಡದ ಅದ್ದೂರಿತನವೋ ಅಥವಾ ಅದರೊಳಗಿರುವ ಅನುಕೂಲತೆಗಳನ್ನು ಅವಲಂಬಿಸಿಲ್ಲ. ಎಲ್ಲಿಯವರೆಗೆ ನಮ್ಮ ಸಂಸತ್ ಕಟ್ಟಡದೊಳಗೆ ಸಂವಿಧಾನದ ಹಿರಿಮೆ ಎತ್ತಿ ಹಿಡಿಯಲ್ಪಡುತ್ತದೆಯೋ ಅಲ್ಲಿಯವರೆಗೆ ಅದರ ಘನತೆ, ಗೌರವಗಳು ಜಗತ್ತಿನ ಮುಂದೆ ತಲೆಯೆತ್ತಿ ನಿಂತಿರುತ್ತವೆ. ಪ್ರಜಾಸತ್ತೆಯ ದೇಗುಲವೆಂದು ಸಂಸತನ್ನು ಬಣ್ಣಿಸುವುದು ಇದೇ ಕಾರಣಕ್ಕೆ. ಎಲ್ಲ ಜಾತಿ ಧರ್ಮ, ಪಕ್ಷ ಭೇದಗಳನ್ನು ಮೀರಿದ ಒಳಗೊಳ್ಳುವಿಕೆ ಸಂಸತ್‌ನಲ್ಲಿ ನಡೆಯುತ್ತದೆ. ಅಲ್ಲಿರುವವರು ದೇಶದ ದೊರೆಗಳಲ್ಲ, ಈ ದೇಶದ ಪ್ರಜೆಗಳ ಪ್ರತಿನಿಧಿಗಳು. ಆದುದರಿಂದ, ನೂತನ ಸಂಸತ್‌ಭವನ ಉದ್ಘಾಟನೆ ನಡೆಸುವಾಗ ಪ್ರಜಾಸತ್ತೆಯ ಮೌಲ್ಯಗಳಿಗೆ ಯಾವುದೇ ರೀತಿಯ ಧಕ್ಕೆ  ಬಂದರೆ ಅದು ಸಂಸತ್ ಭವನಕ್ಕೆ ಮಾಡುವ ಅವಮಾನವಾಗಿದೆ. ದುರದೃಷ್ಟವಶಾತ್, ಪ್ರಜಾಸತ್ತೆಗೆ ಕಳಂಕವಾಗಿದೆ ಎನ್ನುವ ಆರೋಪಗಳ ಜೊತೆಗೇ ಸಂಸತ್ ಭವನ ಲೋಕಾರ್ಪಣೆಗೊಂಡಿದೆ.

ಯಾವುದೇ ಬೃಹತ್ ಕಾರ್ಯಕ್ರಮಗಳು ಆಯೋಜನೆಗೊಳ್ಳುವಾಗ ಕೆಲವೊಮ್ಮೆ ಆಕಸ್ಮಿಕವಾಗಿ ಕೆಲವು ತಪ್ಪು ಗಳು ಜರುಗುವುದಿದೆ. ನೂತನ ಸಂಸತನ್ನು ರಾಷ್ಟ್ರಪತಿಯ ಬದಲಿಗೆ ಪ್ರಧಾನಿಯವರು ಉದ್ಘಾಟಿಸಲಿದ್ದಾರೆ ಎನ್ನುವುದು ಘೋಷಣೆ ಇಂತಹ ತಪ್ಪುಗಳಲ್ಲಿ ಒಂದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಸಂಸತ್‌ನ ಘನತೆಗೆ ತಕ್ಕಂತೆ ಅದನ್ನು ಉದ್ಘಾಟಿಸಬೇಕಾದವರು ಪ್ರಧಾನಿಯಲ್ಲ, ರಾಷ್ಟ್ರಪತಿ ಎನ್ನುವುದನ್ನು ವಿರೋಧಪಕ್ಷದ ನಾಯಕರು ಮಾತ್ರವಲ್ಲ, ಹಲವು ಸಂವಿಧಾನ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಕೆಲವರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋದರೆ, ವಿರೋಧಪಕ್ಷಗಳು ರಾಷ್ಟ್ರಪತಿ ಉದ್ಘಾಟಿಸುತ್ತಿಲ್ಲ ಎನ್ನುವ ಕಾರಣಕ್ಕೆ ಸಮಾರಂಭವನ್ನೇ ಬಹಿಷ್ಕರಿಸಿದರು. ಇಂತಹ ಸಂದರ್ಭದಲ್ಲಿ, ಕೇಂದ್ರ ಸರಕಾರ ತಕ್ಷಣ ತನ್ನ ನಿರ್ಧಾರವನ್ನು ಪುನರಾವಲೋಕನ ಮಾಡಬೇಕಾಗಿತ್ತು. ತನ್ನ ನಿಲುವು ಸರಿ ಎಂದೇ ಆಗಿದ್ದರೆ, ಅದನ್ನು ವಿರೋಧ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡುವುದು ಕೇಂದ್ರ ಸರಕಾರದ ಮುಖ್ಯವಾಗಿ ಪ್ರಧಾನಿಯ ಹೊಣೆಗಾರಿಕೆಯಾಗಿತ್ತು. ಆದರೆ ಎಲ್ಲರನ್ನು ಒಳಗೊಳ್ಳುವಂತೆ ಮಾಡಿ ನೂತನ ಸಂಸತ್ ಭವನವನ್ನು ಉದ್ಘಾಟಿಸುವುದು ಪ್ರಧಾನಿ ಮೋದಿಯವರಿಗೆ ಬೇಕಿರಲಿಲ್ಲ ಎನ್ನುವುದು ಲೋಕಾರ್ಪಣೆಯ  ಕಾರ್ಯಗಳನ್ನು ವೀಕ್ಷಿಸಿದ ಬಳಿಕ ದೇಶದ ಜನರಿಗೆ ಮನವರಿಕೆಯಾಗಿದೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಕೇಂದ್ರ ಸರಕಾರ ಪ್ರಜ್ಞಾಪೂರ್ವಕವಾಗಿಯೇ ಆಹ್ವಾನವನ್ನು ನೀಡಿರಲಿಲ್ಲ ಎನ್ನುವ ಅಂಶ, ಲೋಕಾರ್ಪಣೆಯ ಸಂದರ್ಭದಲ್ಲಿ  ಬೆಳಕಿಗೆ ಬಂದಿದೆ. ವಿರೋಧಪಕ್ಷಗಳ ನಾಯಕರು ಉದ್ಘಾಟನೆಗೆ ಭಾಗವಹಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ, ರಾಷ್ಟ್ರಪತಿಯವರನ್ನೂ ದೂರವಿಟ್ಟು  ನರೇಂದ್ರ ಮೋದಿಯವರು ತನ್ನ ಖಾಸಗಿ ನಿವಾಸವೆನ್ನುವ ರೀತಿಯಲ್ಲಿ ವೈದಿಕ ಸಂಪ್ರದಾಯಗಳ ಜೊತೆಗೆ ಸಂಸತ್‌ಭವನವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಸಂಸತ್ ಭವನ ಪ್ರತಿಪಾದಿಸುವ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೇಶದ ಪ್ರಜ್ಞಾವಂತರು ಆರೋಪಿಸುತ್ತಿದ್ದಾರೆ.

ರವಿವಾರ ಸಂಸತ್ ಭವನದಲ್ಲಿ ಲೋಕಾರ್ಪಣೆಯ ಸಂದರ್ಭದಲ್ಲಿ ನಡೆದಿರುವ ಧಾರ್ಮಿಕ ಆಚರಣೆಗಳು ಅಪ್ಪಟ ವೈದಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಿದ್ದವು.  ಇಂತಹ ಸಂಪ್ರದಾಯವಾದಿ ಬ್ರಾಹ್ಮಣರು ದಲಿತ ಸಮುದಾಯದಿಂದ ಬಂದ ರಾಷ್ಟ್ರಪತಿಯ ಉಪಸ್ಥಿತಿಯನ್ನು  ಸಹಿಸುವುದು ಕಷ್ಟವೆನ್ನುವ  ಕಾರಣಕ್ಕಾಗಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಮಾರಂಭದಿಂದ ಹೊರಗಿಡಲಾಗಿದೆ ಎನ್ನುವ ಆರೋಪಗಳು ಇದೀಗ ಕೇಳಿ ಬರುತ್ತಿವೆ. ಇದು ನಿಜವೇ ಆಗಿದ್ದರೆ, ನೂತನ ಸಂಸತ್ ಭವನದಲ್ಲಿ  ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಸಂವಿಧಾನಕ್ಕೆ  ಭಾರೀ ಕಳಂಕವನ್ನು ಎಸಗಲಾಗಿದೆ ಎಂದು ತಿಳಿಯಬೇಕಾಗುತ್ತದೆ. ಇಷ್ಟಕ್ಕೂ ಈ ದೇಶದಲ್ಲಿ ಹತ್ತು ಹಲವು ಬ್ರಾಹ್ಮಣರಲ್ಲೂ ಹತ್ತು ಹಲವು ಗುಂಪುಗಳಿವೆ. ಅವರ ಪೂಜಾ ವಿಧಿ ವಿಧಾನಗಳಲ್ಲಿಯೂ ವ್ಯತ್ಯಾಸಗಳಿವೆ. ಹೀಗಿರುವಾಗ, ಸಂಸತ್‌ನೊಳಗೆ ಒಂದು ನಿರ್ದಿಷ್ಟ  ಧಾರ್ಮಿಕ ವಿಧಿವಿಧಾನಗಳನ್ನು ಯಾವ ಮಾನದಂಡದಲ್ಲಿ ಆಚರಿಸಲಾಯಿತು ಎಂದು ದೇಶದ ಜನತೆ ಪ್ರಶ್ನಿಸುತ್ತಿದ್ದಾರೆ.  ತಮ್ಮ ತಮ್ಮ ದೇವಸ್ಥಾನದೊಳಗೆ ಜಾತೀಯತೆ, ಅಸ್ಪಶ್ಯತೆಗಳನ್ನು ಎತ್ತಿ ಹಿಡಿಯುವ ಇವರನ್ನು ಸಂಸತ್‌ಭವನದೊಳಗೆ ಕರೆಸಿ, ಈ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಯನ್ನು ಅವರ ಜಾತಿಯ ಕಾರಣಕ್ಕಾಗಿ ನೂತನ ಸಂಸತ್‌ಭವನ ಸಮಾರಂಭದಿಂದ ಹೊರಗೆ ನಿಲ್ಲಿಸುವ ಮೂಲಕ ನೂತನ ಸಂಸತ್ ಭವನ ಕಳಂಕಕ್ಕೀಡಾಗಿದೆ. ಇದು ನಿಜಕ್ಕೂ ದೇಶದ ಪಾಲಿಗೆ ಆಘಾತಕಾರಿಯಾಗಿದೆ.

ಒಂದೆಡೆ ಜಾತೀಯತೆಯ ಮೌಲ್ಯಗಳನ್ನು ನೂತನ ಸಂಸತ್‌ನಲ್ಲಿ ಎತ್ತಿ ಹಿಡಿಯಲಾಯಿತು ಮಾತ್ರವಲ್ಲ, ಇನ್ನೊಂದೆಡೆ ಸಂಸತ್‌ನಲ್ಲಿ  ಅಶೋಕನ ಬೌದ್ಧ ಹಿನ್ನೆಲೆಯಿಂದ ಬಂದ ಶಾಂತಿ, ಅಹಿಂಸೆಯ ಮೌಲ್ಯಗಳನ್ನು ಪಕ್ಕಕ್ಕೆ ತಳ್ಳಿ, ಆ ಜಾಗದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸುವ ಪ್ರಯತ್ನ ನಡೆಯಿತು. ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಜೊತೆಗೆ ಯಾವೊಂದು ಸಂಬಂಧವೂ ಇಲ್ಲದ, ಭಾರತ ಚರಿತ್ರೆಯಲ್ಲಿ ಯಾವ ಮಹತ್ವವನ್ನು ಪಡೆಯದ ಚೋಳರ ಕಾಲದ ‘ಸೆಂಗೊಲ್’ನ್ನು  ಸಮಾರಂಭದಲ್ಲಿ ವೈಭವೀಕರಿಸಲಾಗಿದೆ. ಸಂವಿಧಾನಕ್ಕೆ ಅಡ್ಡ ಬೀಳಬೇಕಾಗಿದ್ದ ಪ್ರಧಾನಿ ಮೋದಿಯವರು, ಈ ಸೆಂಗೊಲ್ ದಂಡಕ್ಕೆ ಅಡ್ಡ ಬಿದ್ದಿದ್ದಾರೆ. ಅಷ್ಟೇ ಅಲ್ಲ, ವೈದಿಕ ಆಚರಣೆಯ ಮೂಲಕ ಈ ದಂಡವನ್ನು ಮೋದಿಯವರಿಗೆ ಅರ್ಪಿಸಲಾಗಿದೆ. ಇದರ ಉದ್ದೇಶವಾದರೂ ಏನು? ಇದು ಏನನ್ನು ಸಂಕೇತಿಸುತ್ತದೆ? ನೆಹರು ಪ್ರಧಾನಿಯಾಗಿ ಆಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ತಮಿಳುನಾಡಿನಿಂದ ಬಂದ ತಂಡವೊಂದು ನೆಹರೂ ಅವರನ್ನು ಭೇಟಿ ಮಾಡಿದಾಗ ತಾವು ಸಿದ್ಧಪಡಿಸಿಕೊಂಡು ಬಂದ ಈ ದಂಡವನ್ನು  ಸಾಂಕೇತಿಕವಾಗಿ  ಅರ್ಪಿಸಿತ್ತು. ಇದರ ಹೊರತಾದ ಯಾವ ಚಾರಿತ್ರಿಕ ಹಿರಿಮೆಯೂ ದಂಡಕ್ಕಿಲ್ಲ. ಅದನ್ನು  ನೆಹರೂ ಅವರು ಎಲ್ಲೂ   ರಾಷ್ಟ್ರೀಯ ಸಂಕೇತವಾಗಿ ಬಿಂಬಿಸಿಲ್ಲ.  ಇದೀಗ ಈ ದಂಡವನ್ನು ಹೊರ ತೆಗೆದು ಪ್ರಧಾನಿ ಮೋದಿಯವರಿಗೆ ಅರ್ಪಿಸುವ ಉದ್ದೇಶವಾದರೂ ಏನಿತ್ತು? ಇದು ಪ್ರಧಾನಿ ಮೋದಿಯವರ ಪಟ್ಟಾಭಿಷೇಕ ಕಾರ್ಯಕ್ರಮವೆ? ಈ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ. ಇವೆಲ್ಲದರ ಜೊತೆಗೆ ಸಾವರ್ಕರ್ ಕ್ಷಮಾಪನೆಯ ಇತಿಹಾಸದ ಕಳಂಕವನ್ನೂ  ನೂತನ ಸಂಸತ್‌ಭವನಕ್ಕೆ ಅಂಟಿಸಿದ್ದಾರೆ. ಎಲ್ಲಕ್ಕಿಂತ ಖೇದಕರ ಸಂಗತಿಯೆಂದರೆ, ನೂತನ ಸಂಸತ್ ಭವನದ ಮುಂದೆ ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದ ಲೈಂಗಿಕದೌರ್ಜನ್ಯ ಸಂತ್ರಸ್ತ ಮಹಿಳಾ ಕುಸ್ತಿ ಪಟುಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿರುವ ಹೊತ್ತಿಗೆ, ಅತ್ತ ನೂತನ ಸಂಸತ್‌ಭವನದ ಅದ್ದೂರಿ ಸಮಾರಂಭ ನಡೆಯುತ್ತಿತ್ತು.  ಇವೆಲ್ಲವೂ ಭವಿಷ್ಯದಲ್ಲಿ ನೂತನ ಸಂಸತ್ ಭವನದಲ್ಲಿ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಯಾವ ಸ್ಥಿತಿ ಒದಗಲಿದೆ ಎನ್ನುವುದಕ್ಕೆ ಸಂಕೇತಗಳಾಗಿವೆ. ನೂತನ ಸಂಸತ್ ಭವನ ಈ ಕಾರಣಕ್ಕಾಗಿ ದೇಶದ ಜನರಲ್ಲಿ ಸಂಭ್ರಮಗಳನ್ನು  ತರದೆ, ಇನ್ನಷ್ಟು ಆತಂಕ, ಖಿನ್ನತೆಗಳಿಗೆ ಕಾರಣವಾಗಿದೆ.

Similar News