ಮೋದಿ ಆಡಳಿತದಿಂದ ವೇಗದ ಅಭಿವೃದ್ಧಿ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Update: 2023-05-29 12:13 GMT

ಬೆಂಗಳೂರು, ಮೇ 29: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.

ಸೋಮವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಭತ್ತು ವರ್ಷಗಳಲ್ಲಿ ಅಭಿವೃದ್ಧಿಯ ಭಾರಿ ಸಾಹಸವನ್ನು ಸಾಕಾರಗೊಳಿಸಿದ್ದಾರೆ. ನಿರಂತರ ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದಾಗಿತ್ತು. ‘ಸೆಂಗೋಲ್’ ಇದೆಯೆಂದು ಯಾರಿಗೂ ತಿಳಿದಿರಲಿಲ್ಲ. ಮೋದಿ ಅವರು ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆಯನ್ನು ಮೂಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿಜಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು. ಆದರೆ, ವಿಪಕ್ಷಗಳು ವಿದೇಶಿ ಲಸಿಕೆಗಳನ್ನು ಇಲ್ಲಿ ಬಿಕರಿ ಮಾಡಬೇಕೆಂದು ಆಶಿಸಿದ್ದವು ಎಂದು ಟೀಕಿಸಿದರು.

ಭಾರತ ದೂರದೃಷ್ಟಿ ಇರುವ ದೇಶವಾಗಿ ಬೆಳೆದಿದೆ. ನೀರು, ಶೌಚಾಲಯದ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿ. ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಪಾರ್ಲಿಮೆಂಟ್ ಹೌಸ್ ಒಂದೆಡೆ ಕಟ್ಟಿಸಿದ ಮೋದಿಜಿ ಅವರು, ಇನ್ನೊಂದೆಡೆ ಉಜ್ವಲ, ಜನ್‍ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ಸಕಾಲದಲ್ಲಿ ಯೋಜನೆಗಳ ಜಾರಿ ಆಗಿದೆ. ಹಿಂದೆ ಗರೀಬಿ ಹಠಾವೋ ಕೇವಲ ಮಾತಿನಲ್ಲಿತ್ತು. ಬಡತನ ದೂರ ಆಗಿರಲಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು. ಬಡತನ ದೂರ ಮಾಡಲು ಬಳಸುವ ಹಣ ಕೆಲವರ ಜೇಬು ಸೇರುತ್ತಿತ್ತು. ಪ್ರಧಾನಿಯವರು ಆರಂಭದಲ್ಲಿ ಜನ್‍ಧನ್ ಬ್ಯಾಂಕ್ ಖಾತೆ ಯೋಜನೆ ಆರಂಭಿಸಿದರು. ಆದರೆ, ಅದರ ಕುರಿತು ಋಣಾತ್ಮಕ ಮಾತುಗಳಿದ್ದವು. 100 ಕೋಟಿ ಜನರಿಗೆ ಕೇವಲ 12ಕೋಟಿ ಬ್ಯಾಂಕ್ ಖಾತೆಗಳಿದ್ದ ದಿನಗಳವು ಎಂದು ವಿವರ ನೀಡಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News