ಇನ್ನು ಮುಂದೆ ಎಲ್ಲ ಕಾಮಗಾರಿಗಳ ಬಗ್ಗೆ ವಿಡಿಯೋ ಸಮೇತ ವಿವರ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಕೆಶಿ ಸೂಚನೆ

''ಆಸ್ತಿ ತೆರಿಗೆ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿ''

Update: 2023-05-29 13:46 GMT

ಬೆಂಗಳೂರು, ಮೇ 29: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಸಂಬಂಧಿಸಿದಂತೆ ಎಲ್ಲ ಆಸ್ತಿಗಳ ವಿವರಗಳನ್ನು ಮ್ಯಾಪಿಂಗ್ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿರುವ ವಿವಿಧ ಇಲಾಖೆಯ ಕಾರ್ಯದ ಬಗ್ಗೆ ಪರಿಶೀಲಿಸಬೇಕು. ಮೊದಲಿಗೆ ಆಸ್ತಿ ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆಯ ಜಂಕ್ಷನ್ ಹಾಗೂ ರಾಜಕಾಲುವೆ ಕಾಮಗಾರಿಯ ಕಾಮಗಾರಿ ಪ್ರಾರಂಭದ ಮೊದಲು, ಕಾಮಗಾರಿ ಅಭಿವೃದ್ಧಿ, ಕಾಮಗಾರಿ ಸಂಪೂರ್ಣವಾಗಿ ಮುಗಿದ ಬಗ್ಗೆ ಛಾಯಾಚಿತ್ರ ಹಾಗೂ ವಿಡಿಯೋ ದಾಖಲಾತಿ ಸಮೇತ ವರದಿಯನ್ನು ಸಿದ್ಧಪಡಿಸಬೇಕು. ಐದು ವರ್ಷದಿಂದ ಪಾಲಿಕೆ ವತಿಯಿಂದ ನಡೆದ ಎಲ್ಲ ಕಾಮಗಾರಿಗಳ ಬಗ್ಗೆ ಪೂರ್ಣ ವಿವರವನ್ನು ನೀಡಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಪಾಲಿಕೆಯ ವಿಶೇಷ ಆಯುಕ್ತರು ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Similar News