ಬೆಂಗಳೂರು ಬದಲಾವಣೆಗೆ ಶೀಘ್ರದಲ್ಲೇ ಮಾಸ್ಟರ್ ಪ್ಲಾನ್ ರೂಪಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-05-29 14:12 GMT

ಬೆಂಗಳೂರು, ಮೇ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ‘ಭ್ರಷ್ಟಚಾರ ಮುಕ್ತ ಪಾಲಿಕೆ, ಜನಸ್ನೇಹಿ ಪಾಲಿಕೆ’ಯನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ನಗರದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕೆಲವು ಕಾಮಗಾರಿಗಳಲ್ಲಿ ನಕಲಿ ಬಿಲ್, ಕೆಲವು ಕಾಮಗಾರಿಗಳಲ್ಲಿ ಕೆಲಸ ಮಾಡದೆ ಬಿಲ್ ಪಡೆಯಲಾಗಿದೆ. ಹಾಗೆಯೇ ಒಂದೇ ಕಾಮಗಾರಿಗೆ ಎರಡು ಬಿಲ್ ಪಡೆಯಲಾಗಿದೆ. ಇದನ್ನೆಲ್ಲ ತನಿಖೆ ಮಾಡಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಮುಂದಿನ ನಾಲ್ಕು ತಿಂಗಳ ಮಳೆಗಾಲದಲ್ಲಿ ನಗರದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. 40ರಿಂದ 50 ಲಕ್ಷ ಮಂದಿ ನಗರದ ಹೊರಗಿನಿಂದ ಬಂದು ಜೀವನ ಮಾಡುತ್ತಿದ್ದಾರೆ. ಇವರೆಲ್ಲರಿಗೂ ನಾವು ಉತ್ತಮ ಸವಲತ್ತು ಒದಗಿಸಬೇಕಾಗಿದೆ ಎಂದರು.

ಬಿಬಿಎಂಪಿ ಹೆಚ್ಚು ಸರಕಾರದ ಮೇಲೆ ಅವಲಂಬನೆ ಆಗದೆ ತಮ್ಮ ಸಂಪನ್ಮೂಲ ತಾವೇ ಸಂಗ್ರಹಿಸಬೇಕು. ಸಂಪನ್ಮೂಲ ಸೋರಿಕೆ ತಡೆದು ಅಭಿವೃದ್ಧಿ ಮಾಡಬೇಕು. ಈ ಹಿಂದೆ ಕೇಂದ್ರ ಸರಕಾರದಿಂದ ಬರುತ್ತಿದ್ದ ನರ್ಮ್ ಯೋಜನೆಯ ಹಣಕಾಸಿನ ನೆರವು ಈಗ ಸಿಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ಬದಲಾವಣೆಗೆ ಮಾಸ್ಟರ್ ಪ್ಲಾನ್ ಶೀಘ್ರ ರೂಪಿಸುತ್ತೇವೆ.  ಪಾಲಿಕೆ ಜನಸ್ನೆಹಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಬಿಬಿಎಂಪಿಯಲ್ಲಿ ಶೇ.40 ಕಮಿಷನ್ ಕುರಿತು ಗುತ್ತಿಗೆದಾರರ ಜತೆ ಚರ್ಚೆ ಮಾಡುತ್ತೇನೆ. ಎಲ್ಲ ವರ್ಗದ ಜನರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಅವರು ವಿವರಿಸಿದರು.

ಬಿಬಿಎಂಪಿ ವಾರ್ಡ್‍ಗಳ ಮರುವಿಂಗಡನೆ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ವಾರ್ಡ್ ಮರುವಿಂಗಡನೆ ಪರಿಶೀಲನೆ ಮಾಡುತ್ತೇವೆ. ಶೀಘ್ರ ಪಾಲಿಕೆ ಚುನಾವಣೆ ನಡೆಸಲಾಗುವುದು. ಇದಕ್ಕೆ ಸಿದ್ಧವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

Similar News