ಸುಪ್ರೀಂ ಆದೇಶದ ಬಳಿಕ ಪಂಚಮಸಾಲಿ ವಿಚಾರಣೆ ಎಂದ ಹೈಕೋರ್ಟ್

Update: 2023-05-29 14:04 GMT

ಬೆಂಗಳೂರು, ಮೇ 29: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಪ್ರತಿಯನ್ನು ಹೈಕೋರ್ಟ್ ಪರಿಶೀಲನೆ ನಡೆಸಿತು. ಅಲ್ಲದೆ, ಮುಸ್ಲಿಮರ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಳಿಕ ಪಂಚಮಸಾಲಿ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ಮುಂದೂಡಿದೆ.

ಪಂಚಮಸಾಲಿ ಉಪ ಪಂಗಡಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ನೀಡಿದ್ದ ಮಧ್ಯಂತರ ವರದಿ ಕಾನೂನು ಬಾಹಿರ ಎಂದು ಘೊಷಣೆ ಮಾಡಲು ಕೋರಿ ಬೆಂಗಳೂರಿನ ಡಿ.ಜಿ.ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ಜುಲೈ 20ಕ್ಕೆ ಮುಂದೂಡಿತು.  

ಅಲ್ಲದೆ, ಕನ್ನಡ ಭಾಷೆಯಲ್ಲಿರುವ ವರದಿಯನ್ನು ಸರಕಾರ ಮತ್ತು ಅರ್ಜಿದಾರರಿಗೆ ನೀಡಲು ನ್ಯಾಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿತು. ಆಂಗ್ಲಭಾಷೆಗೆ ತರ್ಜುಮೆ ಮಾಡಿ ಸಲ್ಲಿಸಲು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ರಾಜ್ಯ ಸರಕಾರ 2ಬಿರಲ್ಲಿದ್ದ ಮುಸ್ಲಿಮ ಸಮುದಾಯಕ್ಕೆ ಮೀಸಲು ರದ್ದು ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಅರ್ಜಿ ವಿಚಾರಣೆ ತೀರ್ಮಾನ ಪರಿಗಣಿಸಿ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ಮುಂದೂಡಿತು.

ಸರಕಾರ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಅರ್ಜಿಯಲ್ಲಿ ಅಗತ್ಯ ಮುಂದಿನ ಎರಡು ವಾರಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವುದಕ್ಕೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಇದೇ ವೇಳೆ ಅವಕಾಶ ನೀಡಿತು. ಅದಾದ ಬಳಿಕ ಎರಡು ವಾರಗಳಲ್ಲಿ ಸರಕಾರ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.  

Similar News