ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ಸಹಕಾರ ದೇಶಕ್ಕೆ ನೀಡುವ ಸೇವೆ: ಯು.ಟಿ. ಖಾದರ್

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ

Update: 2023-05-29 14:43 GMT

ಮುಲ್ಕಿ: ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ಸಹಕಾರ ದೇಶಕ್ಕೆ ನೀಡುವ ಸೇವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ‌.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಮುಲ್ಕಿ ಬಳಿಯ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ, ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಂತ್ರಿಗಳು, ಮಂತ್ರಿಮಂಡಲ ಬಲಿಷ್ಠವಾಗಿದ್ದರೆ ಸಾಲದು, ಶಾಲೆಗಳಲ್ಲಿ ಕಲಿತುವ ಮೈದಾನದಲ್ಲಿ ಬೆರೆಯುವ ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಎಂದರು.

ಉಳುವವನೇ ಹೊಲದ ಒಡೆಯ ಕಾನೂನು ಬಂದ ಸಂದರ್ಭದಲ್ಲಿ ತಮ್ಮ ಎಲ್ಲಾ ಸಂಪತ್ತುಗಳನ್ನು ಕಳೆದುಕೊಂಡಿ ದ್ದರೂ ಮತ್ತೆ ಪುಟಿದೆದ್ದು, ಸಾಮಾಜಿಕ ಚಿಂತನೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಬಂಟರ ಕೆಲಸ ಶ್ಲಾಘನೀಯ ಎಂದರು.

ವಿಧಾನಸಭಾಧ್ಯಕ್ಷನಾಗಿದ್ದರೂ ನನ್ನ ಜಿಲ್ಲೆಗೆ ನಾನು ಎಂದಿಗೂ ಯು.ಟಿ.ಖಾದರ್ ಅಷ್ಟೇ. ನಾನು ಎಂದಿಗೂ ಜನರೊಂದಿಗೆ ಇರುತ್ತೇನೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಬಳಿಕ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಭೂಮಿಗೆ ಬಿದ್ದ ಬೆವರ ಹನಿ ವ್ಯರ್ಥವಾಗಲ್ಲ. ಅದರ ಸಾವಿರಪಟ್ಟು ಹೆಚ್ವಿನ ಫಲವನ್ನು ದೇವರು ನೀಡುತ್ತಾನೆ ಎಂದರು.

ಉಳುವವನೇ ಹೊಲದ ಒಡೆಯ ಕಾನೂನು ಬಂಟರಲ್ಲಿ ಛಲತುಂಬಿ ಅವರನ್ನು ಬಾನೆತ್ತರಕ್ಕೆ ಏರುವಂತೆ ಮಾಡಿದೆ ಎಅಮದ ಅವರು, ಬಂಟ ಸಮುದಾಯದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು ಎಂದು ಅವರು ಅಭಿಪ್ರಾಯಿಸಿದರು.
ಎಂಜಿಆರ್ ಸಮೂಹ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ವಹಿಸಿದ್ದರು‌. 

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಒಕ್ಕೂಟದ ಪೋಷಕರಾದ ಮಹಾದಾನಿ  ಕನ್ಯಾನ ಸದಾಶಿವ ಶೆಟ್ಟಿ, ಆನಂದ ಶೆಟ್ಟಿ ತೋನ್ಸೆ,  ಪ್ರವೀಣ್ ಭೋಜ ಶೆಟ್ಟಿ,  ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ರವಿನಾಥ್ ಶೆಟ್ಟಿ ಅಂಕಲೇಶ್ವರ್, ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ, ಎಂ ಕರುಣಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು‌. 

ಇದೇ ಸಂದರ್ಭ ವಿಧಾನಸಭಾಧ್ಯಕ್ಷ ಯು‌.ಟಿ. ಖಾದರ್ ಮತ್ತು ಕಾಪು ವಿ.ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಈ ಸಾಲಿನ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗೈದ ಬಂಟ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಇದೇ ಸಂದರ್ಭ ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಉಡುಪಿ, ಡಾ. ನಿರಂಜನ್ ಶೆಟ್ಟಿ ಕೆದೂರು, ದಯಾಮಣಿ ಶೆಟ್ಟಿ ಎಕ್ಕಾರ್, ನೀತಾ ರಾಜೇಶ್ ಶೆಟ್ಟಿ ಹಿರಿಯಡ್ಕ, ಅರ್ಪಿತಾ ಶೆಟ್ಟಿ ಕಟಪಾಡಿ, ಹಿರಿಯ ಪತ್ರಕರ್ತರಾದ ಆರ್. ರಾಮಕೃಷ್ಣ, ಮುಹಮ್ಮದ್ ಆರೀಫ್ ಪಡುಬಿದ್ರೆ, ನಿತಿನ್ ಸಾಲ್ಯಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು.

Similar News