ಜೀವನಾಂಶ ವಿಚಾರಣೆ ವೇಳೆ ವಿವಾಹ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ: ಹೈಕೋರ್ಟ್

Update: 2023-05-29 15:04 GMT

ಬೆಂಗಳೂರು, ಮೇ 29: ಕೌಟುಂಬಿಕ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದಸಂದರ್ಭದಲ್ಲಿ ನ್ಯಾಯಾಲಯಗಳು ವಿವಾಹ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಈ ಸಂಬಂಧ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ವಿಜಯಪುರ ಜಿಲ್ಲೆಯ ಹರೀಶ್ ಮತ್ತು ಲಕ್ಷ್ಮೀ(ಹೆಸರು ಬದಲಿಸಲಾಗಿದೆ) 2008ರಲ್ಲಿ ವಿವಾಹವಾಗಿದ್ದರು. 2013ರಲ್ಲಿ ಜೆಎಂಎಫ್‍ಸಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಲಕ್ಷ್ಮೀ, ವಿವಾಹದ ವೇಳೆ ಪತಿಗೆ ತಮ್ಮ ಪೋಷಕರು ವರದಕ್ಷಿಣೆಯನ್ನೂ ನೀಡಿದ್ದರೂ ಪುನಃ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ತಾಯಿ ಮತ್ತು ಸಹೋದರಿಯ ಪ್ರಚೋಚನೆಯಿಂದ ಪತಿ ನನ್ನನ್ನು ಮನೆಯಿಂದ ಹೊರ ಹಾಕಿದ್ದರು.

ಇದರಿಂದ, ನನಗೆ ಜೀವನಾಂಶ ಪಾವತಿಸಲು ಪತಿಗೆ ನಿರ್ದೇಶಿಸಬೇಕು ಎಂದು ಕೋರಿ ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. 

ಈ ಪ್ರಕರಣದಲ್ಲಿ ವಿಜಯಪುರ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಅಧಿಕಾರ ವ್ಯಾಪ್ತಿ ಮೀರಿ ವಿವಾಹದ ಸಿಂಧುತ್ವದ ಬಗ್ಗೆ ತೀರ್ಮಾನಿಸಿ, ಜೀವನಾಂಶ ಪಾವತಿಸುವ ಕುರಿತಂತೆ ವಿಜಯಪುರ ವಿಚಾರಣಾ ನ್ಯಾಯಾಲಯ(ಜೆಎಂಎಫ್‍ಸಿ) ಹೊರಡಿಸಿದ್ದ ಆದೇಶ ರದ್ದುಪಡಿಸಲು ಅರ್ಹವಾಗಿದೆ ಎಂದು ನಿರ್ಧರಿಸಿತು.

ಅಂತಿಮವಾಗಿ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್, ಪತ್ನಿಗೆ ಮಾಸಿಕ 3 ಸಾವಿರ ರೂ.ಜೀವನಾಶ ಪಾವತಿಸುವಂತೆ ಹರೀಶ್‍ಗೆ 2016ರಲ್ಲಿ ವಿಜಯಪುರ ಜೆಎಂಎಫ್‍ಸಿ ಕೋರ್ಟ್ ನೀಡಿದ್ದ ಆದೇಶವನ್ನು ಕಾಯಂಗೊಳಿಸಿದೆ.  

Similar News